ವಾಡಿ: ದೇವರ ದರ್ಶನಕ್ಕೆ ಬಂದ ವ್ಯಕ್ತಿಯೋರ್ವನನ್ನು ಬೆನ್ನಟ್ಟಿ ಆ್ಯಸಿಡ್ ಕುಡಿಸಿ ಕೊಲ್ಲಲು ಪ್ರಯತ್ನಿಸಿದ ದುಷ್ಕರ್ಮಿಗಳು, ಉಸಿರು ನಿಲ್ಲುವ ಮುನ್ನವೇ ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಸಾರ್ವಜನಿಕರ ಸಹಾಯದಿಂದ ಆಸ್ಪತ್ರೆಗೆ ಸೇರಿದ್ದ ವ್ಯಕ್ತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಲಬುರಗಿ ನಗರದ ನಿವಾಸಿ ವಿಜಯಕುಮಾರ ಶೀಲವಂತ (38) ಕೊಲೆಯಾದ ವ್ಯಕ್ತಿ. ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಗುರುವಾರ ಸಂಜೆ ಹಳಕರ್ಟಿ ಶ್ರೀವೀರಭದ್ರೇಶ್ವರ ದೇವಸ್ಥಾನಕ್ಕೆ ಬಂದಿದ್ದ ಎನ್ನಲಾಗಿದೆ. ದೇವರ ದರ್ಶನ ಪಡೆದು ರಾವೂರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೈಕ್ ನಲ್ಲಿ ಕಲಬುರಗಿಗೆ ತೆರಳುತ್ತಿದ್ದ. ಚಿತ್ತಾಪುರ-ರಾವೂರ ವೃತ್ತದಲ್ಲಿ ವಿಜಯಕುಮಾರನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಪಕ್ಕದ ಜಮೀನಿಗೆ ಎಳೆದೊಯ್ದು ಹಣ ಮತ್ತು ಚಿನ್ನಾಭರಣ ಕಸಿದುಕೊಂಡಿದ್ದಾರೆ. ರಾಡ್ ನಿಂದ ಹೊಡೆದು ಕೊಲೆಗೆ ಪ್ರಯತ್ನಿಸಿದ್ದಾರೆ. ಅಲ್ಲದೆ ಒತ್ತಾಯ ಪೂರ್ವಕವಾಗಿ ಆಸಿಡ್ ಕುಡಿಸಿದ್ದಾರೆ ಎನ್ನಲಾಗಿದೆ.
ವ್ಯಕ್ತಿ ರಕ್ತ ಕಾರಿ ನೆಲಕ್ಕುರುಳಿದ ಬಳಿಕ ದುಷ್ಕರ್ಮಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಗಂಭೀರ ಗಾಯಗೊಂಡ ವ್ಯಕ್ತಿ ಹರಸಾಹಸ ಮಾಡಿ ಹೆದ್ದಾರಿಗೆ ಬಂದು ಬಿದ್ದಿದ್ದಾನೆ. ವಾಹನ ಸವಾರರು ಗಮನಿಸಿ 108 ರಕ್ಷಾ ಕವಚದ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ. ನಂತರ ವಾಡಿ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆದರೆ ಆಸ್ಪತ್ರೆಗೆ ದಾಖಲಾದ ವಿಜಯಕುಮಾರ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ ಪೊಲೀಸ್ ಪೇದೆ : ಇಲ್ಲಿದೆ ಪೇದೆಯ ಅಸಲಿ ಕಹಾನಿ
ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ ಹಾಗೂ ಪಿಎಸ್‌ಐ ಮಹಾಂತೇಶ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನಿಖೆ ಕೈಗೊಂಡಿರುವ ಪೊಲೀಸ್ ಅಧಿಕಾರಿಗಳು, ಕೊಲೆ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ. ತಿಂಗಳ ಹಿಂದೆ ಇದೇ ರಾವೂರ ವೃತ್ತದ ಸಮೀಪ ಕಲಬುರಗಿ ಮೂಲದ ಚಿನ್ನದ ವ್ಯಾಪಾರಿಯೊಬ್ಬನ ಕಗ್ಗೊಲೆ ನಡೆದಿದ್ದನ್ನು ನೆನಪಿಸಿಕೊಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.