ಕಾಪು: ಇದು ವರೆಗೆ ಬೆಂಗಳೂರಿನಲ್ಲಿ ಸಂಚಾರವನ್ನೇ ಮಾಡಿರದ ಬೈಕ್‌ವೊಂದು ನಗರ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂ ಸಿರಲು ಸಾಧ್ಯವೇ? ಇಲ್ಲ ಎಂದು ನೀವು ಹೇಳಬಹುದು. ಆದರೆ, ಬೆಂಗಳೂರು ಸಂಚಾರ ಪೊಲೀಸರು ಮಾತ್ರ ನಗರದತ್ತ ಒಂದು ಬಾರಿಯೂ ಸುಳಿಯದ ವಾಹನವೊಂದಕ್ಕೆ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್ ನೀಡುವ ಮೂಲಕ ವಾಹನ ಮಾಲೀಕರಿಗೆ ಸಖೇದಾಶ್ಚರ್ಯ ಉಂಟು ಮಾಡಿದ್ದಾರೆ.
ಕಟಪಾಡಿಯಲ್ಲಿ ಮಿನಿ ಹೊಟೇಲ್ ಉದ್ಯಮ ನಡೆಸುತ್ತಿರುವ ಹರೀಶ್ ಶೆಟ್ಟಿಗಾರ್ ಅವರಿಗೆ ಬೆಂಗಳೂರು ನಗರ ಸಂಚಾರ ಪೊಲೀಸ್‌ನ ಎನ್‌ಫೋರ್ಮೆಂಟ್ ಆಟೋಮೇಷನ್ ಸೆಂಟರ್ ಘಟಕದಿಂದ ದಂಡ ಕಟ್ಟುವ ನೊಟೀಸ್ ಬಂದಿದೆ.
ಅದರಲ್ಲಿ “ನಿಮ್ಮ ವಾಹನ ಕೆಎ-20 ಇಸಿ 3200 (ಓಅ20ಉಇ3200) ಮೋಟಾರ್ ಸೈಕಲ್ ಬೆಂಗಳೂರಿನ ಐ.ಟಿ.ಪಿ.ಎಲ್. ರೋಡ್‌ನಲ್ಲಿ ಜು. 8ರಂದು ಸಂಜೆ 4.30ಕ್ಕೆ ಟ್ರಾಫಿಕ್ ಸಿಗ್ನಲ್‌ನ್ನು ಜಂಪ್ ಮಾಡಿದೆ. ಅದಕ್ಕಾಗಿ ರೂ. 100/- ನ್ನು ದಂಡ ರೂಪದಲ್ಲಿ ಪಾವತಿಸಿ,’ ಎಂದು ಉಲ್ಲೇಖೀಸಲಾಗಿದೆ. ಹೀಗಾಗಿ ಆಶ್ಚರ್ಯಚಕಿತರಾದ ಹರೀಶ್, ತಮ್ಮ ವಾಹನ ಬೆಂಗಳೂರಿನಲ್ಲಿ ಎಂದು ಓಡಾಡಿದೆ, ಯಾವಾಗ ಸಂಚಾರ ಉಲ್ಲಂ ಸಿದೆ ಎಂದು ತಲೆಕೆಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕಡೆ ಬಂದೇ ಇಲ್ಲ ಬೈಕ್!: ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಂತೋಷ್ ಶೆಟ್ಟಿಗಾರ್ ಅವರ ಬೈಕ್ (ಟಿವಿಎಸ್ ಸ್ಪೋರ್ಟ್) ಬೆಂಗಳೂರು ಸಂಚಾರ ಪೊಲೀಸರು ನೊಟೀಸ್‌ನಲ್ಲಿ ತಿಳಿಸಿರುವ ಅವಧಿಯಲ್ಲಿ ಕಟಪಾಡಿಯಲ್ಲೇ ಇತ್ತು. ಮಾತ್ರವಲ್ಲದೇ ಇದುವರೆಗೂ ಬೈಕ್ ಬೆಂಗಳೂರಿನ ಹಾದಿಯತ್ತ ಸಂಚರಿಸಿಯೇ ಇಲ್ಲ.
ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು: ಹಾಗಾದರೆ ಬೆಂಗಳೂರು ನಗರ ಸಂಚಾರಿ ಪೊಲೀಸರು ನೊಟೀಸ್ ನೀಡಿರುವ ದ್ವಿಚಕ್ರ ವಾಹನ ಯಾವುದು ?, ಅಥವಾ ಒಂದೇ ರೀತಿಯ ನೋಂದಾವಣೆ ಸಂಖ್ಯೆಯನ್ನು ಹೊಂದಿರುವ ಮತ್ತೂಂದು ಬೈಕ್ ಬೆಂಗಳೂರಿನಲ್ಲಿ ತಿರುಗಾಡುತ್ತಿದ್ದೆಯೇ ?, ಅಥವಾ ಸಂಚಾರಿ ಪೊಲೀಸರು ನಂಬರ್ ಕ್ಯಾಚ್ ಮಾಡುವಾಗ ಎಡವಿದ್ದಾರೆಯೇ?, ಎಂಬಿತ್ಯಾದಿ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಎದ್ದಿವೆ.
ನ್ಯಾಯಕ್ಕಾಗಿ ಪತ್ರ ಮುಖೇನ ಮೊರೆ: ನೋಟಿಸ್‌ನಿಂದ ವಿಚಲಿತರಾಗಿರುವ ಹರೀಶ್ ಶೆಟ್ಟಿಗಾರ್ ಅವರು ಬೆಂಗಳೂರು ನಗರ ಸಂಚಾರಿ ಪೊಲೀಸ್‌ನ ಎನ್‌ಫೋರ್ಮೆಂಟ್ ಆಟೋಮೇಷನ್ ಸೆಂಟರ್ ಘಟಕದ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದು, “ನನ್ನ ಬೈಕ್ ಬೆಂಗಳೂರಿನಲ್ಲಿ ಸಂಚರಿಸಿಲ್ಲ. ನೀವು ನೀಡಿರುವ ನೊಟೀಸ್‌ನಿಂದ ಆಶ್ಚರ್ಯ ಮತ್ತು ಆಘಾತವುಂಟಾಗಿದ್ದು, ಇಂತಹ ನೋಂದಣೆಯ ಬೈಕ್ ಬೆಂಗಳೂರಿನಲ್ಲಿ ಬೇರೊಂದು ಇದೆಯೇ ಎನ್ನುವುದನ್ನು ಪತ್ತೆ ಹಚ್ಚಿ, ಸೂಕ್ತ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿಕೊಡಿ,’ ಎಂದು ಕೋರಿದ್ದಾರೆ.