Advertisement

ಮೀಟರ್‌ ಬಡ್ಡಿ  ವ್ಯವಹಾರ ನಡೆಸುವವರ ವಿರುದ್ಧ  ಕ್ರಮ:ಟಿ.ಆರ್‌. ಸುರೇಶ್

12:19 PM Oct 13, 2018 | |

ಮಹಾನಗರ: ಮೀಟರ್‌ ಬಡ್ಡಿ ವ್ಯವಹಾರ ನಡೆಸುವವರ ವಿರುದ್ಧ ಕೇಸು ದಾಖಲಿಸಿ ಕ್ರಮ ಜರಗಿಸುವಂತೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಲಾಗಿದೆ. ಬಡ್ಡಿ ವ್ಯವಹಾರ ನಡೆಸುವವರ ಬಗ್ಗೆ ಜನರು ನಿರ್ಭೀತಿಯಿಂದ ದೂರು ಸಲ್ಲಿಸಬಹುದು. ದೂರುದಾರರಿಗೆ ಸೂಕ್ತ ರಕ್ಷಣೆ ಒದಗಿಸಲಾಗುವುದು ಎಂದು ಪೊಲೀಸ್‌ ಕಮಿಷನರ್‌ ಟಿ.ಆರ್‌. ಸುರೇಶ್‌ ತಿಳಿಸಿದರು.

Advertisement

ಶುಕ್ರವಾರ ತಮ್ಮ ಕಚೇರಿಯಲ್ಲಿ ನಡೆದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ನಾಗರಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಗುರುಪುರ ಕೈಕಂಬದ ವ್ಯಕ್ತಿಯೊಬ್ಬರು ಕರೆ ಮಾಡಿ, ಬಡ್ಡಿಗೆ ಹಣ ನೀಡುವವರು ಅಧಿಕ ಬಡ್ಡಿಯನ್ನು ವಸೂಲಿ ಮಾಡುತ್ತಿದ್ದಾರೆ; ಬಡ್ಡಿ ನೀಡಲು ನಿರಾಕರಿಸಿದರೆ ಕಿರುಕುಳ ಕೊಡುತ್ತಿದ್ದಾರೆ ಎಂದು ದೂರು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು ಮೀಟರ್‌ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿ ಈಗಾಗಲೇ ಸಾಕಷ್ಟು ದೂರುಗಳು ಬಂದಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ನಿರ್ದಿಷ್ಟ ಪ್ರಕರಣಗಳಿದ್ದರೆ ಈಗಲೂ ದೂರು ಕೊಡಬಹುದು ಎಂದರು.

ಮಹಿಳೆಯರೊಂದಿಗೆ ಅಸಭ್ಯ ವರ್ತನೆ
ಕೋಡಿಕಲ್‌ ಕಟ್ಟೆಯ ಬಳಿ ಇರುವ ರಂಗ ಮಂದಿರದಲ್ಲಿ ಮದ್ಯಪಾನ ಸೇವಿಸಿ ಗಲಾಟೆ ಮಾಡುತ್ತಿದ್ದಾರೆ. ಅಲ್ಲಿನ ಖಾಲಿ ಜಾಗದಲ್ಲಿ ಕ್ರಿಕೆಟ್‌ ಆಡಲು ಅವಕಾಶ ಇಲ್ಲದಿದ್ದರೂ ಕ್ರಿಕೆಟ್‌ ಆಡುತ್ತಿದ್ದು, ಚೆಂಡು ಆಸುಪಾಸಿನ ಮನೆಗಳ ಮೇಲೆ ಬೀಳುತ್ತದೆ; ಕ್ರಿಕೆಟ್‌ ಆಡುವವರಲ್ಲಿ ಕೆಲವರು ಸ್ಥಳೀಯ ಯುವತಿಯರ ಹಾಗೂ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ನಾಗರಿಕರೊಬ್ಬರು ದೂರು ಸಲ್ಲಿಸಿದರು. ಈ ಬಗ್ಗೆ ಮಹಾನಗರ ಪಾಲಿಕೆಯ ಜತೆ ಮಾತನಾಡಿ ಭದ್ರತೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಕಮಿಷನರ್‌ ತಿಳಿಸಿದರು.

ಕಂಕನಾಡಿ ಸಹಿತ ವಿವಿಧೆಡೆ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಸರಿಯಾಗಿ ಇರಿಸುತ್ತಿಲ್ಲ. ಕೆಲವು ಕಡೆ ಬ್ಯಾರಿಕೇಡ್‌ಗಳು ಫುಟ್‌ಪಾತ್‌ನಲ್ಲಿ ಇರಿಸಿರುವುದರಿಂದ ಪಾದಚಾರಿಗಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಬಂದಾಗ ಈ ಬಗ್ಗೆ ಗಮನ ಹರಿಸುವಂತೆ ಸಂಚಾರಿ ಗಸ್ತು ದಳದ ಪೊಲೀಸರಿಗೆ ಕಮಿಷನರ್‌ ಸೂಚಿಸಿದರು.ಸುರತ್ಕಲ್‌ ಪ್ರದೇಶದಲ್ಲಿ ಮಹಿಳೆಯರ ಕುತ್ತಿಗೆಯಿಂದ ಸರ ಕಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ವಾಹನಗಳ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ ಎಂದು ಕಮಿಷನರ್‌ ಅವರು ಸುರತ್ಕಲ್‌ನ ನಾಗರಿಕರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ತಿಳಿಸಿದರು.

ಟಿಕೆಟ್‌ ನೀಡದ ಸಿಟಿ ಬಸ್‌
ಕೆಲವು ಸಿಟಿ ಬಸ್‌ಗಳಲ್ಲಿ ಈಗಲೂ ಟಿಕೆಟ್‌ ನೀಡುತ್ತಿಲ್ಲ ಎಂದು ನಾಗರಿಕರು ದೂರು ನೀಡಿದರು. ಟಿಕೆಟ್‌ ನೀಡದ ಬಸ್‌ ನಿರ್ವಾಹಕರ ಬಗ್ಗೆ ನಿರ್ದಿಷ್ಟವಾಗಿ ದೂರು ಸಲ್ಲಿಸಿದರೆ ಕ್ರಮ ಜರಗಿಸಲಾಗುವುದು ಎಂದು ಕಮಿಷನರ್‌ ತಿಳಿಸಿದರು. ವಾಹನ ಚಲಾಯಿಸುವಾಗ ಮೊಬೈಲ್‌ ಫೋನ್‌ನಲ್ಲಿ ಮಾತನಾಡುವುದು ಮಾತ್ರವಲ್ಲ ಇಯರ್‌ ಫೋನ್‌ನಲ್ಲಿ ಮಾತನಾಡುವುದು ಕೂಡ ತಪ್ಪು. ಆದ್ದರಿಂದ ಇಯರ್‌ ಫೋನ್‌ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುವವರ ವಿರುದ್ಧವೂ ಕ್ರಮ ಜರಗಿಸಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಇದು 91ನೇ ಫೋನ್‌ ಇನ್‌ ಕಾರ್ಯಕ್ರಮ ವಾಗಿದ್ದು, ಒಟ್ಟು 28 ಕರೆಗಳು ಬಂದವು.

Advertisement

ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ದಕ್ಷಿಣ ಕನ್ನಡ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ, ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌, ಎಸಿಪಿ ಮಂಜುನಾಥ ಶೆಟ್ಟಿ, ಇನ್ಸ್‌ಪೆಕ್ಟರ್‌ ಗಳಾದ ಅಮಾನುಲ್ಲಾ, ಕಬ್ಟಾಳ್‌ ರಾಜ್‌, ಪಿಎಸ್‌ಐ ಕಮಲಾ, ಎಎಸ್‌ಐಗಳಾದ ಸುಕುಮಾರ್‌, ಯೂಸುಫ್‌, ಹೆಡ್‌ ಕಾನ್ಸ್‌ಟೆಬಲ್‌ ಪುರುಷೋತ್ತಮ ಅವರು ಉಪಸ್ಥಿತರಿದ್ದರು.

ಕುದ್ರೋಳಿ, ಮಂಗಳಾದೇವಿ  ಘನ ವಾಹನಗಳ ಓಡಾಟ ಸಂಜೆ 4ರ ಬಳಿಕ ನಿಷೇಧ 
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಮಂಗಳಾದೇವಿ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ನಡೆಯುತ್ತಿದ್ದು, ಜನರ ಓಡಾಟ ಜಾಸ್ತಿ ಇರುವುದರಿಂದ ಈ ಎರಡೂ ಕ್ಷೇತ್ರಗಳ ಪರಿಸರದಲ್ಲಿ ಘನ ವಾಹನಗಳ ಸಂಚಾರ ನಿಯಂತ್ರಣಕ್ಕೆ ಇಂದಿನಿಂದಲೇ ಕ್ರಮ ಜರಗಿಸಲಾಗುವುದು. ಸಂಜೆ 4 ಗಂಟೆ ಬಳಿಕ ಈ ಎರಡೂ ದೇಗುಲಗಳ ಪರಿಸರದ ರಸ್ತೆಗಳಲ್ಲಿ ಅ. 19ರ ತನಕ ಘನ ವಾಹನಗಳ ಓಡಾಟವನ್ನು ನಿಷೇಧಿಸುವ ಪ್ರಸ್ತಾವವಿದೆ ಎಂದು ಕಮಿಷನರ್‌ ವಿವರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next