Advertisement
ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಭದ್ರತೆ ಬಗ್ಗೆ ಪರಿಶೀಲಿಸಿದರು. ಬಳಿಕ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಆಯುಕ್ತ ಟಿ.ಸುನಿಲ್ ಕುಮಾರ್ ಅವರಿಂದ ಭದ್ರತೆ ಕುರಿತು ಮಾಹಿತಿ ಪಡೆದುಕೊಂಡರು. ಹೆಚ್ಚುವರಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಬಿ.ಕೆ.ಸಿಂಗ್ ಉಪಸ್ಥಿತರಿದ್ದರು.
Related Articles
Advertisement
ಭಾರೀ ಬಂದೋಬಸ್ತ್: ನಗರದ ಪ್ರತಿ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಬ್ ಇನ್‌ಸ್ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯಲ್ಲಿ ರಾತ್ರೀಯಿಡಿ ದ್ವಿಚಕ್ರ ವಾಹನಗಳಲ್ಲಿ, ಶಸ್ತ್ರಾಸ್ತ್ರ ಸಮೇತ ಗಸ್ತು ಗಸ್ತು ತಿರುಗಿದರು. ಇದರ ಜತೆಗೆ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಹಾಜರಿದ್ದರು. ಇದಕ್ಕಾಗಿ 200ಕ್ಕೂ ಹೆಚ್ಚು ಸಂಚಾರ ಪೊಲೀಸರ ಪ್ರತ್ಯೇಕ ತಂಡ ರಚಿಸಲಾಗಿದೆ.
ಮದ್ಯ ಸೇವಿಸಿ ಚಾಲನೆ ಮಾಡುವ ಚಾಲಕರನ್ನು ರಾತ್ರೀಯಿಡಿ ಕಲ್ಯಾಣ ಮಂಟಪಗಳಲ್ಲಿ ಬಂಧನದಲ್ಲಿರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 10ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳನ್ನು ಕಾಯ್ದಿರಿಸಿದ್ದು, ಮರುದಿನ ಬೆಳಗ್ಗೆ ಕೋರ್ಟ್ ಎದುರು ಹಾಜರು ಪಡಿಸಿ ದಂಡ ವಸೂಲಿ ಮಾಡಲಾಗುವುದು ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಹೇಳಿದರು.
ಟ್ರಾಫಿಕ್ ಜಾಮ್: ನೂತನ ವರ್ಷಾಚರಣೆಗೆ ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ರಸ್ತೆ ಸೇರಿ ನಗರದ ವಿವಿಧೆಡೆ ಜನರು ಜಮಾಯಿಸಿದ್ದರಿಂದ ಸೋಮವಾರ ಸಂಜೆಯಿಂದಲೇ ನಗರದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾತ್ರಿ 9 ಗಂಟೆ ನಂತರವಂತೂ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸುತ್ತಮುತ್ತ ವಾಹನ ಸವಾರರು ಗಂಟೆಗಟ್ಟಲೆ ಕಾಯುವಂತಾಯಿತು.
ಸಂಚಾರ ಪೊಲೀಸರಿಂದ ಬೀದಿ ನಾಟಕ: ಅಪರಾಧ ತಡೆ ಮಾಸಾಚರಣೆ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಬೀದಿ ನಾಟಕ ಹಾಗೂ ಜನಪದ ಗೀತೆಗಳ ಮೂಲಕ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು. ನಗರದ ಪುರಭವನ ಎದುರು ಕೇಂದ್ರ ಸಂಚಾರ ವಲಯ ಸಂಚಾರ ಪೊಲೀಸರು “ಎಚ್ಚರ ತಮ್ಮ ಎಚ್ಚರ’ ಎಂಬ ಬೀದಿ ನಾಟಕ ಮಾಡಿದರು.
ಹೊಸವರ್ಷಾಚರಣೆ ಸಂದರ್ಭದಲ್ಲಿ ಹೆಲ್ಮೆಟ್ ಇಲ್ಲದೇ, ಮದ್ಯ ಸೇವಿಸಿ ಪ್ರಯಾಣ ಮಾಡಬೇಡಿ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡದಿರಿ, ಸೆಲ್ಫಿ ತೆಗೆಯಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಅಪಘಾತವಾದರೆ ವಿಡಿಯೋ ಚಿತ್ರೀಕರಣ ಮಾಡುವ ಬದಲು ಅವರ ಪ್ರಾಣ ಉಳಿಸುವ ಕೆಲಸ ಮಾಡಿ ಎಂದು ಜಾಗೃತಿ ಮೂಡಿಸಿದರು.