Advertisement

ಇನ್ಮುಂದೆ 5 ನಿಮಿಷದಲ್ಲೇ ಪೊಲೀಸ್ರು ಹಾಜರ್‌

12:53 PM Mar 11, 2017 | Team Udayavani |

ದಾವಣಗೆರೆ: ಇನ್ನು ಮುಂದೆ ದಾವಣಗೆರೆ, ಹರಿಹರ ನಗರದ ಯಾವುದೇ ಭಾಗದಲ್ಲಿ ಸಮಸ್ಯೆ ಎದುರಾದಲ್ಲಿ ಪೊಲೀಸರ ಅವಶ್ಯಕತೆ ಬಿದ್ರೆ 5 ನಿಮಿಷಕ್ಕೆ ಅಲ್ಲಿ ಅವರು ಬರ್ತಾರಂತೆ! ಪೂರ್ವ ವಲಯ ಪೊಲೀಸ್‌ ಮಹಾನಿರೀಕ್ಷಕ ಡಾ| ಎಂ.ಎ. ಸಲೀಂ ಶುಕ್ರವಾರ ಸಂಜೆ ಹೈಸ್ಕೂಲ್‌ ಮೈದಾನದಲ್ಲಿ ದೇವನಗರಿ ಗಸ್ತು ವಾಹನ, ಚೀತಾ ಬೈಕ್‌ಗಳಿಗೆ ಹಸಿರು ನಿಶಾನೆ ತೋರಿ, ಸುದ್ದಿಗಾರರೊಂದಿಗೆ ಮಾತನಾಡಿ,

Advertisement

ನಮ್ಮ ಪೊಲೀಸ್‌ ಸೇವೆಗೆ ವೇಗ ಕೊಡುವ ಉದ್ದೇಶದಿಂದ7 ವಾಹನಗಳು, 14 ಚೀತಾ ಬೈಕ್‌ಗಳನ್ನು ಗಸ್ತಿಗೆ ಮೀಸಲಿಡಲಾಗಿದೆ. ನಗರದಲ್ಲಿರುವ 7 ಠಾಣೆಗಳಿಗೆ ತಲಾ ಒಂದು ಗಸ್ತು ವಾಹನ, 2 ಚೀತಾ ನೀಡಲಾಗುತ್ತಿದೆ. ಇದೇ ರೀತಿ ಹರಿಹರದ 2 ಠಾಣೆಗಳಿಗೆ 2 ಗಸ್ತುವಾಹನ, 4 ಚೀತಾ ಬೈಕ್‌ ನೀಡಲಾಗುವುದು.

ಇದರ ಉದ್ದೇಶ ನಮ್ಮ ಠಾಣೆಗೆ ಯಾವುದೇ ದೂರು ಬಂದು, ಪೊಲೀಸರಅವಶ್ಯಕತೆ ಇದ್ದಲ್ಲಿ 5 ನಿಮಿಷದಲ್ಲಿ ನಗರದ ಯಾವುದೇ ಭಾಗವನ್ನು ತಲುಪುವುದಾಗಿದೆ ಎಂದರು. ದಾವಣಗೆರೆಗೆ ಗಸ್ತು ವಾಹನಗಳ ಅವಶ್ಯಕತೆ ಇತ್ತು. ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ಪ್ರತಿ ಠಾಣೆಗೆ ಎರಡೆರಡು ಗಸ್ತು ವಾಹನ ಇವೆ.

ನಮ್ಮ ನಗರಗಳಲ್ಲಿರಲಿಲ್ಲ. ಇದೇ ಕಾರಣಕ್ಕೆ ಇದೀಗ ಶಿವಮೊಗ್ಗ, ದಾವಣಗೆರೆ ಜಿಲ್ಲೆ ವ್ಯಾಪ್ತಿಯ ನಗರಗಳಿಗೆ ಗಸ್ತು ವಾಹನ ಸವಲತ್ತು ನೀಡಲಾಗಿದೆ. ಶಿವಮೊಗ್ಗಕ್ಕೂ ಸಹ 8 ಗಸ್ತು ವಾಹನ ಬಂದಿವೆ. 5 ಶಿವಮೊಗ್ಗಕ್ಕೆ, 2 ಭದ್ರಾವತಿಗೆ 1 ಸಾಗರ ಠಾಣೆಗೆ ನೀಡಲಾಗಿದೆ ಎಂದು ಅವರು ತಿಳಿಸಿದರು. ದಾವಣಗೆರೆಯಲ್ಲಿ ಈ ಹಿಂದೆ ಕದಂಬ ಎಂಬ ಗಸ್ತು ವಾಹನ ಇತ್ತು.

ಆದರೆ, ವಾಹನಗಳ ಕೊರತೆಯಿಂದಾಗಿ ಗಸ್ತು ವಾಹನ ತೆಗೆಯಲಾಯಿತು. ಇದೀಗ 5 ಹೊಸ ವಾಹನ ಖರೀದಿಸಿ, ಇದ್ದ 2 ವಾಹನಗಳ ಸೇರ್ಪಡೆಯೊಂದಿಗೆ ಹೊಸ ಗಸ್ತುವಾಹನ ಪಡೆ ರಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ಸಂಚರಿಸಲುಸುಸಜ್ಜಿತ ವಾಹನ ನೀಡಲಾಗಿದೆ. ಸಿಸಿಟಿವಿ ಅಳವಡಿಸಿದ, ವಾಹನದ ಹಿಂದೆ ಒಂದು ಚಿಕಿತ್ಸಾ ಸೀಟಿನ ವ್ಯವಸ್ಥೆ ಇರುವ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ ಗಸ್ತಿಗೆ ನೀಡಲಾಗಿದೆ ಎಂದು ಅವರು ಹೇಳಿದರು. 

Advertisement

ಗಸ್ತು ವಾಹನ ಸಂಖ್ಯೆ ಹೆಚ್ಚಿಸಿದ್ದರಿಂದ ಸರಗಳ್ಳತನ ಪ್ರಮಾಣ ಕಡಮೆಯಾಗಬಹುದು. ಒಂದೇ ಬಾರಿಗೆ ಅಲ್ಲದಿದ್ದರೂ ನಿಧಾನವಾಗಿ ಇದರ ಪ್ರಮಾಣ ತಗ್ಗಬಹುದು. ಚಿನ್ನದ ಸರ ಅಪಹರಣ ವಿಷಯದಲ್ಲಿ ಅಪರಾಧಿಗಳನ್ನು ಪತ್ತೆ ಮಾಡದೆ ಪ್ರಕರಣ ಕಡಮೆಯಾಗುವುದಿಲ್ಲ. ಇದನ್ನು ನಾವು ಮುಂದಿನ ದಿನಗಳಲ್ಲಿ ಮಾಡಲಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಭೀಮಾಶಂಕರ್‌ ಎಸ್‌. ಗುಳೇದ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಯಶೋದ ಎಸ್‌. ವಂಟಿಗೋಡಿ, ಡಿವೈಎಸ್‌ಪಿ ಅಶೋಕ್‌, ಸಿಪಿಐ ಉಮೇಶ್‌, ಯು.ಎ. ಸಂಗನಾಥ, ಪಿಎಸ್‌ಐ ರಾಜು, ಶ್ರೀಧರ್‌, ಶಿಲ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next