ಬೆಂಗಳೂರು: ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಶಿಫಾರಸು ಮಾಡುವುದರಲ್ಲಿ ತಪ್ಪೇನು ಕಂಡು ಬರುತ್ತಿಲ್ಲ ಎಂದು ಹೈಕೋರ್ಟ್ ಮೌಖೀಕವಾಗಿ ಅಭಿಪ್ರಾಯಪಟ್ಟಿದೆ.
ಸಚಿವರು ಹಾಗೂ ಶಾಸಕರ ಶಿಫಾರಸು ಮೇರೆಗೆ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳನ್ನು ವಾರ್ಗಾವಣೆ ಮಾಡಲಾಗುತ್ತಿದ್ದಾರೆ. ಇದು ಸುಪ್ರೀಂ ಕೊರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿಸಿ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಶೋಕ ಬಿ.ಹಿಂಚಿಗೇರಿ ಅವರಿದ್ದ ಏಕಸದಸ್ಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದಿಸಿ, “ಪೊಲೀಸ್ ಎಸ್ಟಾಬ್ಲಿಸ್‌ಮ್ಮೆಂಟ್ ಬೋರ್ಡ್’ ಮಾತ್ರ ಪೊಲೀಸರ ವರ್ಗಾವಣೆ ಮಾಡಬೇಕು. ಇದರಲ್ಲಿ ರಾಜಕಾರಣಿಗಳು ಮಧ್ಯಪ್ರವೇಶ ಮಾಡುವಂತಿಲ್ಲ. ಆದರೆ, ಸಚಿವರು ಮತ್ತು ಶಾಸಕರ ಶಿಫಾರಸು ಮೇರೆಗೆ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ವರ್ಗಾವಣೆ ಮಾಡುತ್ತಿದ್ದಾರೆ. ಇದು ರಾಜಕಾರಣಿಗಳ ಅಧಿಕಾರ ದುರುಪಯೋಗ ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಸಾರ್ವಜನಿಕರಿಗೆ ತೊಂದರೆ ನೀಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳಿಗೆ ದೂರುಗಳು ಬರುತ್ತವೆ. ಇಂತಹ ದೂರು ಬಂದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಶಿಫಾರಸು ಮಾಡಬಹುದು. ಅದಕ್ಕೆ ಅವಕಾಶವೂ ಇದೆ. ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಜನಪ್ರತಿನಿಧಿಗಳು ಶಿಫಾರಸು ಮಾಡಬಹುದು ಎಂದು ಸುಪ್ರೀಂಕೋರ್ಟ್ ಆದೇಶವೂ ಹೇಳಿದೆ. ಹೀಗಾಗಿ, ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಜನಪ್ರತಿನಿಧಿಗಳು ಶಿಫಾರಸು ಮಾಡುವುದಲ್ಲಿ ತಪ್ಪಿದೆ ಎಂಬುದು ಕಂಡು ಬರುತ್ತಿಲ್ಲ ಎಂದು ಮೌಖೀಕವಾಗಿ ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಾದಿಸಿ, ಅರ್ಜಿ ವಿಚಾರಣೆಗೆ ಅರ್ಹವಿಲ್ಲ. ಆದ್ದರಿಂದ ಅರ್ಜಿ ವಜಾಗೊಳಿಸುವಂತೆ ನ್ಯಾಯಪೀಠವನ್ನು ಕೋರಿದರು.
ಪ್ರಕರಣದ ಹಿನ್ನಲೆ: ವಿ.ಶಶಿಧರ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿ, ಶಾಸಕರು, ಸಚಿವರ ಶಿಫಾರಸು ಮೇರೆಗೆ ಮುಖ್ಯಮಂತ್ರಿಗಳು ಪೊಲೀಸ್ ಅಧಿಕಾರಿಗಳನ್ನು ಬೇಕಾಬಿಟ್ಟಿ ವರ್ಗಾವಣೆ ಮಾಡುತ್ತಿದ್ದಾರೆ. ಆ ಮೂಲಕ ಅಧಿಕಾರ ದುರ್ಬಳಕೆ ಮಾಡುತ್ತಾ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಾಭ ಮಾಡಿಕೊಂಡಿದ್ದಾರೆ. ಪೊಲೀಸ್ ಎಸ್ಟಾಬ್ಲಿಷ್ಮೆಂಟ್ ಬೋರ್ಡ್ ಮಾತ್ರ ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ತೀರ್ಮಾನಿಸಬೇಕು. ಆದ್ದರಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಗಳ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕೋರಿದ್ದರು. ಆದರೆ, ಈ ದೂರಿನ ವಿಚಾರಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ತಿಳಿಸಿದ್ದ ಎಸಿಬಿ ದೂರು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶಶಿಧರ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.