Advertisement

ಕೋಟ: ಮೆಹಂದಿ ಮನೆಗೆ ಪೊಲೀಸರ ದಾಳಿ,ಲಾಠಿ ಚಾರ್ಜ್; ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

03:23 PM Dec 28, 2021 | Team Udayavani |

ಕೋಟ: ಮೆಹಂದಿ ಮನೆಗೆ ಪೊಲೀಸರು ದಾಳಿ ನಡೆಸಿ ಲಾಠಿ ಚಾರ್ಜ್ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ‌ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯ ಬಾರಿಕೆರೆಯಲ್ಲಿ ಸೋಮವಾರ ರಾತ್ರಿ ಕೇಳಿ ಬಂದಿದೆ.

Advertisement

ಇಲ್ಲಿನ ನಿವಾಸಿ ರಾಜೇಶ್ ಎನ್ನುವಾತನಿಗೆ ಕುಮಟಾದ ಯುವತಿಯೊಂದಿಗೆ ಗುರುವಾರ ಮದುವೆ ನಡೆಯಬೇಕಿದ್ದು ಈ ಪ್ರಯುಕ್ತ ವರನ ಮನೆಯಲ್ಲಿ ಸೋಮವಾರ ಮೆಹಂದಿ ಕಾರ್ಯಕ್ರಮ ನಡೆಯುತಿತ್ತು. ಈ ಸಂದರ್ಭ ಡಿಜೆ ಶಬ್ಧದಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ ಎಂದು ಸ್ಥಳೀಯರೋರ್ವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಏಕಾಏಕಿ ಮದುವೆ ಮನೆಗೆ ನುಗ್ಗಿದ ಪೊಲೀಸರು ಮಹಿಳೆಯರು, ಮಕ್ಕಳು ಹಾಗೂ ವರನ ಸಹಿತ ಎಲ್ಲರ ಮೇಲೂ ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ 9 ಮಂದಿ ಗಾಯಗೊಂಡಿದ್ದು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಐವರ ವಶ; ಠಾಣೆಗೆ ಮುತ್ತಿಗೆ; ಮೆಹಂದಿ ಮನೆಯಿಂದ ವರ ರಾಜೇಶ್ ಹಾಗೂ ಎಸ್ ಟಿ ಸಮುದಾಯದ ಮುಖಂಡ ಸಹಿತ ಐವರನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದರು. ಇದರಿಂದ ಆಕ್ರೋಶಿತಗೊಂಡ ಸ್ಥಳೀಯರು ಹಾಗೂ ಎಸ್ ಟಿ ಸಮುದಾಯದವರು ರಾತ್ರೋರಾತ್ರಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು‌. ಅನಂತರ ವಶಕ್ಕೆ ಪಡೆದವರನ್ನು ಬಿಡುಗಡೆಗೊಳಿಸಲಾಯಿತು.

ಇದನ್ನೂ ಓದಿ: ಮಂಗಳೂರು: ಕೊರಗಜ್ಜನ ಗುಡಿಯ ಎದುರು ಉಪಯೋಗಿಸಿದ ಕಾಂಡೋಮ್ ಇಟ್ಟ ಕಿಡಿಗೇಡಿಗಳು; ಪ್ರಕರಣ ದಾಖಲು

Advertisement

ಕ್ರಮಕ್ಕೆ ಆಗ್ರಹ: ಘಟನಾ ಸ್ಥಳಕ್ಕೆ ಡಿವೈಎಸ್ಪಿ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು. ಈ ಘಟನೆ ಅತ್ಯಂತ ಅಮಾನವೀಯ ಮತ್ತು ಹೇಯವಾದದ್ದು. ಆದ್ದರಿಂದ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಸ್ ಟಿ ಸಮುದಾಯದ ಮುಖಂಡರು,ಸ್ಥಳಿಯರು ಆಗ್ರಹಿಸಿದರು.

ಎಸ್ಪಿ ಕಚೇರಿ ಮುಂದೆ ಧರಣಿಯ ಎಚ್ಚರಿಕೆ: 

ಕೋಟತಟ್ಟು ಕೊರಗ ಸಮುದಾಯದವರ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ನುಗ್ಗಿ ಹೆಣ್ಣು ಮಕ್ಕಳಿಗೆ , ಮಧುಮಗನನ್ನು ಲೆಕ್ಕಿಸದೇ ಲಾಠಿ ಬಿಸಿ, ಬೇದರಿಸಿ ಅವಾಚ್ಯ ಶಬ್ಧಗಳಿಂದ ಬೈದ ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್‌ ಮತ್ತು ಅವರೊಂದಿಗೆ ಲಾಠಿ ಚಾರ್ಜ್ ಮಾಡಿದ ಕೋಟ ಠಾಣಾ ಸಿಬ್ಬಂದಿ ಈ ಕೂಡಲೇ ಅಮಾನತು ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

ಈ ಕೂಡಲೇ ಅಮಾನತು ಮಾಡದಿದ್ದರೆ ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಾಗುವುದೆಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next