Advertisement

ಪೊಲೀಸ್‌ ಗೈರು: ದಲಿತ ಕುಂದುಕೊರತೆ ಸಭೆ ರದ್ದು

09:41 PM Nov 30, 2020 | mahesh |

ಕುಂದಾಪುರ: ಪೊಲೀಸ್‌ ಹಾಗೂ ಕಂದಾಯ ಇಲಾಖೆಗಳಲ್ಲಿ ಉಂಟಾದ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಕುಂದುಕೊರತೆಗಳ ಆಲಿಕೆಗೆ ನಡೆದ ಸಭೆಗೆ ಪೊಲೀಸ್‌ ಅಧಿಕಾರಿಯೇ ಗೈರಾದ ಕಾರಣ ಸಭೆಯನ್ನೇ ರದ್ದುಗೊಳಿಸಲಾಯಿತು.

Advertisement

ಸೋಮವಾರ ಇಲ್ಲಿನ ತಾ.ಪಂ. ಸಭಾಂಗಣದಲ್ಲಿ ಸಮಾಜಕಲ್ಯಾಣ ಇಲಾಖೆ ವತಿಯಿಂದ ನಡೆದ ಕುಂದಾಪುರ, ಬೈಂದೂರು ತಾಲೂಕಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯ ಅಧ್ಯಕ್ಷತೆಯನ್ನು ಕುಂದಾಪುರ (ಪ್ರಭಾರ) ಹಾಗೂ ಬೈಂದೂರಿನ ತಹಶೀಲ್ದಾರ್‌ ಬಸಪ್ಪ ಪೂಜಾರ್‌ ವಹಿಸಿದ್ದರು. ಅಮಾನತು ಮಾಡಿ ಸಭೆಯ ಆರಂಭದಲ್ಲೇ ಡಿವೈಎಸ್‌ಪಿ ಸಭೆಗೆ ಬಾರದ ಕುರಿತು ಆಕ್ಷೇಪ ಕೇಳಿಬಂತು. ಅವರನ್ನು ಬರಹೇಳಿ, ಅವರು ಬಂದ ಬಳಿಕವೇ ಸಭೆ ಮುಂದುವರಿಯಬೇಕೆಂದು ಪಟ್ಟು ಹಿಡಿಯಲಾಯಿತು. ಸಭೆಗೆ ಎಎಸ್‌ಐ ಬಂದಾಗ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ತನಿಖಾಧಿಕಾರಿ ಎಎಸ್‌ಪಿ ಹಂತದ ಅಧಿಕಾರಿಯಾದ ಕಾರಣ ಅದಕ್ಕಿಂತ ಕೆಳಗಿನ ಅಧಿಕಾರಿಗಳು ಭಾಗವಹಿಸುವಂತಿಲ್ಲ ಎಂದು ಕಾನೂನಿನಲ್ಲಿ ಉಲ್ಲೇಖವಿದೆ. ಕೆಳಹಂತದ ಅಧಿಕಾರಿಗಳಿಗೆ ಪ್ರಕರಣದ ಕುರಿತು ನಿರ್ಧಾರ ಕೈಗೊಳ್ಳಲು, ವಿವರಿಸಲು ಆಗುವುದಿಲ್ಲ. ಇದು ಕಾನೂನಿನ ಉಲ್ಲಂಘನೆ, ಗೈರಾದುದಕ್ಕೆ ಮೆಮೋ ನೀಡಬೇಕು. ಅಮಾನತು ಮಾಡಬೇಕು ಎಂದು ದಲಿತ ಮುಖಂಡ ಉದಯ ಕುಮಾರ್‌ ತಲ್ಲೂರು ಆಗ್ರಹಿಸಿದರು.

ಕುಂದಾಪುರ ಎಎಸ್‌ಪಿ ಮಂಗಳೂರಿಗೆ ಚಾರ್ಜ್‌ ಇಲ್ಲಿಗೆ ಚಾರ್ಜ್‌ ಇರುವ ಕಾರ್ಕಳ ಡಿವೈಎಸ್‌ಪಿ ಹೈಕೋರ್ಟಿಗೆ ಹೋಗಿದ್ದು ಉಡುಪಿ ಡಿವೈಎಸ್‌ಪಿ ಪಡುಬಿದ್ರಿಗೆ ಪ್ರಕರಣದ ತನಿಖೆಗೆ ಹೋದ ಕಾರಣ ಅಲಭ್ಯರಾಗಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು. ರಾಜು ಬೆಟ್ಟಿನಮನೆ, ಗೋಪಾಲ ಕಳೆಂಜಿ, ಚಂದ್ರಮ ತಲ್ಲೂರು, ವಿಜಯ್‌ ಕೆ.ಎಸ್‌., ವಾಸುದೇವ ಮುದೂರು, ನಾಗರಾಜ್‌, ನಾಗರಾಜ್‌ ಕುಂದಾಪುರ, ಪ್ರಭಾಕರ್‌ ವಿ., ಕೇಶವ, ಭಾಸ್ಕರ ಕೆ. ಕೆರ್ಗಾಲ್‌ ಮೊದಲಾದವರು ಪೊಲೀಸ್‌ ಅಧಿಕಾರಿ ಬಾರದೇ ಸಭೆ ನಡೆಸುವಂತಿಲ್ಲ ಎಂದರು.

ಆಗಮಿಸಿದ ಅಧಿಕಾರಿಗಳಿಗೆ ದಿಗ್ಬಂಧನ ವಿಧಿಸಿ ಇಲ್ಲೇ ಧರಣಿ ಕೂರುವುದಾಗಿ ಹೇಳಿದರು. ಸಭೆಗೆ ಮಾಧ್ಯಮಗಳಿಗೆ ಆಹ್ವಾನ ನೀಡದ ಕುರಿತೂ ಆಕ್ರೋಶ ಕೇಳಿ ಬಂದು, ಕತ್ತಲಲ್ಲಿ ಇಟ್ಟು ಸಭೆ ನಡೆಸುತ್ತೀರಿ ಎನ್ನಲಾಯಿತು.

ಶಾಸಕರಿಲ್ಲ
ಉದಯ ಕುಮಾರ್‌, ಶಾಸಕರ ಮನೆಗೇ ಹೋಗಿ ಫ‌ಲಾನುಭವಿಗಳ ಪಟ್ಟಿ ತಯಾರಿಸುವುದು, ಸಹಿ ಹಾಕಿಸಿಕೊಳ್ಳುವುದು, ಸಭೆ ನಡೆಸುವ ಅಧಿಕಾರಿಗಳಿಗೆ ದಲಿತರ ಕುಂದು ಕೊರತೆ ಆಲಿಸುವ ಸಭೆಗೆ ಬರಲು ಸಾಧ್ಯವಿಲ್ಲ ಎಂದರೆ ಏನರ್ಥ. ಸಂಸದರು ಹಾಗೂ ಶಾಸಕರು ಕೂಡ ಈ ಸಭೆಗೆ ಆಗಮಿಸಬೇಕು. ಇಂತಹ ನಿರ್ಲಕ್ಷ್ಯ ಇರುವುದು ಕುಂದಾಪುರದಲ್ಲಿ ಮಾತ್ರ. ವರ್ಷ ಕಳೆದರೂ ಸಭೆಯನ್ನೂ ಕರೆಯುವುದಿಲ್ಲ, ಕರೆದ ಸಭೆಗೆ ಅಧಿಕಾರಿಗಳು ಬರುವುದೂ ಇಲ್ಲ ಎಂದರು.

Advertisement

ನೋಟಿಸ್‌
ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು, ಶೀಘ್ರ ಇನ್ನೊಂದು ಸಭೆ ಕರೆಯಬೇಕು, ಅದರಲ್ಲಿ ಎಲ್ಲ ಹಿರಿಯ ಅಧಿಕಾರಿಗಳೂ ಭಾಗಿಗಳಾಗಬೇಕು ಎಂದು ಒತ್ತಾಯಿಸಲಾಯಿತು. ಅದರಂತೆ ನಿರ್ಣಯ ಮಾಡಿ ಅಧಿಕಾರಿಗಳ ಪೂರ್ವಭಾವಿ ಸಭೆ ಕರೆದು ಸೂಕ್ತ ದಿನ ನಿಗದಿ ಮಾಡಲಾಗುವುದು ಎಂದು ಠರಾವು ಮಂಡಿಸಿ ಸಭೆಯನ್ನು ಬರ್ಖಾಸ್ತುಗೊಳಿಸಲಾಯಿತು. 2 ತಾ.ಪಂ.ಗಳ ಇಒಗಳ ಸಹಿತ ಅನೇಕ ಅಧಿಕಾರಿಗಳು ಬೇರೆ ಸಭೆಗೆ ಹೋಗಿದ್ದ ಕಾರಣ ಈ ಸಭೆಗೆ ಗೈರಾಗಿದ್ದರು.

ವಾಗ್ವಾದ
ಡಿಸಿ ಮನ್ನಾ ಭೂಮಿ ಒತ್ತುವರಿ ತೆರವು ಮಾಡಿಲ್ಲ, ಡಿವೈಎಸ್‌ಪಿಗಳಿಗೆ ಎಸ್‌ಸಿಎಸ್‌ಟಿ ಆ್ಯಕ್ಟ್ ಗೊತ್ತಿಲ್ಲ, ಇಲಾಖೆಗಳು ಅನುದಾನ ಮೀಸಲಿಟ್ಟಿಲ್ಲ, ಆಜ್ರಿ ತೆಂಕಬೈಲಿನಲ್ಲಿ ಮೂರು ದಲಿತ ಮನೆಗಳಿಗೆ ಇನ್ನೂ ವಿದ್ಯುತ್‌ ದೊರೆತಿಲ್ಲ, ಪ್ರಭಾವಿಯೊಬ್ಬ ಆ ಮನೆಗಳ ಸುತ್ತಲಿನ ಜಾಗ ಆಕ್ರಮಿಸಿ ರಸ್ತೆಯೂ ಇಲ್ಲದೆ ಮನೆಯವರು ದಿಗ್ಬಂಧನದಲ್ಲಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಗೆ ದೂರು ನೀಡಿದರೂ ದಾಖಲಾಗಿಲ್ಲ ಮೊದಲಾದ ಸಮಸ್ಯೆಗಳಿವೆ ಎಂದು ಉದಯ ಕುಮಾರ್‌ ಹೇಳಿದರು. ಆಗ ಮಧ್ಯಪ್ರವೇಶಿಸಿದ ವಾಸುದೇವ ಮುದೂರ್‌, ಹೇಗೂ ಸಭೆ ರದ್ದಾಗುವುದಾದರೆ ಈ ವಿಚಾರಗಳ ಮಂಡನೆ ಯಾಕೆ ಎಂದು ಕೇಳಿದರು. ನಿಮಗೆ ಅಗತ್ಯವಿಲ್ಲದಿದ್ದರೆ ಸಭೆಯಿಂದ ಹೊರಹೋಗಿ ಎಂದು ಉದಯ್‌ ಹೇಳಿ ಎರಡು ಸಂಘಟನೆಗಳ ಬಣಗಳಾಗಿ ಮಾರ್ಪಾಡಾಗಿ ಅವರೊಳಗೆ ವಾಗ್ವಾದ ಮುಂದುವರಿಯಿತು.

ಸಮಾಜ ಕಲ್ಯಾಣಾಧಿಕಾರಿ ರಾಘವೇಂದ್ರ ವರ್ಣೇಕರ್‌, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಬೈಂದೂರು ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಮೇಬಲ್‌ ಡಿ’ಸೋಜಾ ಉಪಸ್ಥಿತರಿದ್ದರು.

ಬದಲಿ ಜನ
ಗ್ರಾಮಸಭೆ ಇರುವಾಗ ಸಭೆ ಕರೆದರೆ ಗ್ರಾಮಸ್ಥರು ಬರುವುದು ಹೇಗೆಂದು ಭಾಸ್ಕರ್‌ ಕೇಳಿದರು. 15 ಇಲಾಖೆಯವರು ಬರಬೇಕಿದ್ದಲ್ಲಿ ಕೇವಲ 4-5 ಇಲಾಖೆಯವರು ಬಂದಿದ್ದಾರೆ. ಅನೇಕ ಇಲಾಖೆಯವರು ಬದಲಿಗೆ ಜನ ಕಳುಹಿಸಿದ್ದಾರೆ. ಪೊಲೀಸ್‌ ಅಧಿಕಾರಿಗಳು ದೂರಿಗೂ ಸ್ಪಂದಿಸುವುದಿಲ್ಲ, ಸಭೆಗೂ ಬರುವುದಿಲ್ಲ ಎಂದರೆ ಹೇಗೆ. ಕುಂದುಕೊರತೆ ಸಭೆ ನಡೆಸಲು ಕೋವಿಡ್‌ ನೆಪ ಹೇಳಲಾಗುತ್ತದೆ, ಗ್ರಾಮಸಭೆಗಳನ್ನು ನಡೆಸಲಾಗುತ್ತದೆ, ಅಧಿಕಾರಿಗಳ ಸಭೆ ನಡೆಯುತ್ತದೆ ಎಂದು ಗೋಪಾಲ್‌ ಕಳೆಂಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next