Advertisement

ಎಫ್‌ಐಆರ್‌ ದಾಖಲಿಸದ್ದಕ್ಕೆ ಇಲಾಖೆ ತನಿಖೆ ನಡೆಸಿ

11:27 AM Oct 18, 2021 | Team Udayavani |

ಕಲಬುರಗಿ: ಸೇಡಂ ತಾಲೂಕಿನಲ್ಲಿ ತನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಎಂದು ಯುವಕ ದೂರು ನೀಡಿದರೂ ಎಫ್‌ಐಆರ್‌ ದಾಖಲಿಸದೇ ಮುಧೋಳ ಪೊಲೀಸ್‌ ಇನ್ಸ್‌ಪೆಕ್ಟರ್‌ ನಿರ್ಲಕ್ಷ್ಯಯವಹಿಸಿರುವ ಬಗ್ಗೆ ಇಲಾಖಾ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಡಾ| ಶರಣಪ್ರಕಾಶ ಪಾಟೀಲ ಆಗ್ರಹಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೊಲೀಸ್‌ ಇನ್ಸ್‌ಪೆಕ್ಟರ್‌ ನಿರ್ಲಕ್ಷ್ಯದಿಂದಲೇ ರಾಘವೇಂದ್ರ ಎನ್ನುವ ಯುವಕ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ಈ ಯುವಕ ತನ್ನ ಮೇಲೆ ಹಲ್ಲೆ ನಡೆಯುವ ಭಯದಿಂದ ಪೊಲೀಸ್‌ ಠಾಣೆಗೆ ಹೋದರೂ ದೂರು ದಾಖಲಿಸಿಕೊಳ್ಳದೇ ಪೊಲೀಸರು ಯುವಕನನ್ನೇ ಬೆದರಿಸಿ ಕಳುಹಿಸಿದ್ದಾರೆ. ನಂತರ ಯುವಕ ಬಸ್‌ ನಿಲ್ದಾಣದ ಕಡೆ ತೆರಳುತ್ತಿದ್ದಾಗ ಗ್ರಾಮದ ಸಂದಪ್ಪ ಮತ್ತು ಆತನ ಸಹಚರರು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಯುವಕ ಠಾಣೆಗೆ ಬಂದಾಗಲೇ ಎಫ್‌ಐಆರ್‌ ದಾಖಲಿಸಿಕೊಂಡು ಆರೋಪಿಗಳನ್ನು ಕರೆಸಿ, ವಿಚಾರಣೆ ನಡೆದಿದ್ದರೆ ಈ ಹಲ್ಲೆ ಘಟನೆ ನಡೆಯುತ್ತಿರಲಿಲ್ಲ ಎಂದರು.

ಪೊಲೀಸರ ಅಲಕ್ಷ್ಯದಿಂದಲೇ ಅಮಾಯಕನೊಬ್ಬ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರುವಂತೆ ಆಗಿದೆ. ಅಲ್ಲದೇ, ಈ ಯುವಕನಿಗೆ ಬ್ರೇನ್‌ ಸರ್ಜರಿ ಸಹ ಆಗಿದೆ. ಈ ಘಟನೆ ಬಗ್ಗೆ ನಾನು ಡಿಎಸ್‌ಪಿ, ಐಜಿಪಿ ಅವರ ಗಮನ ಸೆಳೆದಾಗ ಪೊಲೀಸ್‌ ಇನ್ಸ್‌ಪೆಕ್ಟರ್‌ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಅಮಾನತು ಮಾಡಲಾಗಿದೆ. ಅಲ್ಲದೇ, ಸುಮಾರು ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಈ ಮೊದಲೇ ಎಫ್‌ಐಆರ್‌ ದಾಖಲಿಸಿಕೊಳ್ಳದಿರುವ ಬಗ್ಗೆ ಪೊಲೀಸ್‌ ಇನ್ಸ್‌ಪೆಕ್ಟರ್‌ಇಲಾಖೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಯುವಕನ ಮೇಲೆ ಹಲ್ಲೆ ಘಟನೆ, ಕರ್ತವ್ಯ ನಿರ್ಲಲಕ್ಷ್ಯದಡಿ ಅಮಾನತಾದ ಪೊಲೀಸ್‌ ಇನ್ಸ್‌ಪೆಕ್ಟರ್‌ ಪರವಾಗಿ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ್‌ ಏಳು ಗಂಟೆ ರಸ್ತೆ ಸಂಚಾರ ತಡೆ ನಡೆಸಿ ಪ್ರತಿಭಟನೆ ನಡೆಸಿರುವುದು ನಾಚಿಕೆಗೇಡು ಸಂಗತಿ ಎಂದು ಶರಣಪ್ರಕಾಶ ಕಿಡಿಕಾರಿದರು.

ಇದನ್ನೂ ಓದಿ: ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

Advertisement

ಹಲ್ಲೆ ಆರೋಪಿಗಳನ್ನು ರಕ್ಷಣೆ ಮಾಡಲು ಶಾಸಕರು ಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ಗೂಂಡಾಗಿರಿ ನಡೆಯಲ್ಲ. ಇನ್ಸ್‌ಪೆಕ್ಟರ್‌ರನ್ನು ಅಮಾನತು ಮಾಡಿದ್ದು ನಾವಲ್ಲ. ಪೊಲೀಸ್‌ ಇಲಾಖೆಯೇ ಘಟನೆಗೆ ಕಾರಣರಾದವರ ಸತ್ಯಾಸತ್ಯತೆ ಅರಿತು ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ತಿಳಿದು ಅಮಾನತು ಮಾಡಿದೆ. ಇದರ ಪರಿಜ್ಞಾನವೂ ಇಲ್ಲದೇ ಸ್ವತಃ ಶಾಸಕರೇ ಪ್ರತಿಭಟನೆ ಮಾಡಿದ್ದು ಯಾರ ವಿರುದ್ಧ ಎನ್ನುವುದನ್ನಾದರೂ ಹೇಳಬೇಕು. ರಸ್ತೆ ಸಂಚಾರ ಬಂದ್‌ ಮಾಡಿ, ಸಾರ್ವಜನಿಕರಿಗೆ ತೊಂದರೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಸುಭಾಷ ರಾಠೊಡ, ಇಮ್ರಾನ್‌ ಖಾನ್‌ ಇದ್ದರು.

ಸರ್ವೇ ಮಾಡಿ-ಸೌಲಭ್ಯ ಒದಗಿಸಿ ಡಾ| ಶರಣಪ್ರಕಾಶ

ಚಿಂಚೋಳಿ ಮತ್ತು ಕಾಳಗಿ ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಭೂಕಂಪದ ಬಗ್ಗೆ ಸರಿಯಾದ ಸರ್ವೇ ಮಾಡಬೇಕು. ಗಡಿಕೇಶ್ವಾರ ಗ್ರಾಮದ ಸುತ್ತಲಿನ 10 ಕಿ.ಮೀ ವ್ಯಾಪ್ತಿಯ ಸುಮಾರು 40 ಹಳ್ಳಿಗಳನ್ನು ಸರ್ವೇ ಮಾಡಿ ಸೌಲಭ್ಯ ಒದಗಿಸಬೇಕೆಂದು ಡಾ| ಶರಣಪ್ರಕಾಶ ಪಾಟೀಲ ಒತ್ತಾಯಿಸಿದರು. ರಾಜ್ಯ ಸರ್ಕಾರ, ಜಿಲ್ಲಾಡಳಿತದ ಮೇಲೆ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಾಗಲೇ ಗಡಿಕೇಶ್ವಾರ ಗ್ರಾಮದ ಶೇ.70ರಷ್ಟು ಜನರು ಗ್ರಾಮ ತೊರೆದಿದ್ದಾರೆ. ಇನ್ನೂ ಕೆಲವರು ಗ್ರಾಮ ಬಿಟ್ಟು ಗುಳೆ ಹೋಗಿದ್ದಾರೆ. ಭೂಕಂಪನ ಆಗುತ್ತಿದ್ದಂತೆ ಜನರಿಗೆ ಧೈರ್ಯ ತುಂಬಿ ಸೌಲಭ್ಯ ಒದಗಿಸಿದ್ದರೆ ಜನರು ಗ್ರಾಮ ತೊರೆಯುತ್ತಿರಲಿಲ್ಲ ಎಂದು ಹೇಳಿದರು. ಈಗ ಜಿಲ್ಲಾಡಳಿತ ಕೇವಲ ಗಡಿಕೇಶ್ವಾರ, ಹೊಸಳ್ಳಿ, ಕೊರವಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಮಾತ್ರ ಟಿನ್‌ ಶೆಡ್‌ಗಳನ್ನು ಹಾಕಿ ಊಟದ ವ್ಯವಸ್ಥೆ ಮಾಡಿದೆ. ಆದರೆ, ಗಡಿಕೇಶ್ವಾರ ಗ್ರಾಮದ ಸುತ್ತ-ಮುತ್ತಲಿನ 10 ಕಿ.ಮೀ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸರ್ವೇ ಕಾರ್ಯ ನಡೆಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next