Advertisement

ಪೊಲೀಸ್‌ ಶ್ರೀಧರ್‌ ಮನೆಯಲ್ಲಿ 1.55 ಕೋ. ರೂ. ಪತ್ತೆ

01:44 AM May 18, 2022 | Team Udayavani |

 ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮೀಸಲು ಹೆಡ್‌ಕಾನ್‌ಸ್ಟೇಬಲ್‌ (ಆರ್‌ಎಚ್‌ಸಿ) ಶ್ರೀಧರ್‌ ಮನೆಯಲ್ಲಿ 1.55 ಕೋಟಿ ರೂ. ನಗದು ಪತ್ತೆಯಾಗಿದ್ದು, ನೇಮಕಾತಿ ಅಕ್ರಮದಲ್ಲಿ ಕೋಟ್ಯಂತರ ರೂ. ಮೊತ್ತದಲ್ಲಿ ಡೀಲ್‌ ನಡೆದಿರುವುದಕ್ಕೆ ಸಾಕ್ಷ್ಯ ದೊರಕಿದೆ.

Advertisement

ಆರ್‌ಎಚ್‌ಸಿ ಶ್ರೀಧರ್‌ಗೆ ಸೇರಿದ ಚಾಮರಾಜಪೇಟೆಯಲ್ಲಿರುವ ಮನೆ ಮೇಲೆ ಮಂಗಳವಾರ ದಾಳಿ ನಡೆಸಿದ ಸಿಐಡಿ ಪೊಲೀಸರು, ಈ ವೇಳೆ ಕೊಠಡಿಯೊಂದರಲ್ಲಿ ಒಂದೆರಡು ಲಕ್ಷ ರೂ. ನಗದು ಪತ್ತೆಯಾಗಿದ್ದು, ಶೌಚಾಲಯದಲ್ಲಿ ಶೋಧಿಸಿದಾಗ 3 ಬ್ಯಾಗ್‌ಗಳಲ್ಲಿ ಕಂತೆ-ಕಂತೆ ನೋಟುಗಳು ಕಂಡು ಬಂದಿವೆ. ಬಳಿಕ ನೋಟು ಎಣಿಕೆ ಯಂತ್ರ ತಂದು ಎಣಿಕೆ ಮಾಡಿದಾಗ 1.55 ಕೋಟಿ ರೂ. ಎನ್ನುವುದು ಗೊತ್ತಾಗಿದೆ. ಅಲ್ಲದೆ, ಈತನ ಮನೆಯಲ್ಲಿ ಲಕ್ಷಾಂತರ ರೂ. ವಹಿವಾಟು ನಡೆದಿರುವುದಕ್ಕೆ ಬ್ಯಾಂಕ್‌ಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಅದರಲ್ಲಿ ಕೆಲ ತಿಂಗಳ ಹಿಂದೆ ಡಿವೈಎಸ್ಪಿ ಶಾಂತಕುಮಾರ್‌ ಖಾತೆಯಿಂದ ಶ್ರೀಧರ್‌ ಖಾತೆಗೆ ಹಾಗೂ ಈತನ ಖಾತೆಯಿಂದ ಶಾಂತಕುಮಾರ್‌ ಖಾತೆಗೆ ಲಕ್ಷಾಂತರ ರೂ. ಹಣ ವಹಿವಾಟು ನಡೆದಿರುವುದು ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ವಿಚಾರಣೆಯಲ್ಲಿ ಬಹಿರಂಗ
ಹೀಗಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣ ಕೊಟ್ಟವರು ಯಾರು? ಯಾರಿಂದ ಪಡೆಯಲಾಗಿದೆ? ಯಾರಿಗೆ ಸೇರಿದ ಹಣ? ಎಂಬ ಇತರ ಮಾಹಿತಿಗಳನ್ನು ಇಬ್ಬರು ಆರೋಪಿಗಳ ವಿಚಾರಣೆ ವೇಳೆ ಬಯಲಾಗಲಿದೆ. ಮೊದಲಿಗೆ ಶ್ರೀಧರ್‌ನನ್ನು ವಿಚಾರಣೆ ನಡೆಸಲಾಗುತ್ತದೆ. ಅನಂತರ ಡಿವೈಎಸ್ಪಿ ಶಾಂತಕುಮಾರ್‌ ವಿಚಾರಣೆ ನಡೆಸಲಾಗುತ್ತದೆ. ಒಂದು ವೇಳೆ ಇಬ್ಬರು ಗೊಂದಲ ಹೇಳಿಕೆಗಳನ್ನು ನೀಡಿದರೆ ಮುಖಾಮುಖೀ ವಿಚಾರಣೆ ನಡೆಸಿ ಸತ್ಯಾಂಶ ತಿಳಿಯಬೇಕಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಡಿವೈಎಸ್‌ಪಿ ಸಾಲಿ ಸೂಚನೆ ಮೇರೆಗೆ ಬಚ್ಚಿಟ್ಟಿದ್ದ !
ಪ್ರಕರಣದಲ್ಲಿ ಬಂಧನವಾಗಿರುವ ಡಿವೈಎಸ್ಪಿ ಶಾಂತಕುಮಾರ್‌ ಸೂಚನೆ ಮೇರೆಗೆ ಶ್ರೀಧರ್‌ ಕೋಟ್ಯಂತರ ರೂ. ನಗದನ್ನು ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದ ಎಂದು ಹೇಳಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಶಾಂತಕುಮಾರ್‌ ಸೂಚನೆ ಮೇರೆಗೆ ಪಿಎಸ್‌ಐ ಪರೀಕ್ಷೆಗೆ ಡೀಲ್‌ ಆಗಿದ್ದ ಅಭ್ಯರ್ಥಿಗಳಿಂದ ಇತ್ತೀಚೆಗೆ ಪಡೆದುಕೊಂಡಿದ್ದ ನಗದು ರೂಪದ ಹಣ ಎಂದು ಹೇಳಲಾಗಿದೆ. ಆದರೆ, ಆರೋಪಿ ಈ ಹಣಕ್ಕೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next