Advertisement

ಪೊಲೀಸ್‌ ಪೇದೆಯನ್ನೇ ಬಲಿ ಪಡೆದ ಮೀಟರ್‌ ಬಡ್ಡಿ ದಂಧೆ!

12:19 PM Jan 05, 2017 | |

ಹುಣಸೂರು/ಮೈಸೂರು: ಮೀಟರ್‌ ಬಡ್ಡಿ ದಂಧೆ ಪೊಲೀಸ್‌ ಪೇದೆಯನ್ನೇ ಬಲಿ ಪಡೆದಿದೆ. ಇಲಾಖೆಯಿಂದ ವಜಾಗೊಂಡಿದ್ದ ನೌಕರನಿಂದ ಸಾಲ ಪಡೆದು ಆತನ ಕಿರುಕುಳದಿಂದ ಬೇಸತ್ತು ಹುಣಸೂರು ನಗರ ಠಾಣೆಯ ಪೊಲೀಸ್‌ ಪೇದೆ ಕ್ರಿಮಿನಾಶಕ ಸೇವಿಸಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಸಾವನ್ನಪ್ಪಿದ್ದಾರೆ.

Advertisement

ಮೂಲತಃ ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣ ತಾಲೂಕಿನ ಕೋಮಲಾಪುರದ ನಿವಾಸಿ, ಹಾಲಿ ಹುಣಸೂರು ನಗರ ಠಾಣೆಯ ಪರಮೇಶ್‌ (31) ಆತ್ಮಹತ್ಯೆಗೆ ಶರಣಾದ ಪೇದೆ. ಪತ್ನಿ, ಐದು ವರ್ಷದ ಮಗು ಇದೆ. 2006ರಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ್ದು, ಕಳೆದೆರಡು ವರ್ಷಗಳಿಂದ ಹುಣಸೂರು ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. 

ಮೃತ ಪರಮೇಶ್‌ ಮೈಸೂರಿನ ಪೊಲೀಸ್‌ ಇಲಾಖೆಯ ವಜಾಗೊಂಡ ನೌಕರನೊಬ್ಬನಿಂದ ಹಣ ಪಡೆದಿದ್ದರು ಎನ್ನಲಾಗಿದ್ದು, ಇದಕ್ಕಾಗಿ ಆತ ಪೇದೆ ಪರಮೇಶ್‌ ಎಟಿಎಂ ಕಾರ್ಡ್‌ 
ಪಡೆದು ಪ್ರತಿ ತಿಂಗಳು 2500 ರೂ. ಬಡ್ಡಿ ಹಣ ಡ್ರಾ ಮಾಡಿಕೊಳ್ಳುತ್ತಿದ್ದ, ಎಟಿಎಂ ಇಲ್ಲದೆ ಹಣ ಬೇಕೆಂದಾಗ ಮೈಸೂರಿಗೆ ತೆರಳಿ ಆತನಿಂದಲೇ ಉಳಿದ ಹಣ ಪಡೆಯಬೇಕಿತ್ತು, ಇದರಿಂದ ಬೇಸತ್ತಿದ್ದ ಪರಮೇಶ್‌ ಹಣಕ್ಕಾಗಿ ಹೆಣಗಾಡುತ್ತಿದ್ದರು.

ನಂಜನಗೂಡು ತಾಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ನ 17ನೇ ರಾಷ್ಟ್ರೀಯ ಜಾಂಬೂರಿಯಲ್ಲಿ ವಿಶೇಷ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಪರಮೇಶ ಕರ್ತವ್ಯ ಮುಗಿಸಿ ಮಂಗಳವಾರ ಹುಣಸೂರಿಗೆ ತೆರಳಬೇಕಿತ್ತು. ಪರಮೇಶ್‌ ಊರಿಗೆ ವಾಪಾಸ್‌ ಬರುವಾಗ ಸ್ನೇಹಿತನಿಂದ ಎಟಿಎಂ ಕಾರ್ಡ್‌ ಪಡೆದು ಬರುತ್ತೇನೆಂದು ಪತ್ನಿಯೊಂದಿಗೆ ಹೇಳಿದ್ದರು.

ಆದರೆ ಅಡಕನಹಳ್ಳಿಯಿಂದ ವಾಪಸ್‌ ಆಗಿದ್ದ ಪರಮೇಶ, ಮೈಸೂರಿನ ಗೌರಿಶಂಕರ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಚಾಮುಂಡಿ ಬೆಟ್ಟದ  ತಪ್ಪಲಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೆ.ಆರ್‌.ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿ ಸಾವಿಗೆ ಬಡ್ಡಿಗೆ ಹಣ ನೀಡಿದ್ದಾತನ ಕಿರುಕುಳವೇ ಕಾರಣ ಎಂದು ಹುಣಸೂರು ನಗರ ಠಾಣೆಯಲ್ಲಿ ಪತ್ನಿ ಅಶ್ವಿ‌ನಿ ದೂರು ದಾಖಲಿಸಿದ್ದಾರೆ. ಎಎಸ್‌ಪಿ ಹರೀಶ್‌ ಪಾಂಡೆ ತನಿಖೆ ನಡೆಸುತ್ತಿದ್ದಾರೆ.

Advertisement

ಹುಟ್ಟೂರಲ್ಲಿ ಅಂತ್ಯಕ್ರಿಯೆ: ಮೃತ ಪರಮೇಶ್‌ ಮರಣೊತ್ತರ ಪರೀಕ್ಷೆ ನಡೆಸಿ, ಕಳೆಬರವನ್ನು ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಕೆಲಹೊತ್ತು ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹುಟ್ಟೂರು ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರಕ್ಕೆ ಕೊಂಡೊಯ್ದು ಬುಧವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು. ವೃತ್ತ ನಿರೀಕ್ಷಕ ಧರ್ಮೇಂದ್ರ, ಎಸ್‌.ಐ. ಷಣ್ಮುಗಂ ಸೇರಿದಂತೆ ಸಹದ್ಯೋಗಿ ಮಿತ್ರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next