ಚನ್ನಪಟ್ಟಣ: ಖರೀದಿಸಿದ ರೇಷ್ಮೆಗೂಡು ಸಾಗಿಸಲು ಪೊಲೀಸರು ಅಡ್ಡಿಪಡಿಸಿ ದಂಡ ಹಾಕುತ್ತಾರೆ ಎಂದು ಆರೋಪಿಸಿ ಇಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೀಲರ್ಗಳು ಹರಾಜು ಪ್ರಕ್ರಿಯೆಯಿಂದ ದೂರ ಉಳಿದು ಪ್ರತಿಭಟಿಸಿದ ಘಟನೆ ನಡೆದಿದೆ.
ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭವಾದ ವೇಳೆ ರೀಲರ್ಗಳು ರೈತರು ಮಾರುಕಟ್ಟೆ ಗ್ಯಾಲರಿಗೆ ಹಾಕಿದ್ದ ರೇಷ್ಮೆಗೂಡಿಗೆ ಹರಾಜು ಬಿಡ್ ಮಾಡದೇ ಮಾರುಕಟ್ಟೆ ಆವರಣದಲ್ಲಿ ತಟಸ್ಥರಾಗಿ ಉಳಿದರು. ಏಕಾಏಕಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆಯಿಂದ ರೀಲರ್ಸ್ ಗಳು ದೂರ ಉಳಿದಿದ್ದರಿಂದ ಮಾರುಕಟ್ಟೆ ಅಧಿಕಾರಿಗಳು ಕೆಲ ಕಾಲ ವಿಚಲಿತರಾದರು.
ಇದರಿಂದ ಮಾರುಕಟ್ಟೆಗೆ ಗೂಡು ತಂದಿದ್ದ ರೈತರಲ್ಲೂ ಆತಂಕ ಮೂಡಿತ್ತು. ನಂತರ ರೀಲರ್ಗಳಬಳಿ ತೆರಳಿದ ಮಾರುಕಟ್ಟೆ ಸಹಾಯಕ ನಿರ್ದೇಶಕ ಹೊಂಬಾಳೇಗೌಡ, ಅಧಿಕಾರಿ ಸಿದ್ದರಾಜು ಕಾರಣ ಕೇಳಿದರು. ಇದಕ್ಕುತ್ತರಿಸಿದ ರೀಲರ್ಗಳು ನಾವು ಮಾರುಕಟ್ಟೆಯಲ್ಲಿ ಖರೀದಿ ಮಾಡಿ, ಗೂಡನ್ನು ತಮ್ಮ ಫಿಲೇಚರಿಗಳಿಗೆ ತೆಗೆದುಕೊಂಡು ಹೋಗಲು ಮಧ್ಯಾಹ್ನವಾಗುತ್ತದೆ. ಆ ವೇಳೆ ನಮ್ಮ ಮತ್ತು ಗೂಡು ಸಾಗಿಸುವ ಕಾರ್ಮಿಕರನ್ನು ಅಡ್ಡಗಟ್ಟುವ ಪೊಲೀಸರು ದಂಡ ವಿಧಿಸಿ, ಕಿರುಕುಳ ನೀಡುತ್ತಾರೆ. ಇದರಿಂದ ನಾವು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ಘೋಷಿಸಿದರು.
ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿನ ಹರಾಜು ಪ್ರಕ್ರಿಯೆ ಸ್ಥಗಿತಗೊಂಡಿದ್ದ ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ, ರೀಲರ್ಗಳು ಮತ್ತು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು. ಸಂಧಾನಕ್ಕೆ ರೀಲರ್ಗಳು ಒಪ್ಪದೇ ನೀವು ಈಗ ಹೇಳುತ್ತೀರೀ, ನಮಗೆ ನಾಳೆ ಆಗುವ ತೊಂದರೆಯನ್ನು ಯಾರು ತಡೆಗಟ್ಟುತ್ತಾರೆ. ನಾವು ಪೊಲೀಸರಿಂದ ಏಟು ತಿಂದು ಅವರಿಂದ ನಿಂದಿಸಿಕೊಂಡು ದಂಡ ಕಟ್ಟಬೇಕು. ಈಪುರುಷಾರ್ಥಕ್ಕೆ ನಾವು ಏಕೆ ಗೂಡು ಖರೀದಿಸಬೇಕೆಂದು ಪ್ರಶ್ನಿಸಿದರು.
ನಂತರ ಕೆಂಚೇಗೌಡ ದೂರವಾಣಿ ಮೂಲಕ ಸ್ಥಳೀಯ ಶಾಸಕರೂ ಆಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದರು.
ಮೊಬೈಲ್‌ನಲ್ಲಿ ರೀಲರ್ ಅಸೋಸಿಯೇಷನ್ ಮುಖಂಡರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ನಾನು ತಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ನೀವು ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಿದ್ದರೇ ರೇಷ್ಮೆ ಬೆಳೆಗಾರರಿಗೆ ಸಮಸ್ಯೆಯಾಗುತ್ತದೆ. ತಾವು ಈಗಲೇ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಈ ಬಗ್ಗೆ ಅವರು ತಕ್ಷಣವೇ ಸ್ಥಳೀಯ ಪೊಲೀಸರು ಮತ್ತು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿ ಹೇಳಿದ್ದಾರೆ. ಯಾವುದೇ ರೀತಿಯಲ್ಲೂ ತಮಗೆ ತೊಂದರೆಯಾಗದೆಂದು ಖಚಿತ ಭರವಸೆ ನೀಡಿದರು.
ಕುಮಾರಸ್ವಾಮಿ ಮಾತಿನಿಂದ ತೃಪ್ತರಾದ ರೀಲರ್ಸ್ ಗಳು ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.