Advertisement

ಪೊಲೀಸ್‌ ಮಹಾನಿರ್ದೇಶಕರ ಆಯ್ಕೆ ಪ್ರಕ್ರಿಯೆ ಶುರು

11:40 AM Jan 24, 2017 | |

ಬೆಂಗಳೂರು: ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಓಂಪ್ರಕಾಶ್‌, ಜ. 31ರಂದು ನಿವೃತ್ತರಾಗಲಿದ್ದು, ಈ ಹಿನ್ನೆಲೆಯಲ್ಲಿ ನೂತನ ಪೊಲೀಸ್‌ ಮಹಾನಿರ್ದೇಶಕರ ನೇಮಕ ಕುರಿತಂತೆ ರಾಜ್ಯ ಸರ್ಕಾರ ಅಧಿಕೃತ ಪ್ರಕ್ರಿಯೆ ಆರಂಭಿಸಿದೆ.

Advertisement

ಓಂಪ್ರಕಾಶ್‌ ಅವರ ನಂತರ ಪೊಲೀಸ್‌ ಇಲಾಖೆ ಮುಖ್ಯಸ್ಥರು ಯಾರಾಗಬೇಕೆಂಬ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸೋಮವಾರ ಸಭೆ ನಡೆಸಿದ್ದು, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಹಾಗೂ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಸ್‌ ಚಂದ್ರ ಅವರೊಂದಿಗೆ ಚರ್ಚಿಸಿ, ಅರ್ಹ ಅಧಿಕಾರಿಗಳ ಪಟ್ಟಿ ಸಿದ್ಧಪಡಿಸಿದ್ದಾರೆ. 

ಐಪಿಎಸ್‌ ಅಧಿಕಾರಿಗಳಾದ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ರೂಪಕ್‌ಕುಮಾರ್‌ ದತ್ತಾ (1981ರ ಬ್ಯಾಚ್‌), ಆಂತರಿಕ ಭದ್ರತೆ ವಿಭಾಗದ ಡಿಜಿ ನೀಲಮಣಿ ರಾಜು (1983ರ ಬ್ಯಾಚ್‌), ಸಿಐಡಿ ಡಿಜಿ ಕಿಶೋರ್‌ ಚಂದ್ರ ಹಾಗೂ ಅಗ್ನಿಶಾಮಕ ದಳದ ಡಿಜಿ ಎಂ.ಎನ್‌.ರೆಡ್ಡಿ (ಇಬ್ಬರೂ 1984ರ ಬ್ಯಾಚ್‌) ಅವರ ಹೆಸರು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದೆ.

ಪೊಲೀಸ್‌ ಮಹಾನಿರ್ದೇಶಕ ಹುದ್ದೆಗೆ ಸೇವೆಯಲ್ಲಿ ಹಿರಿತನ ಹೊಂದಿರುವ ರೂಪಕ್‌ಕುಮಾರ್‌ ದತ್ತಾ ಅವರ ಬಗ್ಗೆ ಸಭೆಯಲ್ಲಿ ಒಲವು ವ್ಯಕ್ತವಾಗಿದ್ದರೂ, ಅವರ ಅವಧಿ 10 ತಿಂಗಳು ಮಾತ್ರ ಇರುವುದರಿಂದ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲು ಗೃಹ ಸಚಿವ ಡಾ. ಜಿ. ಪರಮೇಶ್ವರ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದತ್ತಾ ವಿರುದ್ಧದ ಅರ್ಜಿ ವಜಾ
ಉದಯವಾಣಿ ದೆಹಲಿ ಪ್ರತಿನಿಧಿ:
ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕರ ಹುದ್ದೆ ಮೇಲೆ ಕಣ್ಣಿಟ್ಟಿರುವ ರೂಪಕ್‌ ಕುಮಾರ್‌ ದತ್ತಾ ಅವರ ಹಾದಿ ತಕ್ಕ ಮಟ್ಟಿಗೆ ಸುಗಮವಾಗಿದೆ. ಅಕ್ರಮ ಮಾರ್ಗದಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ ಎಂಬುದಾಗಿ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಸಂಬಂಧದ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಜಾ ಮಾಡಿದೆ. ಇದರಿಂದಾಗಿ ರಾಜ್ಯದ ನೂತನ ಪೊಲೀಸ್‌ ಮಹಾನಿರ್ದೇಶಕರಾಗುವ ಅವರ ಕನಸಿಗೆ ರೆಕ್ಕೆ ಪುಕ್ಕ ಬಂದಿದೆ. ಸದ್ಯ ಕೇಂದ್ರ ಗೃಹ ಸಚಿವಾಲಯದ ಆಂತರಿಕ ಸುರಕ್ಷತಾ ವಿಭಾಗದ ವಿಶೇಷ ಕಾರ್ಯದರ್ಶಿಯಾಗಿ ಆರ್‌.ಕೆ.ದತ್ತಾ ಕಾರ್ಯ ನಿರ್ವಹಿಸುತ್ತಿದ್ದಾರೆ. 

Advertisement

ಮುಖ್ಯಮಂತ್ರಿ ಭೇಟಿಯಾಗಿದ್ದ ದತ್ತಾ 
ರೂಪಕ್‌ಕುಮಾರ್‌ ದತ್ತಾ ಅವರು ಮುಖ್ಯಮಂತ್ರಿ ಅವರನ್ನು ಎರಡು ಬಾರಿ ಭೇಟಿಯಾಗಿ ರಾಜ್ಯದಲ್ಲಿ ತಮ್ಮ ಸೇವೆ ಮುಂದುವರಿಸಲು ಅವಕಾಶ ನೀಡುವಂತೆ ಕೋರಿದ್ದಾರೆ ಎನ್ನಲಾಗಿದೆ.

ರಾಜ್ಯ ಸೇವೆಗೆ ಬರಲು ನಾನು ಆಸಕ್ತಿ ಹೊಂದಿದ್ದೇನೆ. ಆದರೆ, ಪೊಲೀಸ್‌ ಮಹಾನಿರ್ದೇಶಕ ಹುದ್ದೆ ವಿಚಾರದಲ್ಲಿ ಏನನ್ನೂ ಮಾತನಾಡುವುದಿಲ್ಲ. ಆ ಮೂಲಕ ವಿವಾದಕ್ಕೂ ಕಾರಣನಾಗುವುದಿಲ್ಲ.”ಆಲ್‌ ಈಸ್‌ ವೆಲ್‌’.
-ರೂಪಕ್‌ಕುಮಾರ್‌ ದತ್ತಾ  

Advertisement

Udayavani is now on Telegram. Click here to join our channel and stay updated with the latest news.

Next