ಕಟಪಾಡಿ: ಉದ್ಯಾವರ ಕುತ್ಪಾಡಿಯಲ್ಲಿ ನಡೆದ
ಕೋಳಿ ಅಂಕಕ್ಕೆ ಪೊಲೀಸ್ ದಾಳಿಯನ್ನು ಖಂಡಿಸಿ, ಮುಖಂಡರು ವ್ಯಾಘ್ರ ಚಾಮುಂಡಿಗೆ ಮೊರೆ ಹೋದ ಘಟನೆಯು ಬುಧವಾರ ನಡೆದಿದೆ.ಉದ್ಯಾವರ ಕುತ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ವ್ಯಾಘ್ರ ಚಾಮುಂಡಿ ಗರೋಡಿಯಲ್ಲಿ ಡಿ. 10ರಂದು ನೇಮೋತ್ಸವ ನಡೆದಿತ್ತು.
ಇದರ ಅಂಗವಾಗಿ ಬಳಿಕ ದೈವಕ್ಕೆ ರಕ್ತಾಹಾರ ನೀಡುವ ಸಲುವಾಗಿ ಸಾಂಪ್ರದಾಯಿಕವಾಗಿ ನಡೆದುಬಂದ ಕೋಳಿ ಅಂಕ ಡಿ. 22ರ ಮಧ್ಯಾಹ್ನ ಆರಂಭಗೊಂಡಿತ್ತು. ಅದಾಗಿ ಕೆಲವೇ ಕ್ಷಣಗಳಲ್ಲಿ ಪೊಲೀಸರು ದಾಳಿ ನಡೆಸಿ ಕೋಳಿ ಅಂಕವನ್ನು ಸ್ಥಗಿತಗೊಳಿಸಿದ್ದರು.
ಈ ನಡುವೆ, ಡಿ.25ರಂದು ಊರಿನ ಗುರಿಕಾರರು ಹಾಗೂ ಚಾಕರಿ ವರ್ಗ ಹಾಗೂ ಗ್ರಾಮಸ್ಥರು ಸೇರಿ ಪೊಲೀಸರ ಈ ದಾಳಿಯ ಬಗ್ಗೆ ವ್ಯಾಘ್ರ ಚಾಮುಂಡಿ ಮುಂದೆ ಹೇಳಿಕೊಂಡಿದ್ದಾರೆ. ರಕ್ತಾಹಾರ ಕೊಡುವ ಸಂಪ್ರದಾಯದಂತೆ ಕಾರ್ಯಕ್ರಮ ನಡೆದಿದೆ.
ಇದನ್ನು ಪೊಲೀಸರು ತಡೆದಿದ್ದಾರೆ. ಇದರಿಂದ ಇನ್ನು ಮುಂದಕ್ಕೆ ಸನ್ನಿಧಾನದಲ್ಲಿ ಆಗುವ ಕಾರ್ಯಭಾಗಕ್ಕೆ ಯಾವುದೇ ದೋಷ,
ಯಾರ ಮೇಲೂ ಅಪವಾದ ಬಾರದಂತೆ, ದ್ವೇಷ ಕಟ್ಟಿಕೊಳ್ಳದೆ ಎಲ್ಲರನ್ನೂ ರಕ್ಷಣೆ ಮಾಡು. ಮುಂದಕ್ಕೆ ಒಳ್ಳೆಯ ಕೆಲಸಗಳು ನಿರ್ವಿಘ್ನವಾಗಿ ನಡೆಯುವಂತೆ ಅನುಗ್ರಹಿಸು ಎಂದು ಬೇಡಿಕೊಂಡಿದ್ದಾರೆ.