ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಸಿದ ಆರೋಪದ ಮೇಲೆ ಪೊಲೀಸ್ ವಶದಲ್ಲಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ರಾತ್ರಿಯಿಡೀ ಬೆಳಗಾವಿ ಜಿಲ್ಲೆಯಾದ್ಯಂತ ಸುತ್ತಾಡಿಸಿದ್ದು, ಬೆಳಗಿನ ಜಾವ ನಡುರಸ್ತೆಯಲ್ಲಿ ಕುಳಿತು ರವಿ ಪ್ರತಿಭಟನೆ ನಡೆಸಿದ್ದಾರೆ.
ಗುರುವಾರ ರಾತ್ರಿ 12 ಗಂಟೆ ಸುಮಾರಿಗೆ ಖಾನಾಪುರ ಪೊಲೀಸ್ ಠಾಣೆಯಿಂದ ಜೀಪಿನಲ್ಲಿ ಕರೆದುಕೊಂಡು ಹೋದ ಪೊಲೀಸರು ಕಿತ್ತೂರು ಸವದತ್ತಿ ರಾಮದುರ್ಗ ನಂತರ ಬಾಗಲಕೋಟೆ ಜಿಲ್ಲೆಯ ಲೋಕಾಪುರ್ ಪೊಲೀಸ್ ಠಾಣೆ ವ್ಯಾಪ್ತಿವರೆಗೂ ಸುತ್ತಾಡಿಸಿದರು. ಬೆಂಗಳೂರಿನ ವಿಶೇಷ ಜನ ಪ್ರತಿನಿಧಿ ನ್ಯಾಯಾಲಯಕ್ಕೆ ಕರೆದಾಗ ಪೊಲೀಸರು ಜಿಲ್ಲೆಯಾದ್ಯಂತ ಸುತ್ತಾಡಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ರಾಮದುರ್ಗದಲ್ಲಿ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಸಿಟಿ ರವಿ ಅವರ ತಲೆಗೆ ಬ್ಯಾಂಡೇಜ್ ಗೆ ಪ್ರಥಮ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇದಕ್ಕೂ ಮುನ್ನ ಕಿತ್ತೂರಿನಲ್ಲಿ ಮಧ್ಯರಾತ್ರಿ 1.45ರ ಸುಮಾರಿಗೆ ಅರ್ಧ ಗಂಟೆಗಳ ಕಾಲ ಪೊಲೀಸ್ ವಾಹನ ನಿಂತಿತ್ತು. ರಾಮದುರ್ಗದಲ್ಲಿಯೂ ಕೆಲಹೊತ್ತು ವಾಹನ ನಿಲ್ಲಿಸಲಾಗಿತ್ತು.
ಸಿ.ಟಿ. ರವಿ ಅವರ ತಲೆಯಿಂದ ರಕ್ತ ಸೋರುತ್ತಿರುವುದರಿಂದ ಪೊಲೀಸರು ಕೂಡಲೇ ಚಿಕಿತ್ಸೆ ನೀಡದೆ ಮಧ್ಯರಾತ್ರಿ 3 ಗಂಟೆವರೆಗೂ ಸುತ್ತಾಡಿಸಿ ನಂತರ ರಾಮದುರ್ಗಕ್ಕೆ ಕರೆತಂದು ತಲೆಗೆ ಬ್ಯಾಂಡೇಜ್ ಹಚ್ಚಿದ್ದಾರೆ. ಬೆಳಗಿನ ಜಾವ 5 ಗಂಟೆ ನಂತರ ಯರಗಟ್ಟಿ ಮೂಲಕ ಗೌಪ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸರು ನನ್ನನ್ನು ಕೊಲೆ ಮಾಡುವ ಉದ್ದೇಶದಿಂದಲೇ ಜಿಲ್ಲೆಯಾದ್ಯಂತ ಎಲ್ಲ ಕಡೆಗೂ ಸುತ್ತಾಡಿಸುತ್ತಿರುವುದು ಏಕೆ? ರಾತ್ರಿಯಿಡೀ ಪೋಲಿಸರು ಸುತ್ತಾಡಿಸಲು ಮೇಲಿಂದ ನಿರ್ದೇಶನಗಳು ಬರುತ್ತಿವೆ. ಯಾರು ನಿರ್ದೇಶನ ನೀಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದು ರಸ್ತೆ ಮೇಲೆ ಕುಳಿತು ಸಿ.ಟಿ. ರವಿ ಪ್ರತಿಭಟನೆ ನಡೆಸುತ್ತಿದ್ದಂತೆ ಪೊಲೀಸರು ಬಲವಂತವಾಗಿ ಜೀಪ್ ನಲ್ಲಿ ಹಾಕಿ ಕರೆದೊಯ್ದರು.