Advertisement

ಲೇಡಿ ಸಿಂಗಮ್‌ ಖ್ಯಾತಿಯ “ತುಂಗಾ’ಇನ್ನಿಲ್ಲ

12:27 AM Aug 27, 2022 | Team Udayavani |

ದಾವಣಗೆರೆ: ಹಲವು ಪ್ರಮುಖ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಿದ್ದ ಶ್ವಾನ ತುಂಗಾ ಶುಕ್ರವಾರ ಅನಾರೋಗ್ಯದಿಂದ ಮೃತಪಟ್ಟಿದೆ.

Advertisement

ಡಾಬರ್ಮನ್‌ ತಳಿಯ ತುಂಗಾ ದಾವಣ ಗೆರೆಯ ಶ್ವಾನದಳಕ್ಕೆ ಬಂದ ಬಳಿಕ 70ಕ್ಕೂ ಹೆಚ್ಚು ಕೊಲೆ ಹಾಗೂ 35ಕ್ಕೂ ಕಳವು ಪ್ರಕರಣ ಪತ್ತೆ ಹಚ್ಚಲು ನೆರವಾಗಿತ್ತು.

11 ವರ್ಷಗಳಿಂದ ಪೊಲೀಸ್‌ ಇಲಾಖೆಯಲ್ಲಿ ಸೇವೆಯಲ್ಲಿದ್ದ ತುಂಗಾಳನ್ನು ಹಿರಿಯ ಪೊಲೀಸ್‌ ಅಧಿಕಾರಿಗಳಾದ ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವರು ಸಹಿತ ಅನೇಕರು ಗೌರವಿಸಿದ್ದರು. ಇತ್ತೀಚೆಗೆ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ತನ್ನ ವಿವಿಧ ಸಾಹಸ ಪ್ರದರ್ಶಿಸಿ ಗಮನ ಸೆಳೆದಿತ್ತು.

ಅಂತಿಮ ನಮನ
ತುಂಗಾ ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು, ಶುಕ್ರವಾರ ನಗರದ ಪಶು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದೆ. ಶುಕ್ರವಾರ ಸಂಜೆ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಪೊಲೀಸ್‌ ಇಲಾಖೆಯ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳಾದಿಯಾಗಿ ಎಲ್ಲ ಸಿಬಂದಿ ಸಂತಾಪ ಸೂಚಿಸಿದ್ದಾರೆ.

ತುಂಗಾ ಸಾಧನೆ
ಚನ್ನಗಿರಿ ತಾಲೂಕಿನ ಸೂಳೆಕೆರೆ ಗುಡ್ಡದಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದು, ಸೂಳೆಕೆರೆ ಗುಡ್ಡದಿಂದ 11 ಕಿ.ಮೀ. ಓಡಿ ಕೊಲೆಗಾರನ ಸುಳಿವು ನೀಡಿತ್ತು. ಜಿಲ್ಲೆಯ ಹೂವಿನಮಡು ಗ್ರಾಮದ ಜಮೀನಿನಲ್ಲಿ ನಡೆದ ಮಹಿಳೆಯ ಕೊಲೆ, ನ್ಯಾಮತಿಯಲ್ಲಿ ಮಹಿಳೆಯ ಕೊಲೆ, ಮಲೆಬೆನ್ನೂರು ಬಳಿಯ ಹಳ್ಳಿಯೊಂದರಲ್ಲಿ ಕುರಿಗಾಹಿಯೊಬ್ಬನನ್ನು ಕೊಡಲಿಯಿಂದ ಕಡಿದು ಹಾಕಿದ ಪ್ರಕರಣ, ಹರಪನಹಳ್ಳಿ ತಾಲೂಕಿನಲ್ಲಿ ನಡೆದ ಮಹಿಳೆ ಕೊಲೆ ಹೀಗೆ ಹತ್ತಾರು ಕೊಲೆ, ದರೋಡೆ, ಕಳ್ಳತನ ಪ್ರಕರಣಗಳ ಅಪರಾಧಿಗಳ ಸುಳಿವು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next