Advertisement

ನಟೋರಿಯಸ್ ದುಬೆ Inside ಸ್ಟೋರಿ; ಅಂದು ಜೈಲು ಆವರಣದಲ್ಲಿ ಸಚಿವರನ್ನೇ ಕೊಂದಿದ್ದ!

07:07 PM Jul 08, 2020 | Nagendra Trasi |

ಮಣಿಪಾಲ್: ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟೋರಿಯಸ್ ಕ್ರಿಮಿನಲ್ ವಿಕಾಸ್ ದುಬೆಯ ಬಂಧನಕ್ಕಾಗಿ ಮೂರು ರಾಜ್ಯಗಳಲ್ಲಿ ಬಲೆ ಬೀಸಿದ್ದಾರೆ. ಸದ್ಯ ದುಬೆ ದೆಹಲಿಯಲ್ಲಿ ಅಡಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸ್ ಅಧಿಕಾರಿಗಳು ಆತನ ಬಂಧನಕ್ಕಾಗಿ ಹೈ ಅಲರ್ಟ್ ನಲ್ಲಿ ಇರುವಂತೆ ಸೂಚಿಸಿರುವುದಾಗಿ ವರದಿ ತಿಳಿಸಿದೆ.

Advertisement

ಈ ನಟೋರಿಯಸ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆಯನ್ನು ಉತ್ತರಪ್ರದೇಶ ಪೊಲೀಸರು ಬೆಳೆಯಲು ಬಿಟ್ಟಿರುವುದಕ್ಕೆ ಇಂದು ಅದಕ್ಕೆ ತಕ್ಕುದಾದ ಬೆಲೆ ತೆತ್ತಿದ್ದಾರೆ ಎಂದು ವರದಿಯೊಂದು ವಿಶ್ಲೇಷಿಸಿದೆ. ವಿಕಾಸ್ ದುಬೆ ಕೇವಲ ರಾಜಕೀಯವಾಗಿ ಮಾತ್ರವಲ್ಲ, ಆತನ ಜತೆಗೆ ಭ್ರಷ್ಟ ಪೊಲೀಸರು ಕೂಡಾ ಸೇರಿಕೊಂಡ ಪರಿಣಾಮ ಆತ ನಟೋರಿಯಸ್ ಆಗಿ ಬೆಳೆಯಲು ಸಾಧ್ಯವಾಯ್ತು ಎಂದು ಮನೋಜ್ ಶುಕ್ಲಾ ಎಎನ್ ಐಗೆ ತಿಳಿಸಿದ್ದಾರೆ.

ಹಾಲಿ ಸಚಿವರನ್ನೇ ಠಾಣೆಯೊಳಗೆ ಹತ್ಯೆಗೈದಿದ್ದ ವಿಕಾಸ್ ದುಬೆ!

ವಿಕಾಸ್ ದುಬೆ ಎಂಬ ಕುಖ್ಯಾತ ಹಂತಕನಿಗೆ ಉತ್ತರಪ್ರದೇಶ ಪೊಲೀಸರು ರಕ್ಷಣೆ ನೀಡಿದ್ದಕ್ಕೆ ಪ್ರತಿಯಾಗಿ ಬೆಲೆ ತೆತ್ತಿದ್ದಾರೆ…ಇದು ಮನೋಜ್ ಶುಕ್ಲಾ ನೋವಿನ ನುಡಿ. ಯಾಕೆಂದರೆ ಈ ವ್ಯಕ್ತಿ ಬೇರೆ ಯಾರೂ ಅಲ್ಲ, ಅಂದು ಉತ್ತರಪ್ರದೇಶದಲ್ಲಿ ರಾಜ್ ನಾಥ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ ದುಬೆಯಿಂದ ಕೊಲೆಯಾಗಿದ್ದ ಸಂತೋಷ್ ಶುಕ್ಲಾ ಸಹೋದರ!

ಎಎನ್ ಐ ಜತೆ ಮಾತನಾಡಿದ್ದ ಮನೋಜ್ ದುಬೆಯ ಪಾತಕ ಕೃತ್ಯದ ವಿವರಗಳನ್ನು ಜಗಜ್ಜಾಹೀರುಗೊಳಿಸಿದ್ದಾರೆ. 1996ರಲ್ಲಿ ಶಿವಾಲಿ ನಗರ ಪಂಚಾಯ್ತಿ ಮುಖ್ಯಸ್ಥ ಲಲ್ಲಾನ್ ಬಾಜಪೇಯಿ ಹಾಗು ವಿಕಾಸ್ ದುಬೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದರು. ಏತನ್ಮಧ್ಯೆ ವಿಕಾಸ್ ಮತ್ತು ಬಾಜಪೇಯಿ ಸಹೋದರನ ನಡುವೆ ಜಟಾಪಟಿ ನಡೆದಿತ್ತು. ನಂತರ ಬಾಜಪೇಯಿ ದೂರು ನೀಡಿಬಿಟ್ಟಿದ್ದ. ಆದರೆ ವಿಕಾಸ್ ತನ್ನ ಅಕ್ರಮ ದಂಧೆ ಮುಂದುವರಿಸಿದ್ದ. ಮಾಫಿಯಾ ರೀತಿ ವರ್ತಿಸುತ್ತಿದ್ದ ವಿಕಾಸ್ ದುಬೆ ಲಾರಿ ಚಾಲಕರಿಂದ, ಆಟೋ ಡ್ರೈವರ್ ಗಳಿಂದ, ಹಣ್ಣು ಮಾರಾಟಗಾರರಿಂದ ಹಣ ವಸೂಲಿ ಮಾಡುತ್ತಿದ್ದ. ಕಾಲ ಕಳೆಯುತ್ತಿದ್ದಂತೆ ಲಲ್ಲಾನ್ ಬಾಜಪೇಯಿ ಪಂಚಾಯತ್ ಅಧ್ಯಕ್ಷನಾಗಿ ನೇಮಕವಾಗಿದ್ದ. ಆಗ ದುಬೆಯ ರೋಲ್ ಕಾಲ್ ಅನ್ನು ವಿರೋಧಿಸಿದ್ದ. ಇದರಿಂದ ಇಬ್ಬರ ನಡುವೆ ವೈಷಮ್ಯ
ಪ್ರಾರಂಭವಾಗಲು ಕಾರಣವಾಗಿತ್ತು ಎಂದು ಶುಕ್ಲಾ ವಿವರಿಸಿದ್ದಾರೆ.

Advertisement

ಉತ್ತರಪ್ರದೇಶದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹರಿ ಕಿಶನ್ ಬಿಎಸ್ಪಿ ಟಿಕೆಟ್ ನಿಂದ ಸ್ಪರ್ಧಿಸಿದ್ದರೆ, ಶುಕ್ಲಾ ಸಹೋದರ ಸಂತೋಷ್ ಶುಕ್ಲಾ ಬಿಜೆಪಿ ಟಿಕೆಟ್ ನಿಂದ ಅಖಾಡಕ್ಕಿಳಿದಿದ್ದರು. ಈ ಚುನಾವಣೆಯಲ್ಲಿ ಹರಿಕಿಶನ್ ಗೆಲುವು ಸಾಧಿಸಿದ್ದರು. ಅಂದು ಚುನಾವಣೆಯಲ್ಲಿ ದುಬೆ ಹರಿಕಿಶನ್ ಗೆ ಬೆಂಬಲ ನೀಡಿದ್ದ. ಲಲ್ಲಾನ್ ಬಾಜಪೇಯಿ ಸಂತೋಷ್ ಶುಕ್ಲಾ ಅವರನ್ನು ಬೆಂಬಲಿಸಿದ್ದ. ಇದರಿಂದ ಇಬ್ಬರ ನಡುವಿನ ದ್ವೇಷ ಮತ್ತಷ್ಟು ಇಮ್ಮಡಿಯಾಗಿತ್ತು.

ರಾಜಕೀಯ ಕೃಪಾಕಟಾಕ್ಷ ಹೊಂದಿದ್ದ ದುಬೆ ತನ್ನ ಕ್ರಿಮಿನಲ್ ಚಟುವಟಿಕೆಯನ್ನು ಯಾವುದೇ ಭಯವಿಲ್ಲದೆ ಮುಂದುವರಿಸಿದ್ದ. 2001ರಲ್ಲಿ ವಿಕಾಸ್ ದುಬೆ ಶಿವ್ಲಿ ಇಂಟರ್ ಕಾಲೇಜ್ ಸಮೀಪದ ಸ್ಥಳವನ್ನು ಆಕ್ರಮಿಸಿ ಮಾರ್ಕೆಟ್ ಮಾಡಲು ಮುಂದಾಗಿದ್ದ. ಆದರೆ ಕಾಲೇಜ್ ನ ಮ್ಯಾನೇಜರ್ ಶಿವ್ದೇಶ್ವರ್ ಪಾಂಡೆ ದುಬೆಯ ಕಾರ್ಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಕ್ರೋಧಗೊಂಡ ದುಬೆ ಕಾಲೇಜ್ ಗೇಟ್ ನಲ್ಲಿಯೇ ಪಾಂಡೆಯನ್ನು ಹತ್ಯೆಗೈದುಬಿಟ್ಟಿದ್ದ. ಪೊಲೀಸರು ಬಂದು ಪಾಂಡೆಯನ್ನು ರಕ್ಷಿಸುವ ಕೆಲಸವನ್ನೂ ಕೂಡಾ ಮಾಡಲಿಲ್ಲ ಎಂದು ಶುಕ್ಲಾ ತಿಳಿಸಿದ್ದಾರೆ.

ದುಬೆಯ ಅಕ್ರಮ ಚಟುವಟಿಕೆಯನ್ನು ವಿರೋಧಿಸಿದ್ದ ಸುಮಾರು ಹತ್ತು ಮಂದಿಯನ್ನು ಕೊಲೆಗೈದು ಬಿಟ್ಟಿದ್ದ. ಇವೆಲ್ಲ ಅಕ್ರಮ, ಅಪರಾಧದ ನಡುವೆ ದುಬೆ ಹೆಚ್ಚು ಬೆಳಕಿಗೆ ಬಂದದ್ದು 2001ರ ಘಟನೆಯಲ್ಲಿ! ಉತ್ತರಪ್ರದೇಶದ ರಾಜ್ ನಾಥ್ ಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಸಂತೋಷ್ ಶುಕ್ಲಾ ಅವರನ್ನು ಜೈಲು ಆವರಣದಲ್ಲಿಯೇ ದುಬೆ ಹತ್ಯೆಗೈದು ಬಿಟ್ಟಿದ್ದ! ಅಂದು ಕೂಡಾ ಆತನಿಗೆ ರಾಜಕಾರಣಿಗಳ ಕೃಪಾಕಟಾಕ್ಷದೊಂದಿಗೆ ತನ್ನ ವಸೂಲಿ, ನಟೋರಿಯಸ್ ಕ್ರಿಮಿನಲ್ ದಂಧೆ ಮುಂದುವರಿಸಿದ್ದ. ಹೀಗೆ ಪೊಲೀಸರು ಆತನಿಗೆ ರಕ್ಷಣೆ ಕೊಟ್ಟಿದ್ದರಿಂದಲೇ ಇಂದು ಬೆಲೆ ತೆರುವಂತಾಗಿದೆ. ಆದರೆ ಈ ಬಾರಿ ಸಿಎಂ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಖಂಡಿತವಾಗಿಯೂ ದುಬೆಯನ್ನು ಹಿಡಿದು ನ್ಯಾಯ ಒದಗಿಸಬಹುದು ಎಂಬ ಭರವಸೆ ಇದ್ದಿರುವುದಾಗಿ ಮನೋಜ್ ಶುಕ್ಲಾ ಆಶಾಭಾವನೆ
ವ್ಯಕ್ತಪಡಿಸಿದ್ದಾರೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next