ಕಣ್ಣೂರು, ಕೇರಳ : ಐಸಿಸ್ ಸಹಾನುಭೂತಿ ಹೊಂದಿರುವ ಐವರು ಕಣ್ಣೂರಿನ ಯುವಕರು ಸಿರಿಯಾದಲ್ಲಿ ಹತರಾಗಿರುವ ಸುದ್ದಿಯನ್ನು ದಢೀಕರಿಸಿಕೊಳ್ಳಲು ಕೇರಳ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಕಣ್ಣೂರು ಡಿಎಸ್‌ಪಿ ಪಿ ಪಿ ಸದಾನಂದನ್ ಹೇಳಿದ್ದಾರೆ.
ಸಿರಿಯದಲ್ಲಿ ಹತರಾಗಿದ್ದಾರೆ ಎನ್ನಲಾಗಿರುವ ಕಣ್ಣೂರಿನ ಐವರು ಯುವಕರಲ್ಲಿ ಮೊಹಮ್ಮದ್ ಶಾಜಿಲ್ ಎಂಬಾತ ಸತ್ತಿರುವ ಸುದ್ದಿಯನ್ನು ವಿದೇಶದಲ್ಲಿರುವ ಆತನ ಪತ್ನಿ ಶಾಜಿಲ್ ನ ಚಿಕ್ಕಪ್ಪನಿಗೆ ತಿಳಿಸಿದ್ದಾಳೆ; ರಿಷಾದ್‌ನ ಪತ್ನಿಯು ಆತನ ಸಾವಿನ ಸುದ್ದಿಯನ್ನು ಆತನ ತಾಯಿಗೆ ತಿಳಿಸಿದ್ದಾಳೆ ಎಂದು ಸದಾನಂದನ್ ಹೇಳಿದರು.
ಇದೇ ರೀತಿ ಇನ್ನುಳಿದ ಮೂವರಾದ ಶಹನಾದ್ 25, ಶಮೀರ್ 45 ಮತ್ತು ಆತನ ಹಿರಿಯ ಮಗ ಸಲ್ಮಾನ್ 20 ಇವರ ಸಾವಿನ ಸುದ್ದಿಯನ್ನು ವಿವಿಧೆಡೆಗಳಲ್ಲಿರುವ ಅವರ ಸಂಬಂಧಿಕರು ಮೃತರ ಮನೆಯವರಿಗೆ ತಿಳಿಸಿದ್ದಾರೆ ಎಂದು ಡಿಎಸ್‌ಪಿ ಹೇಳಿದರು.
ಸಿರಿಯದಲ್ಲಿ ಕಣ್ಣೂರಿನ ಈ ಐವರು ಯುವಕರು 2014ರಿಂದ 2017ರ ವರೆಗಿನ ವಿವಿಧ ಅವಧಿಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ ಎಂದು ಡಿಎಸ್‌ಪಿ ಹೇಳಿದರು.
ಕಳೆದ ಅ.25ರಂದು ವಳಪಟ್ಟಿನಂ ಪೊಲೀಸರು ಐಸಿಸ್ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಮಿಥಿಲಾಜ್, ಅಬ್ದುಲ್ ರಜಾಕ್ ಮತ್ತು ರಶೀದ್ ಎಂಬ ಮೂವರು ಯುವಕರನ್ನು ಬಂಧಿಸಿ ಇವರು ಕೊಟ್ಟಿದ್ದ ಮಾಹಿತಿಯ ಮೇರೆಗೆ ಮರುದಿನ ಮತ್ತಿಬ್ಬರು ಯುವಕರನ್ನು ಸೆರೆ ಹಿಡಿದಿದ್ದರು.