ಬಂಟ್ವಾಳ: ಬಿಳಿ ಟೀ ಶರ್ಟ್, ಖಾಕಿ ಪ್ಯಾಂಟ್ ಹಾಕಿಕೊಂಡು ಮೇ 5ರಂದು ಬೆಳಗ್ಗೆ 7 ಗಂಟೆಯ ಸುಮಾರಿಗೆ ಟ್ರಾಫಿಕ್ ಪೊಲೀಸ್ ಠಾಣೆಯ ಎಲ್ಲ ಸಿಬಂದಿ ಸಾಲಾಗಿ ರಸ್ತೆಯಲ್ಲಿ ಶಿಸ್ತುಬದ್ಧವಾಗಿ ನಡೆದುಕೊಂಡು ಹೋಗುವಾಗ ಎಲ್ಲರ ಚಿತ್ತ ಅವರ ಮೇಲೆಯೇ ಇತ್ತು. ಏನಿವತ್ತು ವಿಶೇಷ, ಪೊಲೀಸರು ಬಿಳಿಬಣ್ಣದ ಬಟ್ಟೆಯಲ್ಲಿ ಮಿಂಚುತ್ತಿದ್ದಾರೆ ಎಂದು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಸೂಚನೆಯಂತೆ ಪೊಲೀಸ್ ಸಿಬಂದಿ ನಿತ್ಯದ ಒತ್ತಡಗಳನ್ನು ಮೀರಿ ದೈಹಿಕ ಆರೋಗ್ಯವನ್ನು ಕಾಪಾಡಿಕೊ ಳ್ಳುವುದಕ್ಕಾಗಿ ಕರ್ತವ್ಯದ ನಡುವೆ ಟ್ರೆಕ್ಕಿಂಗ್ ಹೊರಟಿದ್ದರು.
ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆ ಸಿಬಂದಿ ವಾಕಿಂಗ್‌ನಲ್ಲಿ ತೆರಳಿದ್ದು ನರಹರಿ ಸದಾಶಿವ ದೇವಸ್ಥಾನಕ್ಕೆ. ದಿನದ 24 ಗಂಟೆಗಳೂ ಕೆಲಸದ ಒತ್ತಡದ ನಡುವೆ ಆರೋಗ್ಯದ ಕಡೆಗೆ ಗಮನ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ವಾರದಲ್ಲಿ ಒಮ್ಮೆಯಾದರೂ ಟ್ರೆಕ್ಕಿಂಗ್, ವಾಕಿಂಗ್, ಯೋಗದಲ್ಲಿ ತೊಡಗಿಕೊಳ್ಳಬೇಕು ಎಂಬ ಸೂಚನೆಯನ್ನು ಪಾಲಿಸಿದ್ದರು. ಜಿಲ್ಲಾ ಪೋಲೀಸ್ ಅಧೀಕ್ಷಕರ ಆದೇಶ ದಂತೆ ಮಾನಸಿಕ ಒತ್ತಡ ಕಡಿಮೆ ಮಾಡಲು ತಂಡದೊಂದಿಗೆ ಟ್ರೆಕ್ಕಿಂಗ್ ಹೋಗುತ್ತಿದ್ದೇವೆ ಎಂದು ಮೆಲ್ಕಾರ್ ಟ್ರಾಫಿಕ್ ಎಸ್.ಐ. ಮಂಜುನಾಥ್ ತಿಳಿಸಿದ್ದಾರೆ.
ಎಸ್.ಪಿ. ಹೊಸ ಪ್ರಯತ್ನ
ಎಸ್.ಪಿ.ಯವರ ಹೊಸ ಪ್ರಯ ತ್ನವಾಗಿ ಪ್ರತಿವಾರ ವಿಭಿನ್ನ ರೀತಿಯ ಕಾರ್ಯಕ್ರಮಗಳ ಮೂಲಕ ಪೊಲೀಸರ ಮಾನಸಿಕ, ದೈಹಿಕ, ಬೌದ್ಧಿಕ ಮಟ್ಟವನ್ನು ಉತ್ತಮ ಪಡಿಸುವ ಯೋಜನೆಯಾಗಿದೆ. ಇಂತಹ ಟ್ರೆಕ್ಕಿಂಗ್ ಮನಸ್ಸಿನ ನೆಮ್ಮದಿ ಯಾಗಿರಲು ಸಹಕಾರಿಯಾಗಿದೆ. ನರಹರಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಮೂಲಕ ಸಾಗಿ ದೇವರ ದರ್ಶನ ಪಡೆದು ಅಧೀಕ್ಷಕರ ಚಿಂತನೆಗಳನ್ನು ಅನುಷ್ಠಾನಿಸಿದ್ದಾಗಿ ಅವರು ಹೇಳಿದರು.