Advertisement
ಕಲಬುರಗಿ: ಕಲ್ಯಾಣ ಕರ್ನಾಟಕದ ಕೇಂದ್ರಬಿಂದು ಕಲಬುರಗಿ ರಾಜಕೀಯ ಶಕ್ತಿ ಕೇಂದ್ರ. ಈಗ ರಾಜ್ಯ ಹಾಗೂ ಕೇಂದ್ರದ ಹಾಟ್‌ಸ್ಪಾಟ್. ಮಾಜಿ ಮುಖ್ಯಮಂತ್ರಿಗಳಾದ ವೀರೇಂದ್ರ ಪಾಟೀಲ್ ಹಾಗೂ ಧರ್ಮಸಿಂಗ್ ಈ ಜಿಲ್ಲೆಯವರೇ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿರುವ ಡಾ| ಮಲ್ಲಿ ಕಾರ್ಜುನ ಖರ್ಗೆ ತವರು ಜಿಲ್ಲೆಯೂ ಇದೇ.
Related Articles
ಭೀಮಾ ತೀರದ ಅಫಜಲಪುರ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಖ್ಯಾತಿ ಪಡೆದಿದೆ. 1957ರಿಂದ ಇದುವರೆಗೆ 14 ಚುನಾವಣೆ ಕಂಡಿರುವ ಈ ಕ್ಷೇತ್ರದಲ್ಲಿ ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ ಆರು ಬಾರಿ ಗೆದ್ದಿದ್ದಾರೆ. ಹಾಲಿ ಶಾಸಕ ಕಾಂಗ್ರೆಸ್‌ನ ಎಂ.ವೈ. ಪಾಟೀಲ್ ಮೂರು ಬಾರಿ ಜಯಗಳಿಸಿದ್ದಾರೆ. 1957 ಹಾಗೂ 1962ರಲ್ಲಿ ಅಣ್ಣಾರಾವ್ ಬಸಪ್ಪ ಗೆದ್ದರೆ, 1967ರಲ್ಲಿ ಎನ್.ಎಸ್. ಪಾಟೀಲ್, 1972ರಲ್ಲಿ ದಿಗಂಬರಾವ್ ಬಲವಂತರಾವ್ ಹಾಗೂ 1983ರಲ್ಲಿ ಹಣಮಂತರಾವ್ ದೇಸಾಯಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಜೆ.ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾಗಿದ್ದ ಮಾಲೀಕಯ್ಯ ಗುತ್ತೇದಾರ ಸತತ ನಾಲ್ಕು ಬಾರಿ ಗೆದ್ದಿರುವುದು ಈವರೆಗಿನ ದಾಖಲೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ 9 ಬಾರಿ, ಜನತಾಪಕ್ಷ ಹಾಗೂ ಜೆಡಿಎಸ್ ತಲಾ ಎರಡು, ಕೆಸಿಪಿ ಒಂದು ಬಾರಿ ಗೆದ್ದಿದೆ. ಒಟ್ಟಾರೆ ಈ ಕ್ಷೇತ್ರ ಮಾಲೀಕಯ್ಯ ಗುತ್ತೇದಾರ ಹಾಗೂ ಹಾಲಿ ಶಾಸಕ ಎಂ.ವೈ. ಪಾಟೀಲ್‌ಗೆ ಮಣೆ ಹಾಕಿದ್ದೇ ಹೆಚ್ಚು. ಬಿಜೆಪಿ ಖಾತೆಯನ್ನೇ ತೆರೆದಿಲ್ಲ.
Advertisement
ಜೇವರ್ಗಿಜೇವರ್ಗಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸತತ ಎಂಟು ಬಾರಿ ಗೆದ್ದ ಕ್ಷೇತ್ರ. ಕಾಂಗ್ರೆಸ್‌ನ ಭದ್ರಕೋಟೆ. 1972ರಿಂದ 2004ರವರೆಗೆ ಧರ್ಮಸಿಂಗ್ ಗೆಲುವು ಸಾಧಿಸುತ್ತಾ ಬಂದು ತದನಂತರ ಮುಖ್ಯಮಂತ್ರಿಯಾದರು. 2008ರಲ್ಲಿ ಸೋತರು. ಈಗ ಅವರ ಮಗ ಡಾ| ಅಜಯಸಿಂಗ್ ಸತತ ಎರಡು ಬಾರಿ ಕಾಂಗ್ರೆಸ್‌ನಿಂದ ಶಾಸಕರಾಗಿ ಆಯ್ಕೆಯಾಗಿ ಮುನ್ನಡೆದಿದ್ದಾರೆ. ಈ ನಡುವೆ 2008ರಲ್ಲಿ ಕೇವಲ 52 ಮತಗಳಿಂದ ಗೆದ್ದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ(ಬಿಜೆಪಿ), 1957ರಲ್ಲಿ ಶರಣಗೌಡ ಸಿದ್ರಾಮಪ್ಪ (ಪಕ್ಷೇತರ), 1962ರಲ್ಲಿ ನೀಲಕಂಠಪ್ಪ ಶರಣಪ್ಪ (ಕಾಂಗ್ರೆಸ್) ಹಾಗೂ 1967ರಲ್ಲಿ ಎನ್. ಸಿದ್ರಾಮಗೌಡ (ಕಾಂಗ್ರೆಸ್) ಈ ಕ್ಷೇತ್ರ ಪ್ರತಿನಿಧಿಸಿದ ಇತರ ಶಾಸಕರು. ಒಟ್ಟಾರೆ ಎರಡು ಬಾರಿ ಸ್ವತಂತ್ರ ಹಾಗೂ ಒಂದು ಬಾರಿ ಬಿಜೆಪಿ ಗೆದ್ದಿದ್ದನ್ನು ಬಿಟ್ಟರೆ ಉಳಿದ 11 ಬಾರಿ ಈ ಕ್ಷೇತ್ರ ಕಾಂಗ್ರೆಸ್ ಪಕ್ಷಕ್ಕೇ ಒಲಿದಿದೆ. ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರಗಳು ಎರಡೂ¾ರು ತಾಲೂಕುಗಳನ್ನು ಒಳಗೊಂಡು ರಚನೆಯಾಗಿದ್ದರೆ; ಜೇವರ್ಗಿ ಸಂಪೂರ್ಣ ತಾಲೂಕು ವ್ಯಾಪ್ತಿ ಹೊಂದಿದ ಕ್ಷೇತ್ರ. ಸೇಡಂ
|1957ರಲ್ಲಿ ದ್ವಿಸದಸ್ಯತ್ವ ಹೊಂದಿದ್ದ ಸೇಡಂ ಕ್ಷೇತ್ರ 1962, 1967 ಹಾಗೂ 1972ರಲ್ಲಿ ಮೀಸಲು ಕ್ಷೇತ್ರವಾಗಿತ್ತು. ಈಗ ಸಾಮಾನ್ಯ ಕ್ಷೇತ್ರ. ಬಿಜೆಪಿಯ ರಾಜಕುಮಾರ ಪಾಟೀಲ್ ತೇಲ್ಕೂರ ಹಾಲಿ ಶಾಸಕ. ಕಾಂಗ್ರೆಸ್‌ನ ಡಾ| ಶರಣಪ್ರಕಾಶ ಪಾಟೀಲ್ ಸತತ ಮೂರು ಬಾರಿ ಅಂದರೆ 2004, 2008 ಹಾಗೂ 2013ರಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಾಂಗ್ರೆಸ್, ಬಿಜೆಪಿ,ಜನತಾದಳ ಹಾಗೂ ಸ್ವತಂತ್ರ ಅಭ್ಯರ್ಥಿಗಳು ಇಲ್ಲಿ ಗೆದ್ದಿದ್ದಾರೆ. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಜಿ.ಪಿ.ಸರ್ವೇಶ ಪಕ್ಷೇತರ ಹಾಗೂ ಮಲ್ಲಪ್ಪ ಸಂಗಪ್ಪ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಅವರೇ 1962ರಲ್ಲಿ ಸ್ವತಂತ್ರ ಹಾಗೂ 1972ರಲ್ಲಿ ಕಾಂಗ್ರೆಸ್‌ನಿಂದ ವಿಧಾನಸಭೆ ಪ್ರವೇಶಿಸಿದ್ದರು. ಉಳಿದಂತೆ 1978ರಲ್ಲಿ ಶೇರಖಾನ್ ಕಾಂಗ್ರೆಸ್, 1983ರಲ್ಲಿ ಬಿಜೆಪಿಯ ನಾಗರೆಡ್ಡಿ ಪಾಟೀಲ್ ಗೆದ್ದರೆ, ಚಂದ್ರಶೇಖರರೆಡ್ಡಿ 1985 ಹಾಗೂ 1994ರಲ್ಲಿ ಜನತಾದಳದಿಂದ ಗೆಲುವು ಸಾಧಿಸಿದ್ದರು. ಬಸವಂತರೆಡ್ಡಿ 1989 ಹಾಗೂ 1999ರಲ್ಲಿ ಕಾಂಗ್ರೆಸ್‌ದಿಂದ ಗೆದ್ದಿದ್ದರು. ಒಟ್ಟಾರೆ 9 ಬಾರಿ ಕಾಂಗ್ರೆಸ್, ಎರಡು ಬಾರಿ ಬಿಜೆಪಿ ಹಾಗೂ ಮೂರು ಬಾರಿ ಸ್ವತಂತ್ರ ಅಭ್ಯರ್ಥಿಗಳಿಗೆ ಒಲಿದ ಕ್ಷೇತ್ರವಿದು. ಚಿತ್ತಾಪುರ
ಹದಿನೈದು ಚುನಾವಣೆ ಕಂಡಿರುವ ಚಿತ್ತಾಪುರ 1957ರಿಂದ 2004 ರವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. 2008ರಿಂದ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ಹಾಲಿ ಶಾಸಕ. ಇಲ್ಲಿ ಈ ತನಕ 11 ಬಾರಿ ಕಾಂಗ್ರೆಸ್ ಗೆದ್ದಿದೆ. ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಹಾಗೂ ವಿಶ್ವನಾಥ ಪಾಟೀಲ್ ಹೆಬ್ಟಾಳ ತಲಾ ಮೂರು ಬಾರಿ ಗೆದ್ದಿದ್ದಾರೆ. ಚಿಂಚನಸೂರ ಕಾಂಗ್ರೆಸ್‌ನಿಂದ ಗೆದ್ದರೆ ವಿಶ್ವನಾಥ ಪಾಟೀಲ್ ಜನತಾಪಕ್ಷ ಹಾಗೂ ಜೆಡಿಎಸ್‌ದಿಂದ ಗೆದ್ದಿದ್ದಾರೆ. ಎಐಸಿಸಿ ಅಧ್ಯಕ್ಷ ಡಾ| ಮಲ್ಲಿಕಾರ್ಜುನ ಖರ್ಗೆ 2008ರಲ್ಲಿ ಚುನಾಯಿತರಾಗಿದ್ದರು. ಅನಂತರ ರಾಜೀನಾಮೆ ನೀಡಿ ಲೋಕಸಭೆ ಪ್ರವೇಶಿಸಿದ ಬಳಿಕ ನಡೆದ 2009ರ ಉಪಚುನಾವಣೆಯಲ್ಲಿ ಬಿಜೆಪಿಯ ವಾಲ್ಮೀಕಿ ನಾಯಕ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಮಣಿಸಿದ್ದರು. ಈಗ ಸತತ ಎರಡು ಅವಧಿಯಿಂದ ಪ್ರಿಯಾಂಕ ಖರ್ಗೆ ಆಯ್ಕೆಯಾಗಿದ್ದು, ಎರಡು ಬಾರಿ ಜನತಾ ಪಕ್ಷ, ತಲಾ ಒಂದು ಬಾರಿ ಜೆಡಿಎಸ್ ಹಾಗೂ ಬಿಜೆಪಿ ಗೆದ್ದಿದೆ. ಚಿಂಚೋಳಿ
ಗಡಿನಾಡು ಚಿಂಚೋಳಿ ಕ್ಷೇತ್ರ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ನಾಲ್ಕು ಬಾರಿ ಗೆದ್ದ ಅಖಾಡ. ಒಂದು ಉಪ ಚುನಾವಣೆ ಸೇರಿ ಇಲ್ಲಿಯವರೆಗೆ 15 ಚುನಾವಣೆಗಳನ್ನು ಕಂಡಿದೆ. 1957ರಿಂದ 2008ರ ವರೆಗೆ ಸಾಮಾನ್ಯ ಕ್ಷೇತ್ರವಾಗಿತ್ತು. ದೇವೇಂದ್ರಪ್ಪ ಘಾಳಪ್ಪ, ವೈಜನಾಥ ಪಾಟೀಲ್, ಮಾಜಿ ಸಿಎಂ ವೀರೇಂದ್ರ ಪಾಟೀಲ್ ಮಗ ಕೈಲಾಸನಾಥ್ ಪಾಟೀಲ್ ಸೇರಿದಂತೆ ಇತರರು ಇಲ್ಲಿ ಗೆದ್ದಿದ್ದರು. 2008ರಲ್ಲಿ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ಅನಂತರ ಹಾಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಲಾಪುರೆ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಒಟ್ಟಾರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 11 ಬಾರಿ, ಜನತಾದಳ ಹಾಗೂ ಬಿಜೆಪಿ ತಲಾ ಎರಡು ಬಾರಿ ಜಯಗಳಿಸಿವೆ. 2013 ಹಾಗೂ 2018ರ ಚುನಾವಣೆಯಲ್ಲಿ ಹಾಲಿ ಸಂಸದ ಡಾ| ಉಮೇಶ್ ಜಾಧವ್ ಕಾಂಗ್ರೆಸ್‌ನಿಂದ ಗೆದ್ದಿದ್ದರು. 2019ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಅನಂತರ ನಡೆದ ಉಪಚುನಾವಣೆಯಲ್ಲಿ ಅವರ ಪುತ್ರ ಡಾ| ಅವಿನಾಶ್ ಜಾಧವ್ ಗೆದ್ದರು. ಅಚ್ಚರಿ ಎಂದರೆ ಚಿಂಚೋಳಿಯಲ್ಲಿ ಗೆದ್ದ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿರುತ್ತದೆ. ಹೀಗಾಗಿ ಈ ಕ್ಷೇತ್ರ ಚುನಾವಣೆ ಸಮಯದಲ್ಲಿ ಎಲ್ಲಿಲ್ಲದ ಸುದ್ದಿಗೆ ಬರುತ್ತದೆ. ಕಲಬುರಗಿ ಗ್ರಾಮೀಣ
ಕಮಲಾಪುರ ಹಾಗೂ ಶಹಾಬಾದ್ ಮೀಸಲು ಕ್ಷೇತ್ರಗಳು ಸೇರಿ ಮರುವಿಂಗಡಣೆ ಬಳಿಕ 2008ರಲ್ಲಿ ಅಸ್ತಿತ್ವಕ್ಕೆ ಬಂದ ಕ್ಷೇತ್ರವಿದು. 2008ರಲ್ಲಿ ಬಿಜೆಪಿಯಿಂದ ರೇವು ನಾಯಕ ಬೆಳಮಗಿ ಹಾಗೂ 2013ರಲ್ಲಿ ಕಾಂಗ್ರೆಸ್‌ನ ಜಿ. ರಾಮಕೃಷ್ಣ ಗೆದ್ದರೆ, ಬಿಜೆಪಿಯ ಬಸವರಾಜ ಮತ್ತಿಮಡು ಹಾಲಿ ಶಾಸಕ, ಕಮಲಾಪುರ ಕ್ಷೇತ್ರದಲ್ಲಿ ರೇವು ನಾಯಕ ಬೆಳಮಗಿ ಸತತ ನಾಲ್ಕು ಬಾರಿ ಗೆದ್ದಿದ್ದು ದಾಖಲೆಯಾಗಿತ್ತು. 1978ರಲ್ಲಿ ಮೀಸಲು ಕ್ಷೇತ್ರವಾಗುವ ಮುನ್ನ 1962ಹಾಗೂ 1967ರಲ್ಲಿ ಕಾಂಗ್ರೆಸ್‌ನ ಲಲಿತಾಬಾಯಿ ಚಂದ್ರಶೇಖರ ಹಾಗೂ 1972ರಲ್ಲಿ ಕಾಂಗ್ರೆಸ್‌ನ ಸುಭಾಶ ಶಂಕರಶೆಟ್ಟಿ ಶಾಸಕರಾಗಿದ್ದರು. ಗೋವಿಂದ ಪಿ.ಒಡೆಯರ್ 1978ರಲ್ಲಿ ಜನತಾಪಕ್ಷ ಹಾಗೂ 1983ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾದರೆ; ಜಿ. ರಾಮಕೃಷ್ಣ 1985, 1989 ಹಾಗೂ 2013ರಲ್ಲಿ ಗೆಲುವು ಸಾಧಿಸಿದ್ದರು. ಮೀಸಲು ಕ್ಷೇತ್ರವಿದ್ದ ಸಂದರ್ಭ 10 ಚುನಾವಣೆ ನಡೆದಿದ್ದು, ಆರು ಬಾರಿ ಕಾಂಗ್ರೆಸ್, ಮೂರು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜನತಾಪಕ್ಷ ಗೆದ್ದಿತ್ತು. ಒಟ್ಟಾರೆ ಈ ಕ್ಷೇತ್ರದಲ್ಲಿ ಏಳು ಬಾರಿ ಕಾಂಗ್ರೆಸ್, ಐದು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜನತಾ ಪಕ್ಷ ಗೆದ್ದಿದೆ. ಇನ್ನು ಶಹಾಬಾದ್ ಮೀಸಲು ಕ್ಷೇತ್ರವಿದ್ದ ಸಂದರ್ಭ ಏಳು ಚುನಾವಣೆ ನಡೆದಿದ್ದು, ಮೂರು ಬಾರಿ ಸಿಪಿಐ, ಎರಡು ಬಾರಿ ಕಾಂಗ್ರೆಸ್, ಜನತಾದಳ ಹಾಗೂ ಬಿಜೆಪಿ ತಲಾ ಒಂದು ಬಾರಿ ಗೆದ್ದಿತ್ತು. 1978ರಲ್ಲಿ ಶರಣಪ್ಪ ಭೈರಿ ಹಾಗೂ 1983 ಮತ್ತು 1985ರಲ್ಲಿ ಕೆ.ಬಿ. ಶಾಣಪ್ಪ ಸಿಪಿಐ ದಿಂದ ಗೆಲುವು ಸಾಧಿಸಿದ್ದಾರೆ. 1989ರಲ್ಲಿ ಹಾಗೂ 1999ರಲ್ಲಿ ಬಾಬುರಾವ್ ಚವ್ಹಾಣ ಕಾಂಗ್ರೆಸ್ ಪಕ್ಷದಿಂದ ಗೆದ್ದರೆ 2004ರಲ್ಲಿ ಸುನಿಲ್ ವಲ್ಲಾಪುರೆ ಬಿಜೆಪಿಯಿಂದ ಒಮ್ಮೆ ಶಾಸಕರಾಗಿದ್ದಾರೆ. ಒಟ್ಟಾರೆ ಸಿಪಿಐ ಮೂರು ಬಾರಿ, ಕಾಂಗ್ರೆಸ್ ಎರಡು ಬಾರಿ, ಜನತಾದಳ ಹಾಗೂ ಬಿಜೆಪಿ ತಲಾ ಒಂದು ಬಾರಿ ಗೆದ್ದಿದೆ. ಕಲಬುರಗಿ ದಕ್ಷಿಣ ಕ್ಷೇತ್ರ
2008ರಲ್ಲಿ ಕಲಬುರಗಿ ವಿಧಾನಸಭಾ ಕ್ಷೇತ್ರದಿಂದ ಬೇರ್ಪಟ್ಟು ಅಸ್ತಿತ್ವಕ್ಕೆ ಬಂದ ಕ್ಷೇತ್ರವಿದು. ಅನಂತರ ನಡೆದ ನಾಲ್ಕು ಚುನಾವಣೆಯಲ್ಲಿ ಮೂರು ಬಾರಿ ಬಿಜೆಪಿ ಹಾಗೂ ಒಂದು ಬಾರಿ ಜೆಡಿಎಸ್ ಗೆದ್ದಿದೆ. ಅದರಲ್ಲೂ ಗೆದ್ದವರೆಲ್ಲ ರೇವೂರ ಕುಟುಂಬದವರೇ ಎನ್ನುವುದು ವಿಶೇಷ. 2008ರಲ್ಲಿ ಚಂದ್ರಶೇಖರ ಪಾಟೀಲ್ ಬಿಜೆಪಿಯಿಂದ ಗೆಲುವು ಸಾಧಿಸಿದರೆ, ಅವರ ನಿಧನದ ಅನಂತರ 2010ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ದಿಂದ ಅವರ ಪತ್ನಿ ಅರುಣಾ ಚಂದ್ರಶೇಖರ ಪಾಟೀಲ್ ಗೆದ್ದಿದ್ದರು. 2013 ಹಾಗೂ 2018ರಲ್ಲಿ ಪುತ್ರ ದತ್ತಾತ್ರೇಯ ಪಾಟೀಲ್ ರೇವೂರ ಬಿಜೆಪಿಯಿಂದ ಗೆದ್ದಿದ್ದಾರೆ. ಈ ಮುನ್ನವಿದ್ದ ಕಲಬುರಗಿ ಕ್ಷೇತ್ರದಲ್ಲಿ ಖಮರುಲ್ ಇಸ್ಲಾಂ ನಾಲ್ಕು ಬಾರಿ ಜಯಗಳಿಸಿದ್ದರು. ಒಂದು ಬಾರಿ ಸ್ವತಂತ್ರ, ಇನ್ನೊಮ್ಮೆ ಮುಸ್ಲಿಂ ಲೀಗ್, ಮಗದೊಮ್ಮೆ ಐಎನ್ ಲೀಗ್ ಹಾಗೂ ಕೊನೆಯದಾಗಿ ಕಾಂಗ್ರೆಸ್‌ದಿಂದ ಜಯಗಳಿಸಿದ್ದು ಅವರ ಹೆಗ್ಗಳಿಕೆ. ಇದೇ ಕ್ಷೇತ್ರದಲ್ಲಿ ಕಾರ್ಮಿಕ ನಾಯಕ, ಹಿರಿಯ ಮುತ್ಸದ್ದಿ ಎಸ್.ಕೆ.ಕಾಂತಾ 1983 ಹಾಗೂ 1985ರಲ್ಲಿ ಗೆದ್ದಿದ್ದರು. ಉಳಿದಂತೆ ಹಾಲಿ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ತಂದೆ ಗಂಗಾಧರ ನಮೋಶಿ 1962ರಲ್ಲಿ ಶಾಸಕರಾಗಿದ್ದರು. 1957, 1967 ಹಾಗೂ 1972ರಲ್ಲಿ ಮಹಮ್ಮದ ಅಲಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದರು. ಕೈಸರ್ ಮಹಮೂದ್ 1996ರಲ್ಲಿ ಜನತಾದಳದಿಂದ ಜಯಗಳಿಸಿದ್ದರು. ಚಂದ್ರಶೇಖರ ಡಿ. ಪಾಟೀಲ್ ರೇವೂರ 2004ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದರು. ಒಟ್ಟಾರೆ ಈ ಕ್ಷೇತ್ರ ಕಲಬುರಗಿ ಉತ್ತರ ಹಾಗೂ ದಕ್ಷಿಣದಲ್ಲಿ ಹರಿದು ಹೋಗಿದೆ. ಮಹಾನಗರದ 25 ವಾರ್ಡ್‌ಗಳು ಹಾಗೂ 20 ಹಳ್ಳಿಗಳು ಇದರ ವ್ಯಾಪ್ತಿಗೆ ಬರುತ್ತವೆ. ಆಳಂದ
ಕಲಬುರಗಿ ಉತ್ತರ ಕ್ಷೇತ್ರಹದಿನೈದು ಚುನಾವಣೆ ಕಂಡಿರುವ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಪಿಎಸ್‌ಪಿ, ಜನತಾ ಪಕ್ಷ, ಜನತಾದಳ, ಕೆಸಿಪಿ, ಜೆಡಿಎಸ್, ಕೆಜೆಪಿ ಹಾಗೂ ಬಿಜೆಪಿ ಪಕ್ಷಗಳು ಗೆಲುವು ಸಾಧಿಸಿವೆ. ಜಿಲ್ಲೆಯ ಯಾವೊಂದು ಕ್ಷೇತ್ರದಲ್ಲೂ ಇಷ್ಟೊಂದು ಪಕ್ಷಗಳು ಗೆದ್ದ ಉದಾಹರಣೆಗಳಿಲ್ಲ. ಹಾಲಿ ಶಾಸಕ ಸುಭಾಷ ಗುತ್ತೇದಾರ ನಾಲ್ಕು ಬಾರಿ ಗೆದ್ದಿದ್ದಾರೆ. ಎರಡು ಬಾರಿ ಜೆಡಿಎಸ್, ತಲಾ ಒಂದು ಬಾರಿ ಬಿಜೆಪಿ ಹಾಗೂ ಕೆಸಿಪಿಯಿಂದ ಜಯಗಳಿಸಿದ್ದರೆ; ಬಿ.ಆರ್. ಪಾಟೀಲ್ ಜನತಾ ಪಕ್ಷ, ಜೆಡಿಎಸ್ ಹಾಗೂ ಕೆಜೆಪಿ ಮೂಲಕ ಒಟ್ಟು ಮೂರು ಬಾರಿ ಗೆಲುವು ಸಾಧಿಸಿದ್ದಾರೆ. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಿದ್ದಾಗ ಕಾಂಗ್ರೆಸ್‌ದಿಂದ ರಾಮಚಂದ್ರ ವೀರಪ್ಪ, ಚಂದ್ರಶೇಖರ ಸಂಗಶೆಟ್ಟಪ್ಪ ಹಾಗೂ 1961ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಲಲಿತಾಬಾಯಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅನಂತರ 1962ರಲ್ಲಿ ಕಾಂಗ್ರೆಸ್‌ನ ದೇವಪ್ಪ ಶಾಮಣ್ಣ, 1967ರಲ್ಲಿ ದಿಗಂಬರಾವ್ ಬಲವಂತರಾವ್, 1972ರಲ್ಲಿ ಅಣ್ಣಾರಾವ್ ವೀರಭದ್ರಪ್ಪ, 1978ರಲ್ಲಿ ಅಣ್ಣಾರಾವ್ ಭೀಮರಾವ್, 1983, 2004 ಹಾಗೂ 2013ರಲ್ಲಿ ರಲ್ಲಿ ಬಿ.ಆರ್. ಪಾಟೀಲ್, 1985 ಹಾಗೂ 1989ರಲ್ಲಿ ಕಾಂಗ್ರೆಸ್‌ನ ಶರಣಬಸಪ್ಪ ಧಂಗಾಪುರ ಚುನಾಯಿತರಾಗಿದ್ದರು. ಒಟ್ಟಾರೆ 15 ಚುನಾವಣೆಗಳಲ್ಲಿ ಕಾಂಗ್ರೆಸ್ 6 ಬಾರಿ, ಜನತಾ ಪಕ್ಷ ಎರಡು ಬಾರಿ, ಜೆಡಿಎಸ್ ಮೂರು ಬಾರಿ, ತಲಾ ಒಂದು ಬಾರಿ ಬಿಜೆಪಿ, ಕೆಜೆಪಿ, ಕೆಸಿಪಿ ಹಾಗೂ ಪಿಎಸ್‌ಪಿ ಗೆದ್ದಿದೆ. ಕಲಬುರಗಿ ಉತ್ತರ ಕ್ಷೇತ್ರ
2008ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕ್ಷೇತ್ರದಲ್ಲಿ 2008 ಹಾಗೂ 2013ರಲ್ಲಿ ಖಮರುಲ್ ಇಸ್ಲಾಂ ಶಾಸಕರಾಗಿ ಆಯ್ಕೆಯಾಗಿದ್ದರು. ಈಗ ಅವರ ಪತ್ನಿ ಖನೀಜ್ ಫಾತೀಮಾ ಹಾಲಿ ಶಾಸಕಿ. ಕಲಬುರಗಿ ಮಹಾನಗರ ವಾರ್ಡ್ ನಂ.1ರಿಂದ 30 ವಾರ್ಡ್‌ಗಳು ಈ ಕ್ಷೇತ್ರದಡಿ ಬರುತ್ತವೆ. ಇಡೀ ಕ್ಷೇತ್ರ ಕಲಬುರಗಿ ಮಹಾನಗರದಲ್ಲಿದೆ. -ಹಣಮಂತರಾವ ಭೈರಾಮಡಗಿ