Advertisement

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಬಿರುಸು

10:53 PM Sep 27, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಜೋರಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದು, ಸಿದ್ದರಾಮಯ್ಯ ಬಣ ಪ್ರತ್ಯೇಕ ಸಭೆ ನಡೆಸುವ ಮೂಲಕ ಮುಂದಿನ ಕಾರ್ಯತಂತ್ರ ರೂಪಿಸಿದೆ. ಈ ನಡುವೆ ಪಕ್ಷದಲ್ಲಿ ಬಣಗಳಿರುವುದನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಒಪ್ಪಿಕೊಂಡಿದ್ದಾರೆ. ಬಣ ರಾಜಕೀಯ ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ನಲ್ಲಿ ಬಣಗಳಿವೆ. ಬಣಗಳಿದ್ದರೆ ಪಕ್ಷದಲ್ಲಿ ಆಂತರಿಕ ತೇಜಸ್ಸು ಹೆಚ್ಚಿರುತ್ತದೆ ಎಂದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಕಾಂಗ್ರೆಸ್‌ನಲ್ಲಿ ಬಣಗಳಿರುವುದು ನಿಜ. ಆದರೆ, ಎಷ್ಟು ಬಣಗಳು ಇದೆ ಎಂದು ಹೇಳುವುದಿಲ್ಲ. ಸಣ್ಣವರದು, ದೊಡ್ಡವರದು, ಒನ್‌ ಮ್ಯಾನ್‌ ಆರ್ಮಿ ಎಲ್ಲಾ ರೀತಿಯ ಬಣಗಳಿವೆ. ಆದರೆ, ಅವು ಸಕಾರಾತ್ಮಕವಾಗಿ ಕಾರ್ಯ ನಿರ್ವಹಿಸಿದರೆ ಪಕ್ಷದ ಸಂಘಟನೆಗೆ ಅನುಕೂಲವಾಗುತ್ತದೆ. ಹೀಗಾಗಿ, ನಕಾರಾತ್ಮಕವಾಗಿ ಕಾರ್ಯ ಮಾಡದಿದ್ದರೆ ಸಾಕು ಎಂದು ಹೇಳಿದರು.

ಹಿರಿಯರನ್ನು ಕಡೆಗಣಿಸಿಲ್ಲ: ಪಕ್ಷದಲ್ಲಿ ಯಾವುದೇ ಹಿರಿಯರನ್ನು ಕಡೆಗಣಿಸಿಲ್ಲ. ಪ್ರವಾಹ ಬಂದಾಗ ಎಚ್‌.ಕೆ.ಪಾಟೀಲ್‌, ಆರ್‌.ವಿ.ದೇಶಪಾಂಡೆ, ಎಚ್‌.ಸಿ. ಮಹದೇವಪ್ಪ ಸೇರಿ ಹಿರಿಯರನ್ನು ಪಕ್ಷಕ್ಕೆ ಬಳಸಿಕೊಂಡಿದ್ದೇವೆ. ಅದೇ ರೀತಿ ಚುನಾವಣಾ ವೀಕ್ಷಕರಾಗಿಯೂ ಸತೀಶ್‌ ಜಾರಕಿಹೊಳಿ, ಎಂ.ಬಿ.ಪಾಟೀಲ್‌, ಯು.ಟಿ.ಖಾದರ್‌, ಎಂ. ಕೃಷ್ಣಪ್ಪ, ರಾಮಲಿಂಗಾರೆಡ್ಡಿ ಸೇರಿ ಪಕ್ಷದಲ್ಲಿ ಕೆಲಸ ಮಾಡುವವರನ್ನು ಬಳಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣಾ ಸಮಿತಿ ಸಭೆಯಲ್ಲಿ ಹಿರಿಯರ ಬಗ್ಗೆ ಬಿ.ಕೆ.ಹರಿಪ್ರಸಾದ್‌ ಹಾಗೂ ಕೆ.ಎಚ್‌.ಮುನಿಯಪ್ಪ ಆರೋಪ ಮಾಡಿರುವುದನ್ನು ತಳ್ಳಿ ಹಾಕಿದ ಅವರು, ಪ್ರಾಥಮಿಕ ಹಂತದಲ್ಲಿ ಅಭ್ಯರ್ಥಿಗಳ ಆಯ್ಕೆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರನ್ನು ಆಹ್ವಾನಿಸಲಿಲ್ಲ. ಅಂತಿಮವಾಗಿ ಅವರ ಒಪ್ಪಿಗೆ ಪಡೆಯುವ ಸಲುವಾಗಿಯೇ ಚುನಾವಣಾ ಸಮಿತಿ ಸಭೆ ಕರೆಯಲಾಗಿತ್ತು. ಆದ್ದರಿಂದ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.

ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಅವರ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಠಿಸಲಾಗುತ್ತಿದೆ. ಅವರು ಪ್ರತಿದಿನ ನನ್ನ ಸಂಪರ್ಕದಲ್ಲಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅವರು ಚಿಕ್ಕಮಗಳೂರಿಗೆ ತೆರಳಿದ್ದರಿಂದ ಸಭೆಗೆ ಹಾಜರಾಗಿರಲಿಲ್ಲ ಎಂದು ಹೇಳಿದರು.

Advertisement

ಪತ್ನಿ ಟ್ವೀಟ್‌ಗೆ ಸಮರ್ಥನೆ: ಇದೇ ವೇಳೆ, ತಮ್ಮ ಪತ್ನಿ ಟಬು ಅವರು ಪಕ್ಷದಲ್ಲಿ ಹಿತ್ತಾಳೆ ಕಿವಿಯವರು ಇದ್ದಾರೆ. ಯುವಕರನ್ನು ಬೆಳೆಯಲು ಬಿಡುತ್ತಿಲ್ಲ ಎಂದು ಟ್ವೀಟ್‌ ಮೂಲಕ ಮಾಡಿರುವ ಆರೋಪವನ್ನು ಅವರು ಸಮರ್ಥಿಸಿಕೊಂಡರು. ಅವರು ಪಕ್ಷದ ಸದಸ್ಯರಲ್ಲ. ಪಕ್ಷದ ಹಿತ ಬಯಸುವವರು. ಅದಕ್ಕೆ ಆ ರೀತಿ ಹೇಳಿದ್ದಾರೆ ಎಂದರು.

ಚುನಾವಣಾ ಆಯೋಗ ಬಿಜೆಪಿ ಏಜೆಂಟ್‌
ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಅನರ್ಹತೆಗೊಂಡ ಶಾಸಕರ ಪ್ರಕರಣದಲ್ಲಿ ಬಿಜೆಪಿ ಏಜೆಂಟ್‌ ರೀತಿ ವರ್ತಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿದ್ದು, ಅನರ್ಹತೆಗೊಂಡವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನೋಟಿಸ್‌ ಇಲ್ಲದಿದ್ದರೂ ಸ್ವಯಂ ಪ್ರೇರಿತವಾಗಿ ತಮ್ಮ ವಕೀಲರ ಮೂಲಕ ಹೇಳಿಕೆ ನೀಡಿ, ಯಾವುದೇ ಕಾರಣಕ್ಕೂ ಚುನಾವಣೆ ನಿಲ್ಲಿಸಲು ಆಗುವುದಿಲ್ಲ. ಅನರ್ಹರು ಚುನಾವಣೆ ಸ್ಪರ್ಧೆಗೆ ತಮ್ಮ ಆಕ್ಷೇಪವಿಲ್ಲ ಎಂದು ಹೇಳಿದ್ದರು. ಆದರೆ, ಅದೇ ಆಯೋಗದ ವಕೀಲರು ಅನರ್ಹರ ಪ್ರಕರಣ ಮುಕ್ತಾಯವಾಗುವವರೆಗೂ ಚುನಾವಣೆ ಮುಂದೂಡುತ್ತೇವೆಂದು ಹೇಳುತ್ತಾರೆ.

ಹೊಂದಾಣಿಕೆ ಸಂಕೇತ: ಸುಪ್ರೀಂಕೋರ್ಟ್‌ ಸ್ಪೀಕರ್‌ ಆಗಿದ್ದ ರಮೇಶ್‌ಕುಮಾರ್‌ ಅವರ ಆದೇಶ ರದ್ದು ಮಾಡಿಲ್ಲ. ಅಲ್ಲದೇ ಅನರ್ಹತೆ ಕುರಿತು ಯಾವುದೇ ಆದೇಶ ನೀಡಿಲ್ಲ. ಚುನಾವಣಾ ಆಯೋಗ ಚುನಾವಣೆ ಮುಂದೂಡಲು ರಾಷ್ಟ್ರಪತಿ ಒಪ್ಪಿಗೆಯನ್ನೂ ನೀಡಿಲ್ಲ. ಆಯೋಗ ಅದ್ಯಾವುದನ್ನೂ ಪರಿಗಣಿಸದೇ ಚುನಾವಣೆ ಮುಂದೂ ಡುವ ನಿರ್ಧಾರ ತೆಗೆದುಕೊಂಡಿರುವುದು ಬಿಜೆಪಿ ಜತೆಗೆ ಹೊಂದಾಣಿಕೆ ಮಾಡಿಕೊಂಡಿದೆ ಎನ್ನುವುದರ ಸಂಕೇತ. ಇಸಿ, ಇಡಿ, ಸಿಬಿಐ, ಆರ್‌ಬಿಐ, ಪ್ರಸ್‌ ಕೌನ್ಸಿಲ್‌ ಆಫ್ ಇಂಡಿಯಾ ಎಲ್ಲವೂ ಕೇಂದ್ರ ಸರ್ಕಾರದ ಜತೆ ಹೊಂದಾಣಿಕೆ ಮಾಡಿಕೊಂಡಿವೆ. ಸ್ವಾಯತ್ತ ಸಂಸ್ಥೆಗಳು ಹೊಂದಾಣಿಕೆಗೆ ಮುಂದಾದರೆ ಕೆಲಸ ಮಾಡುವುದಾದರೂ ಹೇಗೆ ಎಂದು ದಿನೇಶ್‌ ಪ್ರಶ್ನಿಸಿದರು.

“ದಿನೇಶ್‌ ಸಿದ್ದರಾಮಯ್ಯನ ಚೇಲಾ’
ಬೆಂಗಳೂರು: ಅನರ್ಹ ಶಾಸಕ ಎಸ್‌.ಟಿ. ಸೋಮಶೇಖರ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನಡುವೆ ಮಾತಿನ ವಾಕ್ಸಮರ ನಡೆದಿದ್ದು, ಅನರ್ಹತೆಗೊಂಡವರು ಪಕ್ಷ ದ್ರೋಹಿಗಳು ಎಂದು ದಿನೇಶ್‌ ಹೇಳಿಕೆಗೆ, ದಿನೇಶ್‌ ಗುಂಡೂರಾವ್‌ ಅಯೋಗ್ಯ, ಸಿದ್ದರಾಮಯ್ಯನ ಚೇಲಾ’ ಎಂದು ಸೋಮಶೇಖರ್‌ ಹರಿಹಾಯ್ದಿದ್ದಾರೆ.

ನಾವು ದೇಶ ದ್ರೋಹದ ಕೆಲಸ ಮಾಡಿದ್ದೀವಾ? ಅನರ್ಹತೆಗೊಂಡವರ ಬಗ್ಗೆ ಮೇಲಿಂದ ಮೇಲೆ ಮಾತನಾಡುವುದು ಬೇಡ. ನಾವೂ ತಿರುಗಿ ಬೀಳಬೇಕಾಗುತ್ತದೆ. ಪಕ್ಷ ವಿರೋಧಿಗಳನ್ನು ಇಟ್ಟುಕೊಂಡು ಸಭೆ ಮಾಡುತ್ತೀರಿ. ಹಿರಿಯ ಕಾಂಗ್ರೆಸ್‌ ನಾಯಕರನ್ನು ಕಡೆಗಣಿಸುತ್ತೀರಿ. ಚುನಾವಣಾ ಸಮಿತಿ ಸಭೆಯಲ್ಲಿ ಕೆ.ಎಚ್‌.ಮುನಿಯಪ್ಪ ಹಾಗೂ ಬಿ.ಕೆ. ಹರಿಪ್ರಸಾದ್‌ ಪ್ರಶ್ನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸೋಮಶೇಖರ್‌ ಹೇಳಿದ್ದಾರೆ.

ದಿನೇಶ್‌ ಗುಂಡೂರಾವ್‌ಗೆ ಮಾನ ಮರ್ಯಾದೆ ಇಲ್ಲ. ರಿಜ್ವಾನ್‌, ಕೃಷ್ಣಬೈರೇಗೌಡರನ್ನು ಇಟ್ಟುಕೊಂಡು ಪಕ್ಷ ನಡೆಸುತ್ತಿರುವ ಅವರಿಗೆ ತಾಕತ್ತಿದೆಯಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಾವು ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದೇವೆ. ನಾವು ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಯಾವ ಪಕ್ಷವನ್ನೂ ಸೇರಿಲ್ಲ. ನಮ್ಮನ್ನು ಉಚ್ಛಾಟನೆ ಮಾಡುವ ಶಕ್ತಿ ಯಾರಿಗಿದೆ ಎಂದು ಪ್ರಶ್ನಿಸಿದ್ದಾರೆ.

ದಿನೇಶ ಗುಂಡೂರಾವ್‌ ತಿರುಗೇಟು: ಅನರ್ಹ ಶಾಸಕರು ಈಗಲೂ ಅತೃಪ್ತರಾಗಿ ದ್ದಾರೆ. ಜತೆಗೆ ಅತಂತ್ರರಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂದು ಅವರಿಗೇ ಗೊತ್ತಿಲ್ಲದಂತಾಗಿ, ವೈಯಕ್ತಿಕ ಆರೋಪ ಮಾಡುತ್ತಿದ್ದಾರೆ. ಸೋಮಶೇಖರ್‌ ಅವರು ರಾಜೀನಾಮೆ ನೀಡಿದ ತಕ್ಷಣ ಪ್ರಬಲ ಖಾತೆ ತೆಗೆದುಕೊಂಡು ಮಂತ್ರಿ ಆಗುತ್ತೇನೆಂದು ಕನಸು ಕಂಡಿದ್ದರು. ಅವರ ಕನಸು ಸಾಕಾರಗೊಂಡಿಲ್ಲ. ಅವರು ಬಿಜೆಪಿ ಟ್ರ್ಯಾಪ್‌ಗೆ ಬಲಿಯಾಗಿ ಭ್ರಮೆಯಲ್ಲಿದ್ದಾರೆ. ಅವರನ್ನು ನೋಡಿ ಪಾಪ ಎನಿಸುತ್ತಿದೆ. ಇಲ್ಲಿ ರಾಜನಂತೆ ಇದ್ದರು ಅಲ್ಲಿ ಹೋಗಿ ದರಿದ್ರರು ಎನಿಸಿಕೊಂಡಿದ್ದಾರೆಂದು ತಿರುಗೇಟು ನೀಡಿದ್ದಾರೆ.

ನಾನು ಯಾರ ಚೇಲಾ ಅಲ್ಲ: ಕಾಂಗ್ರೆಸ್‌ ಪಕ್ಷದ ಪರ ಕೆಲಸ ಮಾಡುತ್ತೇನೆ. ಸಿದ್ದರಾಮಯ್ಯ ಪರವಾಗಿಯೂ ಇಲ್ಲ. ಪರಮೇಶ್ವರ್‌ ಪರವಾಗಿಯೂ ಇಲ್ಲ. ಡಿಕೆಶಿ ಪರವಾಗಿಯೂ ಇಲ್ಲ. ಎಷ್ಟೋ ವಿಷಯಗಳಲ್ಲಿ ಸಿದ್ದರಾಮಯ್ಯ ನಿರ್ಧಾರವನ್ನು ನಾನು ಪ್ರಶ್ನೆ ಮಾಡಿದ್ದೇನೆ. ಪಕ್ಷದ ಕೆಲಸಕ್ಕಾಗಿ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದೇನೆ. ಪಕ್ಷದ ಹೈಕಮಾಂಡ್‌ ಹೇಳುವವರೆಗೂ ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡುತ್ತೇನೆ ಎಂದರು.

ಜೆಡಿಎಸ್‌ನವರು ತಮ್ಮ ಪಕ್ಷದ ಮೂವರು ಶಾಸಕರಿಗೆ ಹೇಳಿಕೊಳ್ಳಲಿ. ನಾವು ಕಾಂಗ್ರೆಸ್‌ ಶಾಸಕರು ನಮ್ಮ ಬಗ್ಗೆ ಆರೋಪ ಮಾಡುವುದು ಸರಿಯಲ್ಲ. ನಮಗೂ ಅವರ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಕಾಂಗ್ರೆಸ್‌ನಲ್ಲಿಯೇ ಇದ್ದೇವೆ. ನಮ್ಮನ್ನು ಉಚ್ಛಾಟಿಸುವ ಧೈರ್ಯ ಯಾರಿಗಿದೆ.
-ಎಸ್‌.ಟಿ.ಸೋಮಶೇಖರ್‌, ಅನರ್ಹ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next