Advertisement

ಹೈ ಅಲರ್ಟ್‌-ಪೊಲೀಸ್‌ ಸರ್ಪಗಾವಲು

03:13 PM Jun 21, 2022 | Team Udayavani |

ಬೆಳಗಾವಿ: ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆ ವಿರೋ ಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹೈ ಅಲರ್ಟ್‌ ಮಾಡಿ, ಸರ್ಪಗಾವಲು ಹಾಕಿ ಕಟ್ಟೆಚ್ಚರ ವಹಿಸಿದ್ದ ಪೊಲೀಸರು, ಪ್ರತಿಭಟನೆಗೆ ಜಮಾವಣೆಗೊಳ್ಳುತ್ತಿದ್ದ 250ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದುಕೊಂಡರು.

Advertisement

ಅಗ್ನಿಪಥ ಯೋಜನೆ ವಿರುದ್ಧ ವಿವಿಧ ಜಿಲ್ಲೆಗಳಿಂದ ಯುವಕರು ಜಮಾಯಿಸಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದರಿಂದ ರವಿವಾರದಿಂದ ನಗರದಲ್ಲಿ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು. ನಗರ ಮತ್ತು ಜಿಲ್ಲೆ ಪ್ರವೇಶಿಸುವವರನ್ನು ತಪಾಸಣೆ ನಡೆಸಿ ಒಳ ಬಿಡಲಾಗುತ್ತಿತ್ತು. ಸಂಶಯಾಸ್ಪದವಾಗಿ ಗುಂಪುಗೂಡಿಕೊಂಡು ತಿರುಗಾಡುತ್ತಿರುವವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಯುವಕರನ್ನು ವಶಕ್ಕೆ ಪಡೆದು ನಗರದ ಎಪಿಎಂಸಿ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕೂಡಿಹಾಕಲಾಯಿತು. ಯುವಕರಿಂದ ಬಸವೇಶ್ವರ ದೇವಸ್ಥಾನ ಪೂರ್ತಿ ಭರ್ತಿ ಆಗಿತ್ತು. ಹೆಚ್ಚುವರಿ ಯುವಕರನ್ನು ಡಿಆರ್‌ ವಾಹನದಲ್ಲಿ ಕೆಎಸ್‌ ಆರ್‌ಪಿ ಸಭಾಭವನಕ್ಕೆ ರವಾನಿಸಲಾಯಿತು. 250ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ಬೆಳಗಾವಿಯ ಖಡೇಬಜಾರ, ಅಶೋಕ ವೃತ್ತ, ಚನ್ನಮ್ಮ ವೃತ್ತ, ಮಾರುಕಟ್ಟೆ ಪ್ರದೇಶದಲ್ಲಿ ಜಮಾವಣೆ ಆಗುತ್ತಿದ್ದ ಯುವಕರನ್ನು ವಿಚಾರಣೆ ನಡೆಸಿ ವಶಪಡಿಸಿಕೊಳ್ಳಲಾಯಿತು. ಸೂಕ್ತ ಉತ್ತರ ನೀಡಿದವರನ್ನು ಬಿಡಲಾಯಿತು. ಸಂಶಯಾಸ್ಪದವಾಗಿ ಉತ್ತರ ನೀಡಿದವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ಬೆಳಗಾವಿ ನಗರದ ಚನ್ನಮ್ಮ ವೃತ್ತ, ಬೋಗಾರ್‌ವೇಸ್‌, ಗೋವಾವೇಸ್‌, ಗೋಗಟೆ ಸರ್ಕಲ್‌, ರೈಲ್ವೆ ನಿಲ್ದಾಣ, ಅಂಚೆ ಕಚೇರಿ ವೃತ್ತ, ಕೆಎಲ್‌ಇ ರಸ್ತೆ, ಪೀರನವಾಡಿ ನಾಕಾ ಸೇರಿದಂತೆ ವಿವಿಧ ಕಡೆಗಳಲ್ಲಿ ನಾಕಾಬಂ ದಿ ಹಾಕಲಾಗಿತ್ತು. ಪ್ರತಿಭಟನೆ ನಡೆಸಲು ಯಾರಿಗೂ ಅವಕಾಶ ನೀಡಿರಲಿಲ್ಲ. ಎಲ್ಲ ಕಡೆಗೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರಿಂದ ಒಳಗೆ ಬರಲು ಅವಕಾಶ ಇರಲಿಲ್ಲ. ಪೊಲೀಸರ ಮುಂಜಾಗ್ರತಾ ಕ್ರಮದಿಂದಾಗಿ ಜಿಲ್ಲೆಯಲ್ಲಿ ಎಲ್ಲಿಯೂ ಸೋಮವಾರ ಪ್ರತಿಭಟನೆ ನಡೆಯಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ಗಳ ಬಗ್ಗೆ ನಿಗಾ ಇಟ್ಟಿದ್ದರಿಂದ ಎಲ್ಲಿಯೂ ಮೋರ್ಚಾ, ಧರಣಿ, ಪ್ರತಿಭಟನೆ, ರಸ್ತೆ ತಡೆ ಆಗಲಿಲ್ಲ. ಚನ್ನಮ್ಮ ವೃತ್ತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬರುವ ಸಾಧ್ಯತೆ ಇತ್ತು. ಆದರೆ ಯಾರೂ ಇತ್ತ ಸುಳಿಯಲಿಲ್ಲ.

ಜಿಲ್ಲೆ ಪ್ರವೇಶಿಸುವ ನಿಪ್ಪಾಣಿ, ಕಾಗವಾಡ, ಖಾನಾಪುರ, ನಗರಕ್ಕೆ ಬರುವ ಹತ್ತರಗಿ ಟೋಲ್‌ ನಾಕಾ, ಹಿರೇಬಾಗೇವಾಡಿ ಟೋಲ್‌ ನಾಕಾ ಸೇರಿದಂತೆ ಅನೇಕ ಕಡೆಗಳಲ್ಲಿ ತಪಾಸಣೆ ನಡೆಸಲಾಯಿತು. ಪೊಲೀಸ್‌ ಕಮಿಷನರ್‌ ಡಾ| ಎಂ.ಬಿ. ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಕ್ರೈಂ ಡಿಸಿಪಿ ಪಿ.ವಿ. ಸ್ನೇಹಾ, ಎಸಿಪಿ, ಇನ್ಸಪೆಕ್ಟರ್‌ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌, ಡಿಆರ್‌ ತುಕಡಿ ಸೇರಿದಂತೆ ವಿವಿಧ ಸಿಬ್ಬಂದಿ ಬಂದೋಬಸ್ತ್ ನಿಯೋಜನೆಗೊಂಡಿದ್ದರು.

Advertisement

ಡ್ರೋಣ್‌ ಕ್ಯಾಮೆರಾ ಕಣ್ಗಾವಲು

ಅಗ್ನಿಪಥ ಯೋಜನೆ ವಿರೋಧಿಸಿ ಪ್ರತಿಭಟನೆ ಹಿನ್ನೆಲೆಯಲ್ಲಿ ನಗರದಲ್ಲಿ ಯುವಕರು ಜಮಾವಣೆ ಆಗುತ್ತಿದ್ದಾರಾ, ಪ್ರತಿಭಟನೆಯ ಪ್ಲ್ಯಾನ್‌ ನಡೆಯುತ್ತಿದೆಯಾ ಎಂಬುದನ್ನು ಗಮನಿಸಲು ಡ್ರೋಣ್‌ ಕ್ಯಾಮೆರಾ ಕಣ್ಗಾವಲು ಹಾಕಲಾಗಿತ್ತು. ಎಲ್ಲ ಕಡೆಗೂ ಡ್ರೋಣ್‌ ಕ್ಯಾಮೆರಾ ಹಾರಾಡುತ್ತಿತ್ತು. ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಖಾಕಿ ಪಡೆ ಇತ್ತು. ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಸನ್ನದ್ಧರಾಗಿದ್ದರು.

ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ

ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ನಿಲ್ದಾಣ ಪ್ರವೇಶಿಸುವ ಸ್ಥಳದಲ್ಲಿ ಬ್ಯಾರಿಕೇಡ್‌ ಹಾಕಿ ಪ್ರಯಾಣಿಕರನ್ನು ತಪಾಸಣೆ ನಡೆಸಿ ಒಳ ಬಿಡಲಾಗುತ್ತಿತ್ತು. ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಹೆಚ್ಚಿನ ಪೊಲೀಸರು ಇದ್ದರು.

ರ್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌ ಹಾಗೂ ಆರ್‌ಪಿಎಫ್‌ ಸಿಬ್ಬಂದಿ ಇದ್ದರು. ನಿಲ್ದಾಣದ ಸುತ್ತಲೂ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು. ನಿಲ್ದಾಣ ಮಾರ್ಗದಲ್ಲಿಯೂ ಪೊಲೀಸರು ಬ್ಯಾರಿಕೇಡ್‌ ಹಾಕಿ ವಾಹನಗಳನ್ನು ಒಳಗೆ ಬಿಡುತ್ತಿದ್ದರು. ಜತೆಗೆ ಮರಾಠಾ ಲಘುಪದಾತಿ ದಳ ಕೇಂದ್ರದ ಸುತ್ತಲೂ ಭದ್ರತೆ ಒದಗಿಸಲಾಗಿತ್ತು. ವಿಮಾನ ನಿಲ್ದಾಣ ಬಳಿಯೂ ಪೊಲೀಸರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next