Advertisement

ಪೊಲೀಸರು ಕಾನೂನು –ಜನಸಾಮಾನ್ಯರ ಕೊಂಡಿ

02:10 AM Jun 20, 2018 | Karthik A |

ಉಡುಪಿ : ಪೊಲೀಸರು ಕಾನೂನು ಮತ್ತು ಜನಸಾಮಾನ್ಯರ ನಡುವಿನ ಕೊಂಡಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಮಾಜದ ಶಾಂತಿ, ಸುವ್ಯವಸ್ಥೆಯಲ್ಲಿ ಪೊಲೀಸರ ಪಾತ್ರವೇ ಮುಖ್ಯವಾದದ್ದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಟಿ. ವೆಂಕಟೇಶ್‌ ನಾಯ್ಕ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪೊಲೀಸ್‌ ಇಲಾಖೆ ಹಾಗೂ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪೊಲೀಸ್‌ ದೂರು ಪ್ರಾಧಿಕಾರ, ಸಂತ್ರಸ್ತರ ಪರಿಹಾರ ಯೋಜನೆ ಹಾಗೂ ದಿನನಿತ್ಯದ ಕರ್ತವ್ಯದಲ್ಲಿ ಪೊಲೀಸರಿಗೆ ಎದುರಾಗುವ ಸಮಸ್ಯೆಗಳು ಎನ್ನುವ ವಿಷಯದ ಕುರಿತು ಎಸ್‌ಪಿ ಕಚೇರಿ ಸಭಾಂಗಣದಲ್ಲಿ ಜೂ. 19ರಂದು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ತನಿಖಾಧಿಕಾರಿಗಳು ಎಚ್ಚರ ತಪ್ಪದಿರಿ
ತನಿಖಾ ಸಂದರ್ಭ ತನಿಖಾಧಿಕಾರಿಗಳು ಮಾಡುವ ತಪ್ಪಿನಿಂದ ಪ್ರಕರಣದ ಸ್ವರೂಪವೇ ಬದಲಾಗುತ್ತದೆ. ಹೀಗಾದರೆ ಆರೋಪಿಯು ಶಿಕ್ಷೆಯಿಂದ ಪಾರಾಗುತ್ತಾನೆ. ಕಾನೂನು ಮೀರಿ ತಮಗಿಷ್ಟ ಬಂದಂತೆ ಯಾವುದೇ ಪ್ರಕರಣಗಳನ್ನು ನಿಭಾಯಿಸಬಾರದು. ಸೂಕ್ತವಾದ ಕಾನೂನಿನ ಅರಿವಿಲ್ಲದೆಯೋ ಅಥವಾ ಇನ್ನಾವುದೇ ಕಾರಣದಿಂದ ತನಿಖೆಯಲ್ಲಿ  ತನಿಖಾಧಿಕಾರಿಗಳಿಂದಾಗುವ ಹಲವಾರು ನ್ಯೂನತೆಗಳಿಂದ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯು ಶಿಕ್ಷೆಯಿಂದ ಸುಲಭವಾಗಿ ಪಾರಾಗುವಂತಾಗುತ್ತದೆ. ಸಾಕ್ಷಿಗಳ ವಿಚಾರಣೆ, ಪಂಚನಾಮೆ, ದಾಖಲಾತಿ ಸಂಗ್ರಹ, ಬಂಧನದ ಸಂದರ್ಭ ಸರಿಯಾಗಿ ಕಾನೂನು ಪಾಲಿಸಿದಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿತಸ್ಥನನ್ನು  ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾಕ್ಷಿಗಳ ಸಂಗ್ರಹದಲ್ಲಿ ತಪ್ಪುಗಳಾಗಬಾರದು. ತನಿಖೆಯೇ ಪ್ರಕರಣದ ಪ್ರಮುಖ ಘಟ್ಟವಾಗಿರುತ್ತದೆ. ಈ ಸಂದರ್ಭ ಎಡವಟ್ಟುಗಳಾದರೆ ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ವಿವೇಕಾನಂದ ಎಸ್‌. ಪಂಡಿತ್‌, ಉಡುಪಿ ವಕೀಲರ ಸಂಘದ ಅಧ್ಯಕ್ಷ ಎಚ್‌. ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಲತಾ ಸ್ವಾಗತಿಸಿದರು. ಉಡುಪಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಮಂಜುನಾಥ್‌ ನಿರೂಪಿಸಿದರು. ಅಧ್ಯಕ್ಷತೆ ವಹಿಸಿದ್ದ ಎಸ್‌ಪಿ ಲಕ್ಷ್ಮಣ ಬ. ನಿಂಬರಗಿ ವಂದಿಸಿದರು.

ಪೊಲೀಸರದ್ದು ಸವಾಲಿನ ಕೆಲಸ
ನಿರ್ಭೀತ, ಮುಕ್ತ, ಶಾಂತಿಯುತ ಚುನಾವಣೆಯಲ್ಲಿ ಪೊಲೀಸರ ಪಾತ್ರ ಅಭಿನಂದನೀಯ. ಒತ್ತಡದ ನಡುವೆ ಕಾರ್ಯನಿರ್ವಹಿಸುವುದೇ ಒಂದು ಸವಾಲು. ಆ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಜಿಲ್ಲಾಧಿಕಾರಿಗಳು

ಪರಸ್ಪರ ಅವಲಂಬಿತರು
ಪೊಲೀಸ್‌ – ನ್ಯಾಯಾಂಗ –  ಪತ್ರಿಕಾರಂಗ ಪರಸ್ಪರ ಅವಲಂಬಿತವಾಗಿರುವಂತಹದ್ದು. ಒಂದಕ್ಕೊಂದು ಬಾಂಧವ್ಯದ ಕೊಂಡಿ ಇದೆ. ಆಯಾ ಸ್ತಂಭಗಳು ಉತ್ತಮವಾಗಿ ಕೆಲಸ ನಿರ್ವಹಿಸಿದರೆ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗುವುದಿಲ್ಲ. ಪೊಲೀಸರು ಕಾನೂನಿನ ಮುಖವಿದ್ದಂತೆ.
– ಲಕ್ಷ್ಮಣ ಬ. ನಿಂಬರಗಿ, ಪೊಲೀಸ್‌ ವರಿಷ್ಠಾಧಿಕಾರಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next