Advertisement
ಬೆಂಗಳೂರು: ಪೊಲೀಸರು ಎಂದರೆ ಭಯಪಡುವ ಆತಂಕದಿಂದಲೇ ನೋಡುವ ಪರಿಸ್ಥಿತಿಯನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪೊಲೀಸರು ಅಕ್ಷರಶಃ ತಲೆಕೆಳಗು ಮಾಡಿಬಿಟ್ಟರು. ಜತೆಗೆ, ಖಾಕಿ ದಿರಿಸಿನ ಒಳಗಡೆ ಇರಬಹುದಾಗಿದ್ದ ಮಾನವೀಯತೆ ಅಂತಃಕರಣ ಕೂಡ ಹೊರಬಂದಿತು. ಪೊಲೀಸರ ಈ ಮಾದರಿಯ ನಡವಳಿಕೆ ವ್ಯಾಪಕ ಪ್ರಶಂಸಗೆ ಒಳಗಾಗಿದೆ. ಜತೆಗೆ “ಜನಸ್ನೇಹಿ’ ಪೊಲೀಸ್ ಎಂಬುದಕ್ಕೆ ಅರ್ಥವೂ ದೊರೆಯಲು ಕಾರಣವಾಗಿದೆ.
Related Articles
Advertisement
ಲಾಕ್‌ಡೌನ್ ತೆರವಿನ ಬಳಿಕ ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ಹೊರಾಜ್ಯ ಗಳಿಗೆ ಪ್ರಯಾಣಿಸಿದ ಮೂರೂವರೆ ಲಕ್ಷಕ್ಕೂ ಅಧಿಕ ಮಂದಿ ಪ್ರಯಾ ಣದ ವೇಳೆ ನಗರದ ರೈಲ್ವೆ ನಿಲ್ದಾಣಗಳಲ್ಲಿ ಬಂದೋಬಸ್ತ್ ನಿರ್ವಹಿಸಿದ್ದು ರೈಲ್ವೆ ಪೊಲೀಸರು. ಈ ಅವಧಿಯಲ್ಲೇ 20ಕ್ಕೂ ಅಧಿಕ ಪೊಲೀಸರು ಸೋಂಕಿತರಾಗಿದ್ದರು. ನಿಮ್ಮ ಸೇವೆಗೆ ಸಿದ್ಧ: ಲಾಕ್‌ಡೌನ್ ವೇಳೆ ಮನೆಯಲ್ಲಿದ್ದವರಿಗೆ ಅಗತ್ಯ ವಸ್ತುಗಳು, ಔಷಧಿಗಳನ್ನು ತಲುಪಿ ಸಿಯೂ ಪೊಲೀಸರು ನಾವು ಇರುವುದು ನಿಮ್ಮ ಸೇವೆಗೆ ಎಂಬುದನ್ನು ಸಾಬೀತು ಪಡಿಸಿದರು. ಈ ಪೈಕಿ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಡಿಸಿಪಿ ರೋಹಿಣಿ ಕಟೋಚ್ ನೇತೃತ್ವದಲ್ಲಿ ಪ್ರತಿ ಠಾಣೆ ವ್ಯಾಪ್ತಿಗೆ ಎಲ್ಲೆಲ್ಲಿ ಏನೇನು ಸಿಗಲಿದೆ ಎಂಬ ಮಾಹಿತಿಯನ್ನು ನಾಗರಿಕರಿಗೆ ಒದಗಿಸಿದರು. ಜತೆಗೆ, ವೃದ್ಧರಿಗೆ ಠಾಣಾ ಮಟ್ಟದಲ್ಲೇ ಔಷಧಿ ಮತ್ತಿತರ ವಸ್ತುಗಳನ್ನು ಒದಗಿಸಲು ವಿಶೇಷ ಪಡೆ ರಚಿಸಿ ಸೇವೆ ನೀಡಿದರು.
ಅನ್ನದಾನ ಮಹಾದಾನ : ಲಾಕ್‌ಡೌನ್ ವೇಳೆ ಬಹುತೇಕ ಎಲ್ಲ ಠಾಣೆಗಳಲ್ಲಿ ಆಹಾರ ಸಿದ್ಧತೆ ಮಾಡಲಾಗುತ್ತಿತ್ತು. ಅಲ್ಲಿಂದಲೇ ಚೆಕ್ ಪಾಯಿಂಟ್ ಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಅಧಿಕಾರಿ ಸಿಬ್ಬಂದಿಗೆ ಸರಬರಾಜು ಮಾಡಲಾಗುತ್ತಿತ್ತು. ಕೆಲವೊಮ್ಮೆ ಅಧಿಕಾರಿಗಳೇ ಆಹಾರ ಸಿದ್ಧಪಡಿಸುತ್ತಿದ್ದುದು ವಿಶೇಷ. ನಗರದ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ತಮ್ಮ ವ್ಯಾಪ್ತಿಯ ಸ್ವಯಂ ಸೇವಕರ ನೆರವಿನೊಂದಿಗೆ ಕೈಜೋಡಿಸಿ ನಿತ್ಯ ನೂರಾರು ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಪೂರೈಕೆ ಮಾಡಿದರು. ಮುಖ್ಯವಾಗಿ ಗಡಿಭಾಗದಲ್ಲಿರುವ ತಲ್ಲಘಟ್ಟಪುರ, ಬಾಗಲಕುಂಟೆ ಸೇರಿ ಹಲವು ಠಾಣೆಗಳಲ್ಲಿ ಅನ್ನದಾಸೋಹ ನೆರವೇರಿಸಿದರು. ಇನ್ನು ಕೆಲ ಹಿರಿಯ ಅಧಿಕಾರಿಗಳು ಠಾಣೆಯಲ್ಲೇ ನಿತ್ಯ ಕಷಾಯ ತಯಾರಿಸಿ ಹಂಚಿಕೆಯೂ ಮಾಡಿದರು. ಇದರೊಂದಿಗೆ ಪ್ರತಿ ಠಾಣಾ ವ್ಯಾಪ್ತಿಯಲ್ಲಿ ಹಿರಿಯ-ಕಿರಿಯ ಅಧಿಕಾರಿ-ಸಿಬ್ಬಂದಿ ತಮ್ಮ ಸ್ವಂತ ಹಣದಲ್ಲಿ ಕಾರ್ಮಿಕರು, ನಿರ್ಗತಿಕರಿಗೆ ಆಹಾರ ಕಿಟ್ ವಿತರಿಸಿದರು. ಸಂಗೀತ ಹಿನ್ನೆಲೆಯುಳ್ಳ ಪೊಲೀಸ್ ಸಿಬ್ಬಂದಿ ಸುಬ್ರಹ್ಮಣಿ, ಮೌಲಾಲಿ ಕೆ.ಅಲಗೂರ ಇತರರು ಗೀತೆ ರಚಿಸಿ ಜನರಲ್ಲಿ ಅರಿವು ಮೂಡಿಸಿದರು.
ಸಂಚಾರ ಪೊಲೀಸರು ಸಿಗ್ನಲ್‌ಗಳಲ್ಲಿ ಜನರಿಗೆ ಮಾಸ್ಕ್, ಸ್ಯಾನಿಟೈಸರ್, ಕೈತೊಳೆಯುವುದರ ತಿಳಿವಳಿಕೆ ನೀಡಿದರು. ಮನೆಯಿಂದ ಹೊರಬಾರದ ವೃದ್ಧರಿಗಾಗಿ ಸಹಾಯವಾಣಿ ಕೇಂದ್ರ ತೆರೆದು, ಹೊಯ್ಸಳ ವಾಹನಗಳನ್ನು ಮೀಸಲಿಡಲಾಯಿತು. ಸೋಂಕಿಗೊಳಗಾದ ಸಿಬ್ಬಂದಿಗೆ ಆತ್ಮವಿಶ್ವಾಸ ತುಂಬುವ ಕೆಲಸಗಳಾಯಿತು. ಗುಣಮುಖರಾದವರಿಗೆ ನಿರ್ಗಮಿತ ಆಯುಕ್ತ ಭಾಸ್ಕರ್ ರಾವ್ ಆದಿಯಾಗಿ ಹಿರಿಯ ಅಧಿಕಾರಿಗಳು ಸ್ವಾಗತ ಮಾಡಿ ಆತ್ಮಸ್ಥೈರ್ಯ ಹೆಚಿÌಸಿದರು. ಈ ಪ್ರಕ್ರಿಯೆ ಉತ್ತಮ ಬಾಂಧವ್ಯಕ್ಕೆ ಕಾರಣವಾಯಿತು.
ಮಗು ಮುಖ ನೋಡಲು ತಿಂಗಳಾಯ್ತು! : ಕೋವಿಡ್ ಕರ್ತವ್ಯದ ವೇಳೆ ತಮಗೆ ಮಕ್ಕಳ ಪಾಲನೆ ಪೋಷಣೆ ಬಗ್ಗೆಯೂ ಗಮನಹರಿಸಲು ಸಾಧ್ಯವಾಗದೆ ತಿಂಗಳಾ ದರೂ ಕುಟುಂಬದವರ, ಮಕ್ಕಳ ಮುಖ ನೋಡದೆ ಕೆಲಸ ಮಾಡಿದ ಅಧಿಕಾರಿ-ಸಿಬ್ಬಂದಿಗಳಿ ದ್ದಾರೆ. ‘ನನ್ನ ಚೊಚ್ಚಲ ಮಗುವನ್ನು ನೋಡಲು ಒಂದು ತಿಂಗಳು ಸಮಯ ತೆಗೆದು ಕೊಂಡೆ, ಆ ಸಮಯದಲ್ಲಿ ನಮ್ಮ ಸೇವೆ ಸಮಾಜಕ್ಕೆ ಅಗತ್ಯವಿತ್ತು’ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಪಿಎಸ್‌ಐ ವೊಬ್ಬರು. ಮತ್ತೂಬ್ಬ ಪಿಎಸ್‌ಐಗೆ ಮೈಸೂರಿನ ಯುವತಿ ಜತೆ ಮದುವೆ ನಿಶ್ಚಯವಾಗಿತ್ತು. ಆದರೆ, ಕೋವಿಡ್ ಸಂದರ್ಭದಲ್ಲಿ ರಜೆ ಪಡೆಯುವುದು ಬೇಡ ಎಂದು ನಿರ್ಧರಿಸಿ ವಿವಾಹವನ್ನೇ ಆರೇಳು ತಿಂಗಳು ಮುಂದೂ ಡಿ ದರು. ಅದಕ್ಕೆ ಅವರ ಭಾವಿ ಪತ್ನಿಯೂ ಸಹಕರಿಸಿದರು.
ಧೈರ್ಯ ತುಂಬಿದ ವ್ಯವಸ್ಥೆ!: ಪೊಲೀಸ್ ಇಲಾಖೆಯ ಹುದ್ದೆಗಳ ಅನ್ವಯ ಸದಾ ಅಧಿಕಾರಿಗಳು ಹಾಗೂ ತಳ ಹಂತದ ಸಿಬ್ಬಂದಿ ನಡುವೆ ಒಂದು ಅಂತರವಿದ್ದೇ ಇರುತ್ತದೆ. ಆದರೆ, ಕೋವಿಡ್ ವೇಳೆ ಈ ಅಂತರ ಮರೆಯಾಗಿ ಪರಸ್ಪರ ಭ್ರಾತೃತ್ವ ಹೆಚ್ಚಾಗಿ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿದ್ದು ವಿಶೇಷ.
ಕೋವಿಡ್ ಗೆದ್ದವರ ಅನುಭವಗಳು : ಕೋವಿಡ್ ಸೋಂಕಿತರು ಹೆದರುವ ಅಗತ್ಯವಿಲ್ಲ. ಮನಸ್ಥೈರ್ಯ ಮುಖ್ಯವಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಸೋಂಕು ದೃಢಪಡುತ್ತಿದ್ದಂತೆ ಕೂಡಲೇ ನಾನು ವೈದ್ಯರ ಸಲಹೆ ಮೇರೆಗೆ ಸೂಚಿಸಿದ ಔಷಧಿ ಪಡೆದುಕೊಂಡೆ, ಜತೆಗೆ ನನ್ನಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾದರಿಂದ ಬೇಗನೆ ಗುಣಮುಖನಾದೆ. ಇದೊಂದು ರೀತಿಯ ಜ್ವರ ಅಷ್ಟೇ’ ಇದೀಗ ಪ್ಲಾಸ್ಮಾ ದಾನ ಮಾಡಿದ್ದೇನೆ. – ಸತೀಶ್, ಈಶಾನ್ಯ ಸಂಚಾರ ವಿಭಾಗದ ಎಸಿಪಿ
ಠಾಣೆಯಲ್ಲಿ 12 ಮಂದಿಗೆ ಕೋವಿಡ್ ಆವರಿಸಿತ್ತು. ಇಬ್ಬರಿಗೆ ಲಕ್ಷಣಗಳಿದ್ದವು. ಇನ್ನುಳಿದ ಹತ್ತು ಮಂದಿಗೆ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ವೈದ್ಯರ ಸೂಚನೆ ಮೇರೆಗೆ ಹೋಮ್ ಕ್ವಾರಂಟೈನ್ ಆಗಿ ವಿಟಮಿನ್-ಸಿ ಹಾಗೂ ಜ್ವರಕ್ಕೆ ಸಂಬಂಧಿಸಿದ ಔಷಧಿಯನ್ನು ಪಡೆದುಕೊಂಡೆ, ಮನೆಯಲ್ಲಿ ಕಷಾಯ ಮಾಡಿಕೊಂಡು ಕುಡಿದರಿಂದ ರೋಗನಿರೋಧಕ ಶಕ್ತಿ ವೃದ್ಧಿಸಿಕೊಂಡು ಗುಣಮುಖನಾಗಿದ್ದೇನೆ. – ಎಸ್.ವೈ.ಮೋಹನ್, ಎಚ್‌ಎಎಲ್ ಠಾಣೆ ಇನ್‌ಸ್ಪೆಕ್ಟರ್
ಕೋವಿಡ್ ಬಂತು ಎಂದು ಹೆದರಲಿಲ್ಲ. ಅದಕ್ಕೂ ಮೊದಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೂ ಪಾಸಿಟಿವ್ ಬಂದಿತ್ತು. ಕೂಡಲೇ ಎಂ. ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖನಾದೆ. ಇದೀಗ ಮನೆಯಲ್ಲಿ ಹೋಮ್ ಕ್ವಾರಂಟೈನಲ್ಲಿದ್ದೇನೆ. –ಶ್ರೀನಿವಾಸ್, ಕೆ.ಆರ್.ಮಾರುಕಟ್ಟೆ ಠಾಣೆ ಎಎಸ್‌ಐ
ಕೋವಿಡ್ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಸೋಂಕಿಗೆ ತುತ್ತಾಗಿ ಮೃತರಾದ ಪೊಲೀಸ್ ಸಿಬ್ಬಂದಿಯ ತ್ಯಾಗದ ಸೇವೆಯನ್ನು ಇಲಾಖೆ ಸ್ಮರಿಸಲಿದೆ. ಸೋಂಕಿತ ಸಿಬ್ಬಂದಿಯ ಚಿಕಿತ್ಸೆ, ಅವರ ಆರೋಗ್ಯದ ಬಗ್ಗೆ ಇಲಾಖೆ ಕಾಳಜಿಯಿದ್ದು, ಸಿಬ್ಬಂದಿ ಬೆನ್ನಿಗೆ ನಿಂತಿದ್ದೇವೆ. ಕೊರೊನಾ ಸಂಬಂಧಿತ ಯಾವುದೇ ಸಮಸ್ಯೆ, ಸಹಕಾರದ ಅಗತ್ಯ ಸಿಬ್ಬಂದಿಗೆ ಅಗತ್ಯವಿದ್ದರೆ ಹಿರಿಯ ಅಧಿಕಾರಿಗಳಿಗೆ ತಿಳಿಸಿ ಸಲಹೆ ಸೂಚನೆ ಪಡೆಯಬಹುದು. ಇಲ್ಲವೇ ಸಿಬ್ಬಂದಿ ನನ್ನನ್ನೇ ಭೇಟಿ ಮಾಡಿ ಸಮಸ್ಯೆ ಹಂಚಿಕೊಳ್ಳಬಹುದು. ನಾನು ಸದಾ ಲಭ್ಯವಾಗಲಿದ್ದೇನೆ. –ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ