Advertisement

ಫೈರಿಂಗ್‌ ಆರೋಪಿ ಸೆರೆ ಹಿಡಿದ ಪೊಲೀಸರು

03:12 PM May 20, 2022 | Team Udayavani |

ಹಾವೇರಿ: ಶಿಗ್ಗಾವಿ ಪಟ್ಟಣದಲ್ಲಿ ಕೆಜಿಎಫ್‌-2 ಚಿತ್ರ ಪ್ರದರ್ಶನದ ವೇಳೆ ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನೆ ನಡೆದು ಬರೋಬ್ಬರಿ ಒಂದು ತಿಂಗಳ ನಂತರ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

Advertisement

ಶಿಗ್ಗಾವಿ ಪಟ್ಟಣದ ನಿವಾಸಿ ಮಂಜುನಾಥ (ಮಲ್ಲಿಕ್‌) ಪಾಟೀಲ ಎಂಬ ಆರೋಪಿಯನ್ನು ಪೊಲೀಸರು ಗುರುವಾರ ಬೆಳಗಿನ ಜಾವ ಮುಂಡಗೋಡದಲ್ಲಿ ವಶಕ್ಕೆ ಪಡೆದಿದ್ದಾರೆ. ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಏ.19ರಂದು ಕೆಜಿಎಫ್‌-2 ಚಿತ್ರದ ರಾತ್ರಿ ಪ್ರದರ್ಶನದ ವೇಳೆ ಗುಂಡಿನ ದಾಳಿ ನಡೆಸಿದ್ದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಆತನ ಬಂಧನಕ್ಕೆ ಬಲೆ ಬೀಸಿದ್ದರು. ಮಂಜುನಾಥ ಪಾಟೀಲನ ಫೋಟೋದೊಂದಿಗೆ ಪ್ರಕಟಣೆಯೊಂದನ್ನು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹೊರಡಿಸಿ ಆತನ ಸುಳಿವು ಸಿಕ್ಕಲ್ಲಿ ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಲು ಮನವಿ ಮಾಡಿದ್ದರು.

ಆದರೆ, ಆರೋಪಿ ಆಗಿಂದಾಗ್ಗೆ ಸ್ಥಳ ಬದಲಾಯಿಸುತ್ತಾ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಕೊನೆಗೂ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ಬಳಿ ಪಿಸ್ತೂಲ್‌ ಹೇಗೆ ಬಂತು, ಯಾವ ಉದ್ದೇಶಕ್ಕಾಗಿ ಪಿಸ್ತೂಲ್‌ ಹೊಂದಿದ್ದ. ಚಿತ್ರಮಂದಿರದಿಂದ ಎಲ್ಲಿಗೆ ಹೋಗಿ ಪಿಸ್ತೂಲ್‌ ತಂದಿದ್ದ ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ.

ಈ ಕುರಿತು ನಗರದ ಎಸ್‌ಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್‌ಪಿ ಹನುಮಂತರಾಯ, ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ವೀರಬಸಪ್ಪ ಗೊಬ್ಬಿ, ನಿಜಗುಣಿ ಭದ್ರಶೆಟ್ಟಿ, ವಸಂತಕುಮಾರ ಶಿವಪುರ, ಬಸವರಾಜ ಕಾಮನಹಳ್ಳಿ, ಪ್ರವೀಣ ಬನ್ನಿಕೊಪ್ಪ ಎಂಬವರು ಕೆಜಿಎಫ್‌-2 ಸಿನಿಮಾ ಪ್ರೇಕ್ಷಿಸಲು ಹೋಗಿದ್ದರು. ಸಿನಿಮಾ ನೋಡುವಾಗ ವಸಂತಕುಮಾರ ಈತನ ಸ್ನೇಹಿತನೊಬ್ಬ ಖಾಲಿ ಇದ್ದ ಮುಂದಿನ ಸೀಟ್‌ ಮೇಲೆ ಕಾಲು ಇಟ್ಟುಕೊಂಡು ಕುಳಿತಾಗ ಆರೋಪಿ ಮಂಜುನಾಥ ಪಾಟೀಲ ಕಾಲು ತೆಗೆ ಎಂದಿದ್ದಕ್ಕೆ ಗಲಾಟೆ ಆರಂಭವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಆರೋಪಿ ಮಂಜುನಾಥ ಹೊರಗಡೆ ಹೋಗಿ ಕೆಲ ನಿಮಿಷಗಳ ಬಳಿಕ ಮರಳಿ ಬಂದು ವಸುಂತಕುಮಾರನ ಹೊಟ್ಟೆ, ಕೈಗೆ ಬಂದೂಕಿನಿಂದ ಗುಂಡು ಹಾರಿಸಿದ್ದ. ಇದರಿಂದ ಗಂಭೀರ ಗಾಯಗೊಂಡಿರುವ ವಸಂತಕುಮಾರ್‌ ಕಿಮ್ಸ್‌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎಂದರು.

ಗುಂಡು ಹಾರಿಸಿ ಪರಾರಿಯಾದ ಆರೋಪಿಯ ಹೆಸರು, ವಿಳಾಸವನ್ನು ಅಂದೇ ಪತ್ತೆ ಮಾಡಿ ಆತನ ಬಂಧನಕ್ಕೆ ತಂಡಗಳನ್ನು ರಚಿಸಲಾಗಿತ್ತು. ಆಪಾದಿತನು ಬಳಸುತ್ತಿದ್ದ ಬ್ಯಾಂಕ್‌ ವ್ಯವಹಾರ, ಮೊಬೈಲ್‌ ಜಾಡು ಹಿಡಿದು ಆತ ಈ ಮೊದಲು ಕೆಲಸ ಮಾಡಿದ್ದ ಬೆಂಗಳೂರು, ಗೋವಾ, ಪೂಣಾ, ಮುಂಬೈ, ಕಲ್ಯಾಣ, ವಾಸಿ, ನವಿ ಮುಂಬೈ, ನಾಗಪುರ ಸೇರಿ ವಿವಿಧ ಕಡೆ ಕಾರ್ಯಾಚರಣೆ ನಡೆಸಲಾಯಿತು. ಮಹಾರಾಷ್ಟ್ರ ಕಲ್ಯಾಣ ನಗರದಲ್ಲಿರುವ ಕಿಂಗ್‌ಸ್ಟಾರ್‌ ಹೋಟೆಲ್‌ ಮತ್ತು ಲಾಡ್ಜ್ ಮಾಲಿಕರನ್ನು ಭೇಟಿಯಾದಾಗ ಅವರು ಆಪಾದಿತನು ತಮ್ಮಲ್ಲಿ ಕೆಲಸ ಮಾಡುತ್ತಿದ್ದು, ಸದ್ಯ ಹಣ ಬರುವುದಿದೆ. ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ ಎಂಬ ಮಾಹಿತಿ ಕೊಟ್ಟಿದ್ದರು.

Advertisement

ಬಳಿಕ ಆತನ ಮೊಬೈಲ್‌ ಲೋಕೇಷನ್‌ ಮೇಲೆ ನಿಗಾ ವಹಿಸಿ ಗುರುವಾರ ಬೆಳಗ್ಗೆ 6.30ರ ವೇಳೆಗೆ ಮುಂಡಗೋಡ ಬಸ್‌ ನಿಲ್ದಾಣದ ಬಳಿ ವಶಕ್ಕೆ ಪಡೆಯಲಾಗಿದೆ. ಆರೋಪಿಯಿಂದ ಒಂದು ಗನ್‌, 15 ಜೀವಂತ ಗುಂಡುಗಳು, 2 ಖಾಲಿ ಕೋಕಾ, ಒಂದು ಸ್ಕೂಟಿ ಮೋಟಾರು ಸೈಕಲ್‌, ಒಂದು ಮೊಬೈಲ್‌ ಜಪ್ತಿ ಮಾಡಲಾಗಿದೆ. ಈತ ಓಡಿ ಹೋಗಿ ಬಚ್ಚಿಟ್ಟುಕೊಳ್ಳಲು ನಗದು ಕೊಟ್ಟು ಸಹಾಯ ಮಾಡಿದ ಆರೋಪದ ಮೇಲೆ ಬಂಕಾಪುರದ ಇಸ್ಮಾಯಿಲ್‌ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದೆ ಎಂದರು.

ಆರೋಪಿ ಬಂಧನಕ್ಕೆ ಎಎಸ್ಪಿ ವಿಜಯಕುಮಾರ ಪಾಟೀಲ, ಶಿಗ್ಗಾವಿ ಡಿಎಸ್‌ಪಿ ಓ.ಬಿ. ಕಲ್ಲೇಶಪ್ಪ ಅವರ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಕೆ. ಹಳಬಣ್ಣನವರ, ಪಿಐ ಸಂತೋಷ ಪಾಟೀಲ, ಪಿಐ ಎಂ.ಐ. ಗೌಡಪ್ಪಗೌಡ, ಪಿಎಸ್‌ಐ ಮಹಾಂತೇಶ, ಪಿಎಸ್‌ಐ ಶ್ರೀಶೈಲ ಪಟ್ಟಣಶೆಟ್ಟಿ, ಪಿಎಸ್‌ಐ ಪರಶುರಾಮ ಕಟ್ಟಿಮನಿ, ಸಿಬ್ಬಂದಿ ಕಾಶಿನಾಥ, ವೆಂಕಟೇಶ, ಮಂಜುನಾಥ ಲಮಾಣಿ, ಪುಟ್ಟಪ್ಪ ಬಾವಿಕಟ್ಟಿ, ಮಂಜುನಾಥ ಏರಿಶೀಮಿ, ಆನಂದ ದೊಡ್ಡಕುರುಬರ, ಮಹೇಶ ಹೊರಕೇರೆ, ಅಬುಸಲಿಯಾ ಕೋಟಿ, ಯಲ್ಲಪ್ಪ ದೊಡ್ಡಮನಿ, ಸತೀಶ ಮರಕಟ್ಟಿ, ಮಾರುತಿ ಹಾಲಬಾವಿ ಕಾರ್ಯಾಚರಣೆ ನಡೆಸಿದ್ದು, ಎಲ್ಲರಿಗೂ ಬಹುಮಾನ ನೀಡಲಾಗುವುದು ಎಂದರು.

ಶಿಗ್ಗಾವಿ ಪಟ್ಟಣದಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದಲ್ಲಿ ಆರೋಪಿ ಅನ ಧಿಕೃತವಾಗಿ ಕಂಟ್ರಿ ಪಿಸ್ತೂಲ್‌ ಹೊಂದಿದ್ದು, ಸರ್ಕಾರದಿಂದ ಪರವಾನಗಿ ಪಡೆದಿಲ್ಲ. ಯಾವ ಉದ್ದೇಶಕ್ಕೆ ಗನ್‌ ತಂದಿದ್ದ, ಎಲ್ಲಿಂದ ತಂದಿದ್ದ ಎಂಬುದನ್ನು ಹೆಚ್ಚಿನ ತನಿಖೆ ಮೂಲಕ ಪತ್ತೆ ಹಚ್ಚಲಾಗುವುದು. –ಹನುಮಂತರಾಯ, ಎಸ್‌ಪಿ, ಹಾವೇರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next