Advertisement

ಫೆ.27ಕ್ಕೆ ಪೋಲಿಯೋ ಲಸಿಕಾ ಅಭಿಯಾನ

12:48 PM Jan 16, 2022 | Team Udayavani |

ಚಿಕ್ಕಬಳ್ಳಾಪುರ: ರಾಷ್ಟ್ರೀಯ ಪಲ್ಸ್‌ ಪೋಲಿಯೋ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಫೆ.27ರಂದು ಮಕ್ಕಳಿಗೆ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಮಗುವಿಗೆ ಲಸಿಕೆಯನ್ನು ಪೋಷಕರು ಹಾಕಿಸಬೇಕು. ವಂಚಿತರಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ಜಿಲ್ಲಾಡಳಿತದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್‌ ಪೋಲಿಯೋ ಮತ್ತು ತೀವ್ರತರ ಮಿಷನ್‌ ಇಂದ್ರ ಧನುಷ್‌ 4.0 ಟಾಸ್ಕ್ ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ನಗರಸಭೆ, ಪುರಸಭೆ ಹಾಗೂ ತಾಪಂ ಇಒ ಸಾರ್ವಜನಿಕರಲ್ಲಿ ಪಲ್ಸ್‌ ಪೋಲಿಯೋ ಕುರಿತು ಜಾಗೃತಿ ಮೂಡಿಸಲು ಎಂದು ಸೂಚಿಸಿದರು.

ಅಂಗನವಾಡಿ, ಶಾಲೆಗಳಲ್ಲಿ ಲಸಿಕೆ: ನಗರ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಪೋಲಿಯೋ ಲಸಿಕಾ ದಿನದಂದು ಅಂಗನವಾಡಿ ಕೇಂದ್ರಗಳನ್ನು ತೆರೆದು ಲಸಿಕೆ ಹಾಕಿಸುವುದು, ಶಾಲಾ ಕೊಠಡಿಗಳು ತೆರೆದು ಕನಿಷ್ಠ ಇಬ್ಬರು ನಿಯೋಜಿತ ಶಿಕ್ಷಕರು, ಪ್ರೌಢಶಾಲೆ, ಕಿರಿಯ ಮಹಾವಿದ್ಯಾಲಯ, ಪ್ರಥಮ ದರ್ಜೆ ಕಾಲೇಜುಗಳಿರುವ ಕಡೆ ಎನ್‌ಎಸ್‌ಎಸ್‌, ಎನ್‌ಸಿಸಿ ವಿದ್ಯಾರ್ಥಿಗಳನ್ನು ನಿಯೋಜಿಸಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು ಎಂದು ಹೇಳಿದರು.

ಜೊತೆಗೆ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು, ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಸದಸ್ಯರಾದ ಸಿಡಿಪಿಒ, ಎಲ್ಲಾ ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು, ತಾಯಂದಿರ ಸಭೆ, ಜಾಗೃತಿ ಜಾಥಾ ಕಾರ್ಯಕ್ರಮ, ಭಿತ್ತಿಪತ್ರ, ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಪಲ್ಸ್‌ ಪೋಲಿಯೋ ಲಸಿಕೆಯ ಮಹತ್ವವನ್ನು ತಿಳಿಸಬೇಕು ಎಂದರು.

ಜ.30ರಿಂದ ಫೆ.13ರವರೆಗೆ ಆಂದೋಲನ: ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯ ಕ್ರಮದಡಿಯಲ್ಲಿ ಜಿಲ್ಲಾದ್ಯಂತ ಕುಷ್ಠರೋಗ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಅಂಗವಿಕಲ ಕುಷ್ಠರೋಗ ಪ್ರಕರಣ ವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜನವರಿಯನ್ನು ಕುಷ್ಠರೋಗ ವಿರೋಧಿ  ಮಾಸ ಹಾಗೂ ಜ.30 ರಿಂದ ಫೆ.13ವರೆಗೂ ಸ್ಪರ್ಶ್‌ ಕುಷ್ಠ ರೋಗ ಅರಿವು ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

Advertisement

ಕುಷ್ಠರೋಗ ನಿರ್ಮೂಲನೆ: ಕುಷ್ಠರೋಗವುಸಂಪೂರ್ಣ ಗುಣಮುಖವಾಗುವಂತಹ ಕಾಯಿಲೆಯಾಗಿದ್ದು, ಅದರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೋಗಲಾಡಿಸಿ ಸಮಾಜದ ಮುಖ್ಯ ವಾಹಿನಿಗೆ ಕರೆತರುವುದೇ ಈ ಆಂದೋಲನದ ಮುಖ್ಯ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಕುಷ್ಠರೋಗ ನಿರ್ಮೂಲನೆ ಮಾಡಲು ನಗರ, ತಾಲೂಕು ಹಾಗೂ ಗ್ರಾಮಮಟ್ಟದಲ್ಲಿ ಜಾಗೃತಿ ಕಾರ್ಯಚಟುವಟಿಕೆಗಳ ಭಿತ್ತಿಪತ್ರ, ಕರಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.

ಕರಪತ್ರ ಬಿಡುಗಡೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸ್ಪರ್ಶ್‌ ಕುಷ್ಠ ಅರಿವು ಆಂದೋಲನ ಹಾಗೂ ಕುಷ್ಠರೋಗದ ವಿರುದ್ಧ ಕೊನೆಯ ಸಮರ ಎಂಬ ಘೋಷ ವಾಕ್ಯದ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಇಂದ್ರಧನುಷ್‌ ಲಸಿಕಾ ಅಭಿಯಾನ: ಜಿಲ್ಲಾದ್ಯಂತ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳೊಂದಿಗೆ ಸಂಪೂರ್ಣ ರೋಗ ನಿರೋಧಕ ಲಸಿಕೆ ನೀಡುವ ಸಲುವಾಗಿ ಫೆ.7, ಮಾ.7 ಹಾಗೂ ಏಪ್ರಿಲ್‌ 4 ರವರೆಗೆ ಮೂರು ಹಂತದ ಇಂದ್ರಧನುಷ್‌ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ವಾಡಿಕೆಯ ರೋಗನಿರೋಧಕ ಲಸಿಕೆಯಿಂದ ಹೊರಗುಳಿದಿರುವ ಎರಡು ವರ್ಷ ವಯಸ್ಸಿನವರೆಗಿನ ಪ್ರತಿ ಮಗು, ಎಲ್ಲಾ ಗರ್ಭಿಣಿಯರಿಗೆ ತಲುಪಿಸುವ ಉದ್ದೇಶವಾಗಿದ್ದು, ಪ್ರತಿ ಮಗುವೂ ಲಸಿಕೆ ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾದ್ಯಂತ ನೇಮಿಸಿರುವ ಟಾಸ್ಕ್ ಪೋರ್ಸ್‌ ಸಮಿತಿಗಳು ಅರಿವು ಮೂಡಿಸಿ ಕಾರ್ಯಚಟುವಟಿಕೆಗಳನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ಲಸಿಕೆ ಹಾಕಿಸುವಲ್ಲಿ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್‌.ಕಬಾಡೆ, ಎಲ್ಲಾ ತಾಲೂಕು ಆರೋಗ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಏರುತ್ತಿದೆ ಕೊರೊನಾ ಪ್ರಕರಣ :

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದೆ. 18 ವರ್ಷ ಮೇಲ್ಪಟ್ಟ ವರು ಕೊರೊನಾ ಲಸಿಕೆ ಮೊದಲ ಡೋಸ್‌ ಪಡೆದು, 2ನೇ ಡೋಸ್‌ ಪಡೆಯುವವರು 50,021 ಮಂದಿ ಉಳಿದಿದ್ದಾರೆ. ಶೀಘ್ರಗತಿಯಲ್ಲಿ ಲಸಿಕೆ ಹಾಕಿಸಲು ಟಾಸ್ಕ್ ಪೋರ್ಸ್‌ ಸಮಿತಿ, ನೋಡಲ್‌ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌.ಲತಾ ಹೇಳಿದರು.

ಆಶಾ, ಅಂಗನವಾಡಿ, ಆರೋಗ್ಯ, ಮುಂಚೂಣಿ ಕಾರ್ಯಕರ್ತರು (ಎಫ್‌ಎಲ್‌ಡಬ್ಯೂ) ಹಾಗೂ 60 ವರ್ಷಕ್ಕೂ ಮೇಲ್ಪಟ್ಟ ಅರ್ಹರು ಮುನ್ನೆಚ್ಚರಿಕಾ (ಬೂಸ್ಟರ್‌) ಡೋಸ್‌ ಅನ್ನು ಹಾಕಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಸೋಂಕು ಹೆಚ್ಚುತ್ತಿದ್ದು, ಆರ್‌ಟಿಪಿಸಿಆರ್‌ ಕೋವಿಡ್‌ ಪರೀಕ್ಷೆ ಮಾಡುವುದು ಹೆಚ್ಚಿಸಬೇಕು. ಜೊತೆಗೆ ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲಿಯೇ ಐಸೋಲೇಷನ್‌ ಆಗಿರುವವರು ಶೇ.98 ರಷ್ಟಿದ್ದು, ಅವರನ್ನು ನಗರ, ಗ್ರಾಮ ಮಟ್ಟದ ವೈದ್ಯಾಧಿಕಾರಿಗಳು ಆನ್‌ ಲೈನ್‌ ಮೂಲಕ ಸಂಪರ್ಕಿಸಿ, ಸೂಕ್ತ ಔಷಧಿ ನೀಡುವ ಜೊತೆಗೆ ಅಗತ್ಯ ವೈದ್ಯಕೀಯ ಸೇವೆ ಒದಗಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next