Advertisement

ಹಣ ಹೊಂದಿಸಲಾಗದೇ ಸ್ಥಗಿತಗೊಳ್ಳಲಿದ್ದ ಮದುವೆಗೆ ಸಹಾಯ ಮಾಡಿದ ಆರಕ್ಷಕರು

06:20 AM Nov 10, 2018 | Team Udayavani |

ಚಾಮರಾಜನಗರ: ಖರ್ಚು, ವೆಚ್ಚಗಳಿಗೆ ಹಣವನ್ನು ಹೊಂದಿಸಲಾಗದೇ ಮದುವೆಯನ್ನೇ ನಿಲ್ಲಿಸಲು ವಧುವಿನ ಕಡೆಯವರು
ಮುಂದಾಗಿದ್ದಾಗ ನಗರದ ಪೂರ್ವ ಠಾಣೆ ಪೊಲೀಸರು ಹಣದ ನೆರವು ನೀಡಿ ಮದುವೆ ನಡೆಯಲು ಸಹಕರಿಸಿದ ಪ್ರಸಂಗ ನಡೆದಿದೆ.

Advertisement

ತಾಲೂಕಿನ ಜ್ಯೋತಿಗೌಡನಪುರದ ಸಿದ್ದರಾಜಶೆಟ್ಟಿ ಪುತ್ರಿ ಅಂಬಿಕಾ ಹಾಗೂ ತಮಿಳುನಾಡಿನ ತಾಳವಾಡಿ ಪಿರ್ಕಾದ ಪಾಳ್ಯ ಗ್ರಾಮದ ರಾಜಣ್ಣನ ಪುತ್ರ ರವೀಂದ್ರನಿಗೆ ನ.8 ಮತ್ತು 9ರಂದು ವಿವಾಹ ನಿಶ್ಚಯ ವಾಗಿತ್ತು.

ತೆರಕಣಾಂಬಿಯ ವೆಂಕಟೇಶ್ವರ ಭವನದಲ್ಲಿ ವಿವಾಹ ನಡೆಸಲು ನಿಶ್ಚಯಿಸಿ ಲಗ್ನ ಪತ್ರಿಕೆ ಮುದ್ರಿಸಿ ನೆಂಟರಿಷ್ಟರಿಗೆ ಆಹ್ವಾನಿಸಲಾಗಿತ್ತು.

ಮದುವೆ ಹತ್ತಿರ ಬರುತ್ತಿದ್ದಂತೆ 2 ಲಕ್ಷ ರೂ. ಸಾಲ ಕೊಡುತ್ತೇನೆಂದು ಹೇಳಿದ್ದ ವ್ಯಕ್ತಿ ಕೊನೇ ಘಳಿಗೆಯಲ್ಲಿ ಕೈಕೊಟ್ಟಿದ್ದ. ಸಾಲದ ಹಣ ದೊರೆಯದ ಹಿನ್ನೆಲೆಯಲ್ಲಿ ನಿಗದಿತ ದಿನದಂದು ಮದುವೆ ಮಾಡಿಕೊಡಲು ಸಾಧ್ಯವಿಲ್ಲ ಎಂದು ಸಿದ್ದರಾಜಶೆಟ್ಟಿ ಕೈಚೆಲ್ಲಿದ್ದರು ಎನ್ನಲಾಗಿದೆ.

ದಿಢೀರ್‌ ಬೆಳವಣಿಗೆಯಿಂದ ಕಂಗಾಲಾದ ವರ ರವೀಂದ್ರ ನಗರದ ಪೂರ್ವ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ.
ಸಬ್‌ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ, ವಧುವಿನ ಪಾಲಕರು ಹಾಗೂ ಬಂಧುಗಳನ್ನು ಕರೆಸಿ ವಿಚಾರಿಸಿದರು. ಕೇವಲ ಮದುವೆ ದಿನದ
ಊಟದ ಖರ್ಚಿಗೆ ಹಣ ಇಲ್ಲ ಎಂಬ ಕಾರಣಕ್ಕೆ ಮದುವೆ ನಿಲ್ಲಿಸುವುದು ಬೇಡ. ಹಣ ಹೊಂದಿಸಿ ಕೊಡುತ್ತೇವೆ, ಅದೇ ಛತ್ರದಲ್ಲಿ ನಿಗದಿತ ದಿನವೇ ಮದುವೆ ಮಾಡಿಕೊಳ್ಳಬೇಕು ಎಂದು ತಮ್ಮ ಸ್ವಂತ ಖರ್ಚಿನಲ್ಲಿ 20 ಸಾವಿರ ರೂ.ಗಳನ್ನು ವಧುವಿನ ತಂದೆಗೆ ನೀಡಿದರು.

Advertisement

ಬಳಿಕ ತಮ್ಮ ಸಿಬ್ಬಂದಿಗಳಿಂದ ಕೈಲಾದಷ್ಟು ಹಣ ಸಹಾಯ ಮಾಡುವಂತೆ ಮನವಿ ಮಾಡಿಕೊಂಡರು. ಇದರಿಂದ ಠಾಣೆಯಲ್ಲಿಯೇ ಸುಮಾರು ಅಡುಗೆ ಸಾಮಗ್ರಿಗಳಿಗೆ ಆಗುವಷ್ಟು ಹಣ ಹೊಂದಿಕೆಯಾಯಿತು. ಅಲ್ಲದೇ ಮದುವೆ ದಿನವಾದ ಶುಕ್ರವಾರ ಸಬ್‌ ಇನ್ಸ್‌ಪೆಕ್ಟರ್‌ ಪುಟ್ಟಸ್ವಾಮಿ ಹಾಗೂ ಸಿಬ್ಬಂದಿ ತೆರಕಣಾಂಬಿಗೆ ತೆರಳಿ ನೂತನ ವಧು ವರರಿಗೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next