Advertisement

ತಿಂಗಳಿಗೊಮ್ಮೆ ಪೊಲೀಸರಿಗೆ ಆರೋಗ್ಯ ತಪಾಸಣೆ ಅಗತ್ಯ

01:04 PM May 04, 2019 | Suhan S |

ಮಂಡ್ಯ: ಪೊಲೀಸ್‌ ಇಲಾಖೆಯ ಒತ್ತಡದ ಕೆಲಸದ ನಡುವೆಯೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು 40 ವರ್ಷ ಮೀರಿದ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿಗಳು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಹೇಳಿದರು.

Advertisement

ನಗರದ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಎಸ್‌ಎಸ್‌ಎನ್‌ಎಂಸಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಶುಕ್ರವಾರ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಾಲ್ಕು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಮನೋ ಚೈತನ್ಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಆರೋಗ್ಯ ತಪಾಸಣೆ: ಯಾವುದೇ ವ್ಯಕ್ತಿಗೆ 40 ವರ್ಷ ಮೀರಿದರೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಳ್ಳುತ್ತ್ತದೆ. ಹೀಗಾಗಿ 40 ವರ್ಷ ಮೀರಿದ ಪ್ರತಿಯೊಬ್ಬ ಪೊಲೀಸ್‌ ಸಿಬ್ಬಂದಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡಲ್ಲಿ ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚಿನ ಆರೋಗ್ಯ ಸೌಲಭ್ಯದ ಅವಕಾಶಗಳಿವೆ. ಇಷ್ಟೆಲ್ಲಾ ಆರೋಗ್ಯ ತಪಾಸಣೆಗೆ ಅವಕಾಶಗಳಿದ್ದರೂ, ಆರೋಗ್ಯ ನಿರ್ಲಕ್ಷ್ಯ ವಹಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ನಿರ್ಲಕ್ಷ್ಯ ಬಿಟ್ಟು ಆರೋಗ್ಯ ಕಾಳಜಿ ಮಾಡಬೇಕು ಎಂದು ಹೇಳಿದರು.

ಆರೋಗ್ಯಕರ ಸಮಾಜ: ಡಾ.ಎನ್‌.ಸೋಮಶೇಖರ್‌ ಮಾತನಾಡಿ, ಹೃದ್ರೋಗ ಕಾಯಿಲೆ ವೇಗವಾಗಿ ಬೆಳೆಯುತ್ತಿದ್ದು, ಹೆಚ್ಚು ಜನರು ಇದ ರಿಂದ ಸಾವಿಗೀಡಾಗುತ್ತಿದ್ದಾರೆ. ಪೊಲೀಸ್‌ ಹಾಗೂ ವೈದ್ಯ ವೃತ್ತಿಗಳು ಬಿಡುವಿಲ್ಲದ ವೃತ್ತಿಗಳಾಗಿವೆ. ಹಗಲು ರಾತ್ರಿ ಎನ್ನದೇ ಜನರ ಸೇವೆಯನ್ನು ಮಾಡುವ ಶ್ರೇಷ್ಠ ಹಾಗೂ ಒತ್ತಡದ ಕೆಲಸವಾಗಿದೆ. ಹೀಗಾಗಿ ನಾವು ವೃತ್ತಿಯ ಬದ್ಧತೆ ಜೊತೆಗೆ ಆರೋಗ್ಯದ ಕಡೆಗೆ ಗಮನ ಹರಿಸಿದಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಎಷ್ಟು ಚೆನ್ನಾಗಿ ಆರೋಗ್ಯ ಕಾಪಾಡಿಕೊಳ್ಳುತ್ತೇವೋ ಅಷ್ಟು ದೀರ್ಘ‌ ಕಾಲವೂ ಆರೋಗ್ಯ ಸಮಸ್ಯೆದಿಂದ ಮುಕ್ತರಾಗಿ ಜೀವನ ನಡೆಸಬಹುದು. ಇಲ್ಲದಿದ್ದರೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿಕಾಯಿಲೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಎಲ್ಲರೂ ಜಾಗೃತರಾಗಿರುವುದು ಒಳಿತು. ಆಗಾಗ್ಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆಗೆ ಒಳಗಾಗಬೇಕು ಎಂದು ತಿಳಿಸಿದರು.

Advertisement

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಬಲರಾಮೇಗೌಡ, ಡಿವೈಎಸ್ಪಿ ಗಂಗಾಧರಸ್ವಾಮಿ, ವೈದ್ಯಾಧಿಕಾರಿ ಡಾ.ಪ್ರಸಾದ್‌, ಸ್ತ್ರೀ ರೋಗ ತಜ್ಞೆ ಡಾ. ರೇಣು, ಕಾರ್ಯಕ್ರಮ ಸಂಯೋಜಕ ವಿಶ್ವನಾಥ್‌ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next