Advertisement

ವ್ಯಕ್ತಿಗೆ ಪೊಲೀಸರಿಂದ ಥಳಿತ-ಆರೋಪ

11:16 AM Oct 27, 2021 | Team Udayavani |

 

Advertisement

ಕಲಬುರಗಿ: ನಗರದ ಚೌಕ್‌ ಪೊಲೀಸರು ವ್ಯಕ್ತಿಯೊಬ್ಬನನ್ನು ಪೊಲೀಸ್‌ ಠಾಣೆಗೆ ಕರೆತಂದು ಮನ ಬಂದಂತೆ ಥಳಿಸಿದ್ದಾರೆ ಎಂದು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಮಹಾಂತೇಶ ಕೌಲಗಿ, ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷ ಲಚ್ಚಪ್ಪ ಜಮಾದಾರ, ಮುಖಂಡ ಭೀಮಶಾ ಖನ್ನಾ ಆರೋಪಿಸಿದ್ದಾರೆ.

ದುಂಡಪ್ಪ ಜಮಾದಾರ ಎಂಬವರೇ ಪೊಲೀಸರಿಂದ ಥಳಿತಕ್ಕೊಳಗಾದ ವ್ಯಕ್ತಿ. ಕಳೆದ ರವಿವಾರ (ಅ.24) ರಾತ್ರಿ 8 ಗಂಟೆ ಸುಮಾರಿಗೆ ಸೇಡಂ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಚೌಕ್‌ ಪೊಲೀಸ್‌ ಇನಸ್ಪೆಕ್ಟರ್‌ ಮತ್ತು ಆರು ಜನ ಸಿಬ್ಬಂದಿ ಪ್ರಕರಣವೊಂದರ ವಿಚಾರಣೆ ಮಾಡಬೇಕಾಗಿದೆ ಎಂದು ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎಂದು ದೂರಿದ್ದಾರೆ.

ಠಾಣೆಯಲ್ಲಿ ದುಂಡಪ್ಪನನ್ನು ಕೂಡಿ ಹಾಕಿ, ನಿನ್ನ ಬಳಿ ಬಂದೂಕು ಇದೆ ಎಂದು ಒಪ್ಪಿಕೋ ಎಂದು ಪೊಲೀಸರು ಬೆದರಿಸಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಆತನ ಕಣ್ಣಿಗೆ ಬಟ್ಟೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ. ಇದರಿಂದ ದುಂಡಪ್ಪ ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.

ದುಂಡಪ್ಪ ಅಮಾಯಕನಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ವಿನಾಕಾರಣ ಯಾವುದೋ ಪ್ರಕರಣದಲ್ಲಿ ಸಿಲುಕಿಸಲು ಚೌಕ್‌ ಠಾಣೆಯ ಪೊಲೀಸರು ಸಂಚು ನಡೆಸಿ ಥಳಿಸಿದ್ದಾರೆ. ಆದ್ದರಿಂದ ಇನಸ್ಪೆಕ್ಟರ್‌ ಮತ್ತು ಆರು ಜನ ಸಿಬ್ಬಂದಿ ವಿರುದ್ಧ ಕೇಸ್‌ ದಾಖಲಿಸಿಕೊಂಡು, ಕೂಡಲೇ ಸೇವೆಯಿಂದ ಅಮಾನತು ಗೊಳಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತಿದೆ ಎಂದು ಮುಖಂಡರು ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ ಆಯುಕ್ತ ಡಾ| ವೈ.ಎಸ್‌. ರವಿಕುಮಾರ, ಹಲ್ಲೆಗೊಳಗಾದವರು ದೂರು ನೀಡಿದರೆ, ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next