Advertisement

ನಾರಾಯಣರಾವ್‌ ಉತ್ತರಾಧಿಕಾರಿಗೆ ಕಸರತ್ತು!

03:59 PM Oct 03, 2020 | Team Udayavani |

ಬೀದರ: ಕೋವಿಡ್ ಸೋಂಕಿಗ ಬಲಿಯಾಗಿರುವ ಶಾಸಕ ಬಿ. ನಾರಾಯಣರಾವ್‌ ಅವರ ಸಮಾ ಧಿ ಮೇಲಿನ ಹೂವು ಇನ್ನೂ ಬಾಡಿಲ್ಲ, ಉಪ ಚುನಾವಣೆಯೂ ಘೋಷಣೆಯಾಗಿಲ್ಲ. ಆದರೆ, ಬಸವಕಲ್ಯಾಣ ಕ್ಷೇತ್ರದಲ್ಲಿ ಚುನಾವಣೆ ಕಾವು ಜೋರಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಟಿಕೆಟ್‌ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ಶಾಸಕ ನಾರಾಯಣರಾವ್‌ ಅವರ ಅಕಾಲಿಕ ನಿಧನ ಹಿನ್ನೆಲೆಯಲ್ಲಿ ತೆರವಾಗಿರುವ ಕಲ್ಯಾಣದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದ್ದು, ಶಾಸಕರ ಉತ್ತರ ಧಿಕಾರಿಯಾರು ಎಂಬ ಚರ್ಚೆ ಶುರುವಾಗಿದೆ.

Advertisement

ಜನತಾ ಪರಿವಾರದ ಭದ್ರಕೋಟೆ ಎಂದೇ ಗುರುತಿಸಿಕೊಂಡಿದ್ದ ಕ್ಷೇತ್ರದಲ್ಲಿ ಬರೋಬ್ಬರಿ ನಾಲ್ಕು ದಶಕಗಳ ಬಳಿಕ ಅಹಿಂದ ನಾಯಕರಾಗಿದ್ದ ನಾರಾಯಣರಾವ್‌ ಗೆಲ್ಲುವ ಮೂಲಕ “ಕೈ’ಗೆ ನೆಲೆ ಒದಗಿಸಿಕೊಟ್ಟಿದ್ದರು. ಆದರೆ, ತಮ್ಮ ಅಧಿಕಾರದ ಅವಧಿ ಪೂರ್ಣಗೊಳಿಸುವ ಮೊದಲೇ ಇಹಲೋಕ ತ್ಯಜಿಸಿದ್ದಾರೆ. ಅವರಿಂದ ತೆರವಾದ ಸ್ಥಾನಕ್ಕೆ ಉಪ ಕದನದಲ್ಲೂ ಮತ್ತೆ ಕ್ಷೇತ್ರವನ್ನು ತಮ್ಮ “ಕೈ’ಯಲ್ಲಿ ಇಟ್ಟುಕೊಳ್ಳಲು ಕಾಂಗ್ರೆಸ್‌ ತವಕದಲ್ಲಿದ್ದರೆ, ಬಿಜೆಪಿ ಮತ್ತು ಜೆಡಿಎಸ್‌ ಸಹ “ಕೈ’ಯಿಂದ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ಪಡೆಯಲು ಲೆಕ್ಕಚಾರದಲ್ಲಿದೆ.

ನಾರಾಯಣರಾವ್‌ ಅವರ ಅಂತ್ಯಕ್ರಿಯೆ ಮುಗಿದ ಕ್ಷಣದಿಂದಲೇ ದಿ| ಶಾಸಕರ ಸ್ಥಾನ ಯಾರು ತುಂಬಬಹುದೆಂಬ ಚರ್ಚೆ ಹೆಚ್ಚಿವೆ. ಸಾರ್ವಜನಿಕ ವಲಯದಲ್ಲಿ ಗೆಲುವಿಗಾಗಿ ಅನುಕಂಪದ ಮತ, ಜಾತಿ ಲೆಕ್ಕಚಾರ ಮುನ್ನೆಲೆಗೆ ಬಂದಿದ್ದರೆ, ಪ್ರಮುಖ ಪಕ್ಷಗಳಲ್ಲಿ ಗೆಲುವಿನ ಲೆಕ್ಕಾಚಾರ, ಮತ ವಿಭಜನೆ ತಂತ್ರಗಳು ಜತೆಗೆವಲಸೆ ಅಭ್ಯರ್ಥಿಗಳನ್ನು ಕರೆತರುವ ಚಿಂತನೆಗಳು ಕೇಳಲಾರಂಭಿಸಿವೆ. ಯಾವ ಸಂದರ್ಭದಲ್ಲೂ ಉಪ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಹಿನ್ನೆಲೆ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಈಗಾಗಲೇ ಪ್ರಯತ್ನ ನಡೆಸಿರುವ ನಾಯಕರ ದಂಡು ತಮ್ಮ ಪಕ್ಷದ ವರಿಷ್ಠರು ಮತ್ತು ರಾಜಕೀಯ ಗುರುಗಳ ಮನೆ ಕದ ತಟ್ಟಲು ಆರಂಭಿಸಿದ್ದಾರೆ.

ಕೈ’ ಪಾಳಯಕ್ಕೆ ಸವಾಲು: ಕ್ಷೇತ್ರವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳುವುದು “ಕೈ’ ಪಾಳಯಕ್ಕೆ ಸವಾಲಿನ ಸಂಗತಿಯಾಗಿದೆ. ನಾರಾಯಣರಾವ್‌ ಅವರಂತೆ ಜನಮನ್ನಣೆ ಗಳಿಸುವಂಥ ವ್ಯಕ್ತಿಯನ್ನೇ ಕಣಕ್ಕಿಳಿಸಬೇಕಿದೆ. ಹಾಗಾಗಿ ನಾರಾಯಣರಾವ್‌ ಕುಟುಂಬಕ್ಕೆ ಟಿಕೆಟ್‌ ನೀಡಿದರೆ ಉತ್ತಮ ಎಂಬ ಕೂಗು ಕೇಳಿ ಬರುತ್ತಿವೆ. ಆದರೆ, ಅವರ ಇಬ್ಬರು ಮಕ್ಕಳಾದ ಗೌತಮ್‌ ಮತ್ತು ರಾಹುಲ್‌ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದು, ಇದು ಪಕ್ಷದ ಗೆಲುವಿಗೆ ಹಿನ್ನಡೆ ಆಗಬಹುದೆಂಬಆತಂಕ ಪಕ್ಷದ ನಾಯಕರಲ್ಲಿದೆ. ಆದರೆ,ದಿ| ಶಾಸಕರ ಪರಿವಾರ ಮಾಜಿ ಸಿಎಂಸಿದ್ಧರಾಮಯ್ಯ ಅವರನ್ನೇ ಹೆಚ್ಚು ನಂಬಿಕೊಂಡಿದೆ. ಹಾಗಾಗಿ ಅವರ ನಿರ್ಣಯವೇ ಇಲ್ಲಿ ಅಂತಿಮ ಎಂದೆನ್ನಲಾಗುತ್ತಿದೆ.

ಇನ್ನು ರಾಜ್ಯ- ಕೇಂದ್ರದ ಆಡಳಿತಾರೂಢ ಪಕ್ಷ ಬಿಜೆಪಿ ಸಹ ಕಲ್ಯಾಣದಲ್ಲಿ ಅಧಿಕಾರ ಹಿಡಿಯಲು ಪ್ರಬಲ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಲಿದ್ದು, ಇಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಬೆಳೆದಿದೆ. ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮತ್ತೂಮ್ಮೆ ಅದೃಷ್ಟ ಪರೀಕ್ಷೆ ಸಜ್ಜಾಗುತ್ತಿದ್ದಾರೆ. ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಳ್ಳಿ ಅವರ ಕಿರಿಯ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಸಹ ಕ್ಷೇತ್ರದತ್ತ ಚಿತ್ತ ಹರಿಸಿದ್ದು, ಟಿಕೆಟ್‌ಗಾಗಿ ಲಾಬಿ ಶುರು ಮಾಡಿದ್ದಾರೆ ಎನ್ನುವ ಮಾತುಗಳಿವೆ. ಜತೆಗೆ ಪ್ರಮುಖರಾಗಿ ಶರಣು ಸಲಗಾರ, ಗುಂಡು ರೆಡ್ಡಿ, ಸಂಜಯ ಪಟವಾರಿ ಹಾಗೂ ಜೆಡಿಎಸ್‌ ಟಿಕೆಟ್‌ಗಾಗಿ ಮಾಜಿ ಶಾಸಕ ಎಂ.ಜಿ. ಮುಳೆ, ಆನಂದ ಪಾಟೀಲ ಹೆಸರುಗಳು ಕೇಳಿ ಬರುತ್ತಿವೆ.

Advertisement

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಳ : ಈ ಬೆಳವಣಿಗೆ ನಡುವೆಯೂ “ಕೈ’ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕ್ಷೇತ್ರದಲ್ಲಿ ಲಿಂಗಾಯತರ ನಂತರ ಮರಾಠಾ ಸಮುದಾಯದವರ ಸಂಖ್ಯೆ ಹೆಚ್ಚಿರುವುದರಿಂದ ಮಾಜಿ ಸಿಎಂ ದಿ| ಧರಂಸಿಂಗ್‌ ಪುತ್ರ, ಎಂಎಲ್‌ಸಿ ವಿಜಯಸಿಂಗ್‌ ಅವರು ಅಚ್ಚರಿಯ ಅಭ್ಯರ್ಥಿಯಾಗಿ ಘೋಷಣೆಯಾಗಲಿದ್ದಾರೆ ಎಂಬ ವಾದ ಶುರುವಾಗಿದ್ದರೆ, ಇನ್ನೊಂದೆಡೆ ಅಭ್ಯರ್ಥಿಯಾಗಿ ಹುಮನಾಬಾದ್‌ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಚಂದ್ರಶೇಖರ ಪಾಟೀಲ ಹೆಸರು ಸಹಚರ್ಚೆಯ ಚಾವಡಿಯಲ್ಲಿದೆ. ಇದರೊಟ್ಟಿಗೆ ಎಐಸಿಸಿ ಸದಸ್ಯ ಆನಂದ ದೇವಪ್ಪ ಮತ್ತು ಶಿವಶರಣ ಬಿರಾದಾರ ಸಹ ಟಿಕೆಟ್‌ ಆಕಾಂಕ್ಷಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ.

 

-ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next