Advertisement

ಕೋವಿಡ್ 19 ವಾರ್ಡ್‌ಗಳಲ್ಲಿ ಕರ್ತವ್ಯಕ್ಕೆ ಪೊಲೀಸರ ಹಿಂದೇಟು

10:30 AM Mar 29, 2020 | Suhan S |

ಬೆಂಗಳೂರು: ಕೋವಿಡ್ 19 ಲಾಕ್‌ಡೌನ್‌ ವೇಳೆ ಪೊಲೀಸರು ತಮ್ಮ ಕರ್ತವ್ಯಪರತೆ ಮೆರೆದಿದ್ದಾರೆ. ಆದರೆ, ಅವರ ಸಮಸ್ಯೆಯನ್ನು ಕೇಳುವವರಾರು? ಉದಾಹರಣೆ ಇಲ್ಲಿದೆ. ನಗರದ ಆಸ್ಪತ್ರೆಗಳಲ್ಲಿ ನಿರ್ಮಿಸಿರುವ ಕೊರೊನಾ ಪೀಡಿತರ ವಿಶೇಷ ವಾರ್ಡ್‌ ಗಳಲ್ಲಿ ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisement

ನಿತ್ಯ ನಗರದಲ್ಲಿ ಕೋವಿಡ್ 19  ಪೀಡಿತರ ಸಂಖ್ಯೆ ಗಣನೀಯ ಏರುತ್ತಿದೆ. ಈ ಬೆನ್ನಲ್ಲೇ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ನಗರದ ವಿವಿಧ ಆಸ್ಪತ್ರೆಗಳಲ್ಲಿ 30 ಕೋವಿಡ್ 19  ಪೀಡಿತರ ವಿಶೇಷ ವಾರ್ಡ್‌ ಗಳನ್ನು ನಿರ್ಮಿಸಿದ್ದು, ಇಲ್ಲಿರುವ ಸೋಂಕಿತರು ಹೊರಗಡೆ ಎಲ್ಲಿಯೂ ಹೋಗದಂತೆ ನಿಗಾವಹಿಸಲು ಸ್ಥಳೀಯ ಠಾಣೆಯ ಸುಮಾರು 20ಕ್ಕೂ ಅಧಿಕ ಮಂದಿಯನ್ನು ಎರಡು ಪಾಳಿಯಲ್ಲಿ ನಿಯೋಜಿಸಲಾಗಿದೆ. ಆದರೆ, ಕೆಲ ಸಿಬ್ಬಂದಿ ಈ ಕರ್ತವ್ಯಕ್ಕೆ ಹಿಂದೇಟು ಹಾಕುತ್ತಿದ್ದು, ಕಾನೂನು ಸುವ್ಯವಸ್ಥೆಗೆ ನಿಯೋಜಿಸುವಂತೆ ಹಿರಿಯ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಯಾಕೆ ಹಿಂದೇಟು?: ಕೋವಿಡ್ 19  ಪೀಡಿತರ ವಿಶೇಷ ವಾರ್ಡ್‌ನಲ್ಲಿ ಪೊಲೀಸರಿಗೆ ಏನು ಕೆಲಸ? ಈ ವಾರ್ಡ್‌ ಗಳಲ್ಲಿ ಅವರಿಗೆ ಸುರಕ್ಷತೆ ಇಲ್ಲ. ವೈದ್ಯರ ಪ್ರತಿ ಭೇಟಿಗೂ ಅವರೊಂದಿಗೆ ರೋಗಿಗಳ ಬಳಿ ಹೋಗಬೇಕು. ಈ ವೇಳೆ ವೈರಸ್‌ ತಗುಲಿದರೆ ಯಾರು ಹೊಣೆ? ವೈದ್ಯರಿಗೆ ಸುರಕ್ಷತಾ ವ್ಯವಸ್ಥೆಯಿದೆ. ಆದರೆ, ಪೊಲೀಸ್‌ ಸಿಬ್ಬಂದಿಗೆ ಸಮವಸ್ತ್ರ, ಮಾಸ್ಕ್, ಕೆಲವಡೆ ಸ್ಯಾನಿಟೈಸರ್‌ ಹೊರತು ಪಡಿಸಿ ಬೇರೆ ಯಾವುದೇ ಸುರಕ್ಷತೆಯಿಲ್ಲ. ಆರೋಗ್ಯಾಧಿಕಾರಿಗಳಿಗೆ ಒದಗಿಸಿರುವ ಸುರಕ್ಷತಾ ಕ್ರಮಗಳನ್ನು ತಮಗೂ ನೀಡಬೇಕು. ಆಗ ಮಾತ್ರ ನಿರ್ಭೀತಿಯಿಂದ ಕೆಲಸ ಮಾಡಲು ಸಾಧ್ಯ. ಇದರೊಂದಿಗೆ ನಗರದಲ್ಲಿ ಸೋಂಕಿತರ ಪತ್ತೆ ಹಚ್ಚಲು, ಹೋಮ್‌ ಕ್ವಾರಂಟೈನ್‌ ನಲ್ಲಿರುವವರ ಚಲನವಲನಗಳ ಮೇಲೆಯೂ ಪೊಲೀಸರೇ ನಿಗಾವಹಿಸಬೇಕು. ಒಂದು ವೇಳೆ ಆ ಸೋಂಕಿತ ಮನೆಯಿಂದ ಹೋರ ಬಂದರೆ, ಆತನನ್ನು ಪೊಲೀಸರೇ ಹಿಡಿದು ವಾಪಸ್‌ ಕಳುಹಿಸಬೇಕು. ಈ ವೇಳೆ ವೈರಸ್‌ ಹರಡುವ ಸಾಧ್ಯತೆಯಿದ್ದೂ ಸುರಕ್ಷತೆ ಇಲ್ಲ. ಹೀಗಾಗಿ ಹಿಂದೇಟು ಹಾಕುತ್ತಿದ್ದೇವೆ ಎಂದು ವಿಶೇಷ ವಾರ್ಡ್‌ಗೆ ನಿಯೋಜನೆಗೊಂಡಿರುವ ಸಿಬ್ಬಂದಿಯೊಬ್ಬರು ಉದಯವಾಣಿಗೆ ತಿಳಿಸಿದರು.

ಪೊಲೀಸರಲ್ಲಿ ಹೆಚ್ಚಿದ ಆತಂಕ :  ಪೊಲೀಸರಲ್ಲೂ ಕೋವಿಡ್ 19  ಭೀತಿ ಶುರುವಾಗಿದ್ದು, ಕೋವಿಡ್ 19 ಪೀಡಿತರು ಹಾಗೂ ಸಾರ್ವಜನಿಕರ ರಕ್ಷಣೆಗೆ ನಿಂತಿರುವ ಪೊಲೀಸರು, ತಮಗೂ ವೈರಸ್‌ ತಗುಲಿರುವ ಸಾಧ್ಯತೆಯಿದ್ದು, ಸೋಂಕಿತರ ಹತ್ತಾರು ಮನೆಗಳಿಗೆ ಭೇಟಿ ನೀಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸುವಂತೆ ವೈದ್ಯರಿಗೆ ಕೇಳಿಕೊಳ್ಳುತ್ತಿದ್ದೇವೆ ಎಂದು ಹೆಸರೆಳಲಿಚ್ಚಸದ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಹೋಟೆಲ್‌ ವ್ಯವಸ್ಥೆ ಇಲ್ಲ :  ವಿಶೇಷ ವಾರ್ಡ್‌ಗೆ ನಿಯೋಜನೆಗೊಂಡಿರುವ ಪೊಲೀಸ್‌ ಸಿಬ್ಬಂದಿಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲ ಎಂಬ ಆರೋಪ ಕೇಳಿಬಂದಿದೆ. ವೈರಸ್‌ ಹರಡುತ್ತಿರುವುದರಿಂದ ಬಹುತೇಕ ಸಿಬ್ಬಂದಿ ಹಾಗೂ ಅಧಿಕಾರಿಗಳು ತಮ್ಮ ಕುಟುಂಬ ಸದಸ್ಯರನ್ನು ಊರಿಗೆ ಕಳುಹಿಸಿದ್ದಾರೆ. ಕೆಲವರು ಅವಿವಾಹಿತರು ಇದ್ದಾರೆ. ಮತ್ತೂಂದೆಡೆ ಹೋಟೆಲ್‌ ಗಳಿಲ್ಲ. ಇನ್ನು ಇಲಾಖೆಯಿಂದ ಪೂರೈಸಿರುವ ಊಟ ಎಲ್ಲಿಂದ ಬರುತ್ತದೆ ಎಂಬುದು ಗೊತ್ತಿಲ್ಲ. ಆತಂಕದಿಂದಲೇ ಸೇವಿಸುತ್ತಿದ್ದೇವೆ. ಹೀಗಾಗಿ ಉತ್ತಮವಾದ ಊಟದ ವ್ಯವಸ್ಥೆ ಆಗಬೇಕಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

 

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next