ಕಲಬುರಗಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ದಾಖಲಾಗಿದ್ದ ಒಟ್ಟು 152 ಸ್ವತ್ತಿನ ಪ್ರಕರಣಗಳ ಪೈಕಿ 77 ಪ್ರಕರಣಗಳನ್ನು ಭೇದಿಸಿರುವ ಜಿಲ್ಲಾ ಪೊಲೀಸರು 1124,37 ಗ್ರಾಂ ಚಿನ್ನ, 8,481 ಗ್ರಾಂ. ಬೆಳ್ಳಿ ಸೇರಿದಂತೆ ಒಟ್ಟು 74,27,270ರೂ. ಮೌಲ್ಯದ ಸ್ವತ್ತನ್ನು ಮರಳಿ ವಾರಸುದಾರರ ಕೈ ಸೇರಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ತಿಳಿಸಿದ್ದಾರೆ.
ನಗರದ ಡಿಎಆರ್ ಪರೇಡ್ ಮೈದಾನದಲ್ಲಿ ಪೊಲೀಸರ ವತಿಯಿಂದ ಆಯೋಜಿಸಿದ್ದ ಪ್ರಾಪರ್ಟಿ ರಿಟರ್ನ್ ಪರೇಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಕಮಲಾಪುರ, ಮಾಡಬೂಳ, ಮಹಗಾಂವ, ಅಫಜಲಪುರ, ನರೋಣಾ, ಜೇವರ್ಗಿ, ಕಾಳಗಿ, ಚಿತ್ತಾಪುರ ಹಾಗೂ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳು ಅಂದರೆ 2021ರ ನವೆಂಬರ್ 26ರಿಂದ 2022ರ ಮೇ 26ರ ವರೆಗೆ ಒಟ್ಟು 152 ಸ್ವತ್ತಿನ ಪ್ರಕರಣಗಳು ದಾಖಲಾಗಿದ್ದವು. ದಾಖಲಾಗಿದ್ದ ಪ್ರಕರಣಗಳ ಪತ್ತೆ ಕಾರ್ಯ ಕೈಗೊಂಡ ಅಧಿಕಾರಿಗಳು ಆರು ತಿಂಗಳಲ್ಲಿ ಗಣನೀಯ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 77 ಪ್ರಕರಣಗಳನ್ನು ಪತ್ತೆ ಮಾಡಿ, 133 ಜನ ಆರೋಪಿತರನ್ನು ದಸ್ತಗಿರಿ ಮಾಡಿದ್ದು, ಅವರಿಂದ ಮುದ್ದೆಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
1124.37ಗ್ರಾಂ ಬಂಗಾರ, 8481 ಗ್ರಾಂ ಬೆಳ್ಳಿ, ಜಿಯೋ ಕಂಪನಿಯ ರೂಟರ್, ಒಂದು ಕ್ರೂಜರ್ ವಾಹನ, 02 ಟೆಕ್ಸ್ಮೊ ಕಂಪನಿಯ ಮೋಟಾರ್, 02 ಟ್ರ್ಯಾಕ್ಟರ್ ಟ್ರ್ಯಾಲಿಗಳು, 22 ಸ್ಯಾಮಸಂಗ್ ಟ್ಯಾಬ್ ಗಳು, 10 ಮೊಬೈಲ್‌ಗಳು, 34 ಮೋಟಾರ್ ಸೈಕಲ್ ಗಳು, 09 ಸ್ಟೀಲ್ ಪ್ಲೇಟ್, 10 ಫೀಟ್ ಪಿವಿಸಿ ಪೈಪ್, 02 ಎತ್ತುಗಳು, 04 ಕುರಿಗಳು, 780 ಲೀಟರ್ ಟಿಸಿ ಆಯಿಲ್, 100 ಲೀಟರ್ ಡಿಜಲ್, ಒಂದು ತಾಮ್ರದ ಕಳಸಿ, ನಗದು ಹಣ 3,23,520ರೂ. ಒಟ್ಟು 74 ಲಕ್ಷ 27,270ರೂ. ಮೌಲ್ಯದ ಸ್ವತ್ತನ್ನು ಎಸ್ಪಿ. ಇಶಾ ಪಂತ್ ಅವರು ಅಧಿಕಾರಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ವಾರಸುದಾರರಿಗೆ ಮರಳಿ ನೀಡಿದರು. ಕಳ್ಳತನವಾಗಿದ್ದ ತಮ್ಮ ಸ್ವತ್ತನ್ನು ಮರಳಿ ಪಡೆದ ವಾರಸುದಾರರ ಹರ್ಷ ವ್ಯಕ್ತಪಡಿಸಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಚ್ಚುವರಿ ಎಚ್.ವಿ ಪ್ರಸನ್ನ ದೇಸಾಯಿ, ವಿಭಾಗದ ಡಿಎಸ್ಪಿ, ಸಿಪಿಐ ಹಾಗೂ ಪಿಎಸ್‌ಐ ಮತ್ತು ಸಿಬ್ಬಂದಿ ಪ್ರಾಪರ್ಟಿ ರಿಟರ್ನ್ ಪರೇಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
152 ಸ್ವತ್ತಿನ ಪ್ರಕರಣಗಳಲ್ಲಿ 77 ಪ್ರಕರಣ 6 ತಿಂಗಳಲ್ಲಿ ಪತ್ತೆ ಹಚ್ಚಲಾಗಿದೆ. ಇನ್ನುಳಿದ ಪ್ರಕರಣ ನಮ್ಮ ಅಧಿಕಾರಿಗಳು, ಸಿಬ್ಬಂದಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರಿಂದ ತಮ್ಮ ಸ್ವತ್ತುಗಳನ್ನು ಪಡೆದವರು ಖುಷಿಯಾಗಿರುವುದು ಇಲಾಖೆಗೂ ಹೆಮ್ಮೆ.
–ಇಶಾ ಪಂತ್, ಎಸ್ಪಿ