ಬೆಂಗಳೂರು: ನಗರ ಪೊಲೀಸ್ ಇಲಾಖೆಯಲ್ಲಿ ದಿನೇ ದಿನೆ ಸೋಂಕಿತರ ಪಟ್ಟಿ ಬೆಳೆಯುತ್ತಿದೆ. ಶುಕ್ರವಾರ ಬಂದ ವರದಿಯಲ್ಲಿ ನಗರ ಪೊಲೀಸ್ ಆಯುಕ್ತರ ಕಚೇರಿಯ ಅಧಿಕಾರಿಯೊಬ್ಬರು ಸೇರಿದಂತೆ 12 ಮಂದಿಯಲ್ಲಿ ಸೋಂಕು ದೃಢವಾಗಿದ್ದು, 3ದಿನಗಳ ಕಾಲ ಆಯುಕ್ತರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಇದೇ ಮೊದಲ ಬಾರಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಸ್ಯಾನಿಟೈಸ್ ಮಾಡಲು ಸೂಚಿಸಲಾಗಿದೆ. ನಗರ ನಿಯಂತ್ರಣ ಕೋಣೆಯಲ್ಲಿ ನಿಯಮಿತ ಸಿಬ್ಬಂದಿಯ ನ್ನೊಳಗೊಂಡಂತೆ ಕಾರ್ಯ ನಿರ್ವಹಣೆ ನಡೆಯಲಿದ್ದು, ಇತರ ಕೆಲಸಗಳನ್ನು ಉಪ ವಿಭಾಗದ ಕಚೇರಿಗಳಿಂದ ನಡೆಸುವಂತೆ ಆಡಳಿತ ವಿಭಾಗದ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಆದೇಶಿಸಿದ್ದಾರೆ.
ಎಸಿಬಿ ಕಚೇರಿಯಲ್ಲಿ ಕೋವಿಡ್ 19: ಎಸಿಬಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರ ಸಹಾಯಕ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಎಸಿಬಿ ಕಚೇರಿಯನ್ನು ತಾತ್ಕಾಲಿಕವಾಗಿ ಒಂದು ದಿನ ಸೀಲ್ ಡೌನ್ ಮಾಡಲಾಗಿತ್ತು. ಔಷಧಿ ಸಿಂಪಡಿಸಲಾಗಿತ್ತು. ಶುಕ್ರವಾರ ಸಂಜೆ ವೇಳೆಗೆ ಕಚೇರಿ ತೆರೆಯಲಾಗಿದ್ದು, ಕೇವಲ ನಾಲ್ಕೈದು ಸಿಬ್ಬಂದಿ ಮಾತ್ರ ಕರ್ತವ್ಯ ನಿರ್ವಹಿಸಿದರು. ಶನಿವಾರ- ಭಾನುವಾರ ಕಚೇರಿ ರಜೆ ಇರಲಿದೆ. ಜತೆಗೆ ಸಹಾಯಕನ ಪರೀಕ್ಷಾ ವರದಿ ಬರುತ್ತಿದ್ದಂತೆ ಹಿರಿಯ ಅಧಿಕಾರಿಯೂ ಪರೀಕ್ಷೆಗೊಳಪಟ್ಟಿದ್ದು, ನೆಗೆಟಿವ್ ಬಂದಿದೆ ಎಂದು ಎಸಿಬಿ ಮೂಲಗಳು ಸ್ಪಷ್ಟಪಡಿಸಿವೆ.
ನಂದಿನಿ ಲೇಔಟ್ ಠಾಣಾ ಪೊಲೀಸರು ದರೋಡೆ ಪ್ರಕರಣದಲ್ಲಿ ಬಂಧಿಸಿದ ಇಬ್ಬರು ಆರೋಪಿಗಳಿಗೆ ಸೋಂಕು ದೃಢಪಟ್ಟಿದೆ. ಸಿ.ಟಿ.ಮಾರುಕಟ್ಟೆಯ ಮಹಿಳಾ ಪಿಎಸ್‌ಐ, ಮೂವರು ಕಾನ್ ಸ್ಟೇಬಲ್ ಹಾಗೂ ಒಬ್ಬ ಗೃಹ ರಕ್ಷಕ ದಳ, ಬಂಡೇಪಾಳ್ಯ ಮತ್ತು ಚಾಮರಾಜಪೇಟೆ ಠಾಣೆಯ ತಲಾ ಒಬ್ಬ ಗೃಹ ರಕ್ಷಕ ದಳ, ಎಚ್‌ಎಎಲ್ ಠಾಣೆಯ ಹೆಡ್ ಕಾನ್‌ಸ್ಟೆàಬಲ್, ಕೆಂಗೇರಿ ಠಾಣೆ ಮತ್ತು ವಿಧಾನಸೌಧ ಡಿಸಿಪಿ ಕಚೇರಿಯ ತಲಾ ಸಿಬ್ಬಂದಿ ಸೇರಿ 12ಕ್ಕೂ ಅಧಿಕ ಪೊಲೀಸರಿಗೆ ಶುಕ್ರವಾರ ಕೋವಿಡ್ 19 ಕಾಣಿಸಿಕೊಂಡಿದ್ದು, ಈ ಠಾಣೆ ಮತ್ತು ಕಚೇರಿಗಳನ್ನು ತಾತ್ಕಾಲಿಕವಾಗಿ ಸೀಲ್‌ಡೌನ್ ಮಾಡಲಾಗಿದೆ. 60 ಮಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಕಾರಾಗೃಹದ ಪೊಲೀಸ್‌ಗೆ ಸೋಂಕು: ಬೆಂಗಳೂರು ಕಾರಾಗೃಹ ಇಲಾಖೆಯ ಪೊಲೀ ಸರೊಬ್ಬರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರ ಅಧೀನದಲ್ಲಿದ್ದ ಸುಮಾರು 20 ಮಂದಿಗೆ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೆ ಅವರ ಪತ್ನಿ, ಮಕ್ಕಳು ಹಾಗೂ ಕೆಲಸಗಾರರಿಗೂ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಫ್ರೀಡಂ ಪಾರ್ಕ್ ಮುಂಭಾಗ ಇರುವ ಕಚೇರಿಯನ್ನು ಸ್ಯಾನಿಟೈಸರ್ ಮಾಡಲಾಗಿದ್ದು, ಸೀಲ್ ಡೌನ್ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ.
ಇಲಾಖೆ ನಿರ್ಲಕ್ಷ್ಯ?: ಸೋಂಕಿಗೊಳಗಾಗಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಕರೆದೊಯ್ಯುವ ವಿಚಾರದಲ್ಲಿ ಆಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವ ಆರೋಪ ಕೇಳಿಬಂದಿದೆ. ಬಂಡೆಪಾಳ್ಯ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹ ರಕ್ಷಕ ದಳ ಸಿಬ್ಬಂದಿಯಲ್ಲಿ ಸೋಂಕು ದೃಢವಾಗಿತ್ತು. ಪೊಲೀಸರು ಆರೋಗ್ಯಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ, ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಕಳಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.