ಕನಕಪುರ: ಹಾರೋಹಳ್ಳಿ ಪಿಎಸ್‌ಐ ಮುರಳಿ ದಲಿತ ಸಮುದಾಯದವರ ಮೇಲೆ ವಿನಾಕಾರಣ ಹಲ್ಲೆ ಮಾಡಿದ್ದಾರೆ ಎಂದು ಹಾರೋಹಳ್ಳಿ ದಲಿತ ಮುಖಂಡರು ವೃತ್ತ ನಿರೀಕ್ಷಕ ಸತೀಶ್ ಬಳಿ ದೂರು ನೀಡಿದರು.
ತಾಲೂಕಿನ ಹಾರೋಹಳ್ಳಿ ಪಿಎಸ್‌ಐ ಮುರುಳಿ ವರ್ತನೆ ವಿರುದ್ಧ ಎರಡನೇ ಬಾರಿ ತಿರುಗಿಬಿದ್ದಿರುವ ದಲಿತ ಮುಖಂಡರು, ತಮಗಾದ ಅನ್ಯಾಯದ ಬಗ್ಗೆ ವೃತ್ತ ನಿರೀಕ್ಷಕ ಸತೀಶ್ ಅವರ ಬಳಿ ತಮ್ಮ ಅಳಲು ತೋಡಿಕೊಂಡರು. “ಪಿಎಸ್‌ಐ ಮುರಳಿ ಹಾರೋಹಳ್ಳಿ ಠಾಣೆಗೆ ಬಂದಾಗಿನಿಂದಲೂ ದಲಿತರನ್ನು ಕಡಗಣಿಸುತ್ತಿದ್ದಾರೆ. ಸಮುದಾಯದವರ ದೂರು ಮತ್ತು ಸಮಸ್ಯೆಗಳಿಗೆ ಕಾನೂನು ಬದ್ಧವಾದ ಸಾಮಾಜಿಕ ನ್ಯಾಯ ಒದಗಿಸದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಇವರ ವರ್ತನೆಗೆ ಬೇಸತ್ತು ಕಳೆದ ತಿಂಗಳು ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಿ ತಮ್ಮ ನಡೆಯನ್ನು ಬದಲಿಸಿಕೊಳ್ಳುವಂತೆ ಎಚ್ಚರಿಸಲಾಗಿತ್ತು.
ಘಟನೆ ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರನ್ನು ಗುರಿಯಾಗಿಸಿಕೊಂಡು ವಿನಾಕಾರಣ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ’ ಎಂದು ಪಿಎಸ್‌ಐ ಮೇಲೆ ದೂರಿದರು.
ಐಜಿಪಿ ಕಚೇರಿ ಬಳಿ ಧರಣಿ: ಕಾನೂನು ಎಲ್ಲರಿಗೂ ಒಂದೇ ಆಗಿರಲಿ. ಠಾಣೆಯಲ್ಲಿ ಸಾಮಾಜಿಕ ನ್ಯಾಯ ಪರಿಪಾಲನೆ ಆಗುತ್ತಿಲ್ಲ. ದಲಿತ ಸಮುದಾಯದವರಿಗೆ ಮಾನ್ಯತೆ ದೊರೆಯುತಿಲ್ಲ. ಯಾವುದೇ ಸಮಸ್ಯೆಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ದಲಿತರೆಲ್ಲ ಅವರ ಕಣ್ಣಿಗೆ ರಿಯಲ್ ಎಸ್ಟೇಟ್ ಏಜೆಂಟ್‌ಗಳಂತೆ ಕಾಣುತ್ತದ್ದಾರೆ. ದಲಿತರನ್ನು ದಲ್ಲಾಳಿಗಳೆಂದು ನಿಂದಿಸುತ್ತಾರೆ. ಇದೇ ರೀತಿಯ ದಲಿತ ವಿರೋಧಿ ನೀತಿ ಅನುಸರಣೆಯಾದರೆ ಮುಂದಿನ ದಿನಗಳಲ್ಲಿ ಐಜಿಪಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದರು.
ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ: ವೃತ್ತ ನಿರೀಕ್ಷಕ ಸತೀಶ್ ಮಾತನಾಡಿ, ಸಮಾಜದಲ್ಲಿ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಅದನ್ನು ಸರಿಯಾಗಿ ಪಾಲಿಸಬೇಕು. ಕೆಲವು ಸಂದರ್ಭದಲ್ಲಿ ಸಮಯಕ್ಕೆ ತಕ್ಕ ಹಾಗೆ ವರ್ತಿಸಬೇಕಾದ ಅನಿವಾರ್ಯತೆ ಬಂದಾಗ ಇಂತಹ ಸಮಸ್ಯೆಗಳು ಸಹಜ. ಮುಂದೆ ಇಂತಹ ಘಟನೆಗಳಿಗೆ ಆಸ್ಪದ ಕೊಡಬೇಡಿ ಎಂದು ಪಿಎಸ್‌ಐ ಮುರುಳಿಗೆ ಸಲಹೆ ನೀಡಿದರು.
ಇದನ್ನೂ ಓದಿ :ಸಾವನದುರ್ಗದಲ್ಲಿ ತಲೆ ಎತಲಿದೆ ಧನ್ವಂತರಿ ವನ
ದಲಿತ ಮುಖಂಡ ಎಂ.ಮಲ್ಲಪ್ಪ, ಸೋಮಸುಂದರ್, ಎಸ್.ಕೆ.ಸುರೇಶ್, ಎಚ್.ಸಿ. ಶೇಖರ್, ಎಸ್.ಎಸ್.ಡಿ ರಾಜ್ಯ ಯುವ ಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ, ಕೋಟೆ ಕುಮಾರ್, ದಲಿತ ಸೇನೆ ಜಿÇÉಾಧ್ಯಕ್ಷ ಅಶೋಕ್, ಡಾ.ಉಮೇಶ್, ಪ್ರಕಾಶ್, ಬೆಣಚುಕಲ್ ದೊಡ್ಡಿ ರುದ್ರೇಶ್, ಜಕ್ಕಸಂದ್ರ ಕುಮಾರ್, ಯಡುವನಹಳ್ಳಿ ಚಂದ್ರು, ಲಕ್ಷ್ಮಣ್ ಉಪಸ್ಥಿತರಿದ್ದರು.