Advertisement

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

11:23 PM May 17, 2024 | Team Udayavani |

ಬೆಂಗಳೂರು: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಕೊಲೆ ಪ್ರಕರಣದಲ್ಲಿ ಪೊಲೀಸರ ಲೋಪ ಕಂಡುಬಂದ ಹಿನ್ನೆಲೆ ಯಲ್ಲಿ ಸಂಬಂಧಪಟ್ಟವರನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಜಲಿ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸ ಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಮುಂದೆ ಏನೆಲ್ಲ ಕಾನೂನು ಕ್ರಮ ತೆಗೆದುಕೊಳ್ಳಬೇಕು ಅದೆಲ್ಲವನ್ನು ಮಾಡುತ್ತೇವೆ ಎಂದರು.

ಬೆದರಿಕೆ ಬಗ್ಗೆ ದೂರು ಕೊಟ್ಟಿದ್ದರು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಪೋಷಕರು ಲಿಖಿತ ದೂರು ನೀಡಿಲ್ಲ. ಈ ಬಗ್ಗೆ ತಿಳಿಸಿದ್ದರು. ಅದಕ್ಕಾಗಿ ಇನ್‌ಸ್ಪೆಕ್ಟರ್‌ ಅನ್ನು ಅಮಾನತು ಮಾಡಲಾಗಿದೆ. ಪೋಷಕರು ನಿಜವಾಗಿಯೂ ಹೇಳಿದ್ದರೆ? ಅಥವಾ ಇಲ್ಲವೇ ಎಂಬುದರ ಕುರಿತು ತನಿಖೆ ನಡೆಯುತ್ತದೆ. ಇದರಲ್ಲಿ ಅಧಿಕಾರಿಗಳ ತಪ್ಪು ಕಂಡುಬಂದರೆ ಮುಂದಿನ ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.

ಎಸ್‌ಐಟಿ ತನಿಖೆ ಸುಸೂತ್ರ
ಎಸ್‌ಐಟಿ ರಿಪೋರ್ಟ್‌ ಮಂಡ್ಯ ಶಾಸಕರಿಗೆ ಹೋಗುತ್ತಿದೆ. ಗೃಹ ಸಚಿವರಿಗೆ ಹೋಗುತ್ತಿಲ್ಲ ಎಂದ ಎಚ್‌.ಡಿ.ಕುಮಾರ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮಂಡ್ಯ ಶಾಸಕರಿಗೆ ಯಾರು ವಿವರಿಸುತ್ತಾರೆ? ಇದೆಲ್ಲ ಹೇಳ್ಳೋದು ಸುಲಭ. ತುಂಬ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇವೆ. ಯಾವ ಮುಲಾಜಿಗೂ ಒಳಪಡುವುದಿಲ್ಲ. ಇದನ್ನು ಕುಮಾರಸ್ವಾಮಿಗೂ ಹೇಳಬಯಸುತ್ತೇನೆ. ಎಸ್‌ಐಟಿ ಸಮರ್ಥವಾಗಿ ಕೆಲಸ ಮಾಡುತ್ತಿದೆ. ನನಗಾಗಲಿ ಅಥವಾ ಮುಖ್ಯಮಂತ್ರಿಯವರಿಗಾಗಲಿ ಯಾವುದನ್ನು ತಿಳಿಸಬೇಕೋ ಅದನ್ನು ಎಸ್‌ಐಟಿ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.

ಗೃಹ ಸಚಿವ ಆಪ್ತನೆಂದು ವಂಚಿಸಿರುವ ಪ್ರಕರಣದ ಬಗ್ಗೆ ಕೇಳಿದಾಗ, ಕೊರಟಗೆರೆ ಕ್ಷೇತ್ರದ ವ್ಯಕ್ತಿ ಎಲ್ಲಿಯೋ ನನ್ನ ಜತೆ ಫೋಟೋ ತೆಗೆಸಿಕೊಂಡಿದ್ದ. ಇತ್ತೀಚೆಗೆ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯವಾಗಿದೆ. ಒಳ್ಳೆಯದಕ್ಕೆ ಬಳಸಿದ್ದರೆ ಸರಿ. ಅದನ್ನು ದುರುಪಯೋಗಪಡಿಸಿಕೊಂಡಿರುವುದು ತಪ್ಪು. ಜನರಿಂದ ಹಣ ಪಡೆದುಕೊಂಡು ವಂಚಿಸಿದ್ದಾನೆ. ಹೀಗಾಗಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

Advertisement

ಎಡಿಜಿಪಿಯಿಂದ ವರದಿ ಕೇಳಿದ ಸಚಿವರು
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಆರೋಪ ವಿಪಕ್ಷಗಳಿಂದ ಕೇಳಿಬರುತ್ತಿರುವ ಬೆನ್ನಲ್ಲೇ ಅವಳಿ ನಗರ ಹುಬ್ಬಳ್ಳಿ-ಧಾರವಾಡದಲ್ಲಿ ಪುನರಾವರ್ತನೆ ಆಗುತ್ತಿರುವ ಕೊಲೆ ಪ್ರಕರಣಗಳ ಬಗ್ಗೆ ಎಡಿಜಿಪಿಗೆ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ವರದಿ ಕೇಳಿದ್ದಾರೆ. ಹುಬ್ಬಳ್ಳಿ- ಧಾರವಾಡದಲ್ಲಿ ಪದೇಪದೆ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಕಾರಣ ಏನು? ಯಾವ ವಿಷಯ ಈ ಘಟನೆಗಳ ಹಿಂದೆ ಕೆಲಸ ಮಾಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ಶೀಘ್ರ ವರದಿ ಸಲ್ಲಿಸಲು ಎಡಿಜಿಪಿಗೆ ಸೂಚಿಸಿದ್ದಾರೆ. ವರದಿ ಸಲ್ಲಿಕೆ ಬಳಿಕ ಸಾಧ್ಯವಾದರೆ ನಾನೇ ಹೋಗಿ ಬರುತ್ತೇನೆ ಎಂದರು.

ವಿಕೃತ ಮನಸ್ಸಿನ ವ್ಯಕ್ತಿಗಳ
ಕೃತ್ಯಕ್ಕೆ ಲಗಾಮು: ಎಚ್‌. ಕೆ. ಪಾಟೀಲ್‌
ಬೆಂಗಳೂರಿನ ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ವಿಕೃತ ಮನಸ್ಸಿನ ವ್ಯಕ್ತಿಗಳು ಮಾಡುತ್ತಿರುವ ಘಟನೆಗಳಿಗೆ ಲಗಾಮು ಹಾಕಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಂಜಲಿ ಕೊಲೆಯಾಗಿರುವುದು ದುರ್ದೈವದ ಸಂಗತಿ. ಹುಬ್ಬಳ್ಳಿ-ಧಾರವಾಡವನ್ನು ಸಹಜ ಸ್ಥಿತಿಗೆ ತರಲು ಸರಕಾರ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗೃಹ ಸಚಿವರು ಎಲ್ಲ ಮುನ್ನೆಚ್ಚರಿಕೆ ಕ್ರಮಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಸರಕಾರದ ಅವಧಿಯಲ್ಲಿ ಕೊಲೆ,
ಅತ್ಯಾಚಾರ ಆಗಿಲ್ಲವೇ: ತಂಗಡಗಿ ಪ್ರಶ್ನೆ
ಕೊಪ್ಪಳದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಬಿಜೆಪಿ ಸರಕಾರದ ಅವ ಧಿಯಲ್ಲಿ ಕೊಲೆ, ರೇಪ್‌ಗ್ಳು ಆಗಿಲ್ಲವಾ ಎಂದು ಪ್ರಶ್ನಿಸಿದರು.

ಅಂಜಲಿ ಹತ್ಯೆ ಖೇದಕರ. ಇಂತಹ ಘಟನೆಗಳು ಆಗಬಾ ರದು. ಕೆಲವು ಜನರು ದುಷ್ಟತನಕ್ಕೆ ಇಳಿದಿದ್ದಾರೆ. ದುಷ್ಟರನ್ನು ಮಟ್ಟಹಾಕಲು ಸರಕಾರ ಚರ್ಚೆ ನಡೆಸಿದೆ. ಯುವತಿ ಕುಟುಂಬ ಮೊದಲೇ ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿ ವಿರುದ್ಧ ಈಗಾಗಲೇ ಕ್ರಮ ಕೈಗೊಂಡಿದೆ. ಈ ಹಿಂದಿನ ಬಿಜೆಪಿ ಸರಕಾರದ ಅವ ಧಿಯಲ್ಲಿ ಕೊಲೆ, ಅತ್ಯಾಚಾರಗಳು ಆಗಿಲ್ಲವಾ? ಇಂತಹ ದುಷ್ಟರು ಎಲ್ಲ ಕಾಲದಲ್ಲೂ ಇರುತ್ತಾರೆ. ಅವರನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದರು.

ಗಲ್ಲು ಶಿಕ್ಷೆಗೆ ಆಗ್ರಹಿಸಿ ಹಲವೆಡೆ ಪ್ರತಿಭಟನೆ
ಹುಬ್ಬಳ್ಳಿ: ಅಂಜಲಿ ಹತ್ಯೆ ಆರೋಪಿ ಗಿರೀಶ ಸಾವಂತನಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಅಗ್ರಹಿಸಿ ವಿವಿಧ ಸಂಘನೆಗಳಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಜಿಲ್ಲಾ ಕೋಳಿ ಬೆಸ್ತ ಸಮಾಜದ ವತಿಯಿಂದ ರಾಣಿ ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.

ಶ್ರೀರಾಮಸೇನೆಯಿಂದ ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು. ರಾಮದುರ್ಗಾ ತಾಲೂಕಿನ ಗಂಗಾಮತ ಸಮಾಜ ಹಾಗೂ ವಿವಿಧ ಮುಖಂಡರು ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪದಾ ಧಿಕಾರಿಗಳು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next