Advertisement

ಪೊಲೀಸರು ಯೋಧರಿದ್ದಂತೆ

04:15 PM Oct 22, 2018 | |

ಕಾರವಾರ: ಯೋಧರಂತೆ ಪೊಲೀಸರು ತಮ್ಮ ಪ್ರಾಣ ಮುಡುಪಿಟ್ಟು ಸಾರ್ವಜನಿಕರ ಸೇವೆ ಮಾಡುತ್ತಾರೆ ಎಂದು ಜಿಲ್ಲಾಧಿಕಾರಿ ಎಸ್‌. ಎಸ್‌. ನಕುಲ್‌ ಹೇಳಿದರು. ಜಿಲ್ಲಾ ಪೊಲೀಸ್‌ ಪರೇಡ್‌ ಮೈದಾನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಪೊಲೀಸ್‌ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಮಾತನಾಡಿದರು. ಸಮಾಜದ ಶಾಂತಿ ಮತ್ತು ಸೌಹಾರ್ದತೆಗಾಗಿ ಪೊಲೀಸರು ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿರುತ್ತಾರೆ. ಜಿಲ್ಲೆಯ ಶಾಂತಿ ಕಾಪಾಡುವಲ್ಲಿ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದರು.

Advertisement

ಪೊಲೀಸ್‌ ಇಲಾಖೆಯಲ್ಲಿ ಶೇ.34 ರಷ್ಟು ಹುದ್ದೆಗಳು ಖಾಲಿ ಇವೆ. ಆದ್ದರಿಂದ ಅವರು ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸುವಂತೆ ಆಗುತ್ತದೆ. ಹೀಗಾಗಿ ಪೊಲೀಸರು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದರು. ಈ ಭಾರಿ ಚೀನಾ ಭಾರತ ಗಡಿಯಲ್ಲಿ ಚೀನಾ ಸೈನಿಕರೊಂದಿಗೆ ಸೆಣೆಸಿ ಮೃತಪಟ್ಟ ಹುತಾತ್ಮ ಸೈನಿಕರು ಹಾಗೂ ದೇಶದ ಒಳಗೆ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಒಟ್ಟು 435 ಪೊಲೀಸ್‌ ಅ ಧಿಕಾರಿಗಳು, ಸಿಬ್ಬಂದಿಗಳ ಹೆಸರುಗಳನ್ನು ಓದಿ ಸ್ಮರಿಸಲಾಯಿತು. ಹಿರಿಯ ಪೊಲೀಸ್‌ ಅಧಿಕಾರಿಗಳು, ವಿವಿಧ ಕ್ಷೇತ್ರದ ಗಣ್ಯರು ಸ್ಮಾರಕಕ್ಕೆ ಪುಷ್ಪಗುಚ್ಛವಿಟ್ಟು ಗೌರವ ಅರ್ಪಿಸಿದರು.

ಅಡಿಶಿನಲ್‌ ಎಸ್ಪಿ ಗೋಪಾಲ ಬ್ಯಾಕೋಡ ಅವರು ಹುತಾತ್ಮರಾದ ಎಲ್ಲ ಪೊಲೀಸ್‌ ಅಧಿಕಾರಿಗಳ ಮತ್ತು ಇತರ ಸಿಬ್ಬಂದಿಗಳ ಹೆಸರು ಓದಿದರು. ನಂತರ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಪೊಲೀಸರ ಕುಟುಂಬದವರಿಗೆ ಗೌರವ ಸಲ್ಲಿಸಲಾಯಿತು. ಕುಟುಂಬದವರು ಗೌರವ ಸ್ವೀಕರಿಸುವಾಗ ಕಣ್ಣಂಚಲ್ಲಿ ನೀರು ತುಳುಕುತ್ತಿತ್ತು. ಜಿಲ್ಲೆಯ ಡಿ.ಆರ್‌. ಸಿಬ್ಬಂದಿ ಹುತಾತ್ಮರಿಗೆ ಗೌರವ ಸಲ್ಲಿಸುವ ನಿಮಿತ್ತ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಅಲ್ಲದೇ ಪೊಲೀಸ್‌ ವಾದ್ಯವೃಂದದವರು ಶೋಕ ಗೀತೆ ನುಡಿಸಿ, ಗೌರವ ಸಲ್ಲಿಸಿದರು. ಪೊಲೀಸ್‌ ಹುತಾತ್ಮ ದಿನಾಚರಣೆಯಲ್ಲಿ ಪೊಲೀಸ್‌ ಅಧಿಕಾರಿಗಳು, ಸಿಬ್ಬಂದಿ, ಡಿಆರ್‌ ವಿಭಾಗದವರು ಹಾಗೂ ಸಮಾಜದ ವಿವಿಧ ಕ್ಷೇತ್ರದ ಗಣ್ಯರು, ಹುತಾತ್ಮರಾದ ಪೊಲೀಸ್‌ ಕುಟುಂಬದವರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next