Advertisement

ಪೊಳಲಿ ದೇವಿ ಭಾರತ ಮಾತೆಯ ಪ್ರತೀಕ: ಪೇಜಾವರ ಸ್ವಾಮೀಜಿ

01:00 AM Mar 11, 2019 | Harsha Rao |

ಪೊಳಲಿ: ಶಾಂತಮೂರ್ತಿ ಶ್ರೀ ರಾಜರಾಜೇಶ್ವರಿಯು ಭಾರತ ಮಾತೆಯ ಪ್ರತೀಕ ವಾಗಿದ್ದು, ಪೊಳಲಿಯ ಗರ್ಭಗೃಹದಲ್ಲಿರುವ ಶ್ರೀ ಸುಬ್ರಹ್ಮಣ್ಯನು ಸಮನ್ವಯ, ಗಣಪತಿಯು ರಾಷ್ಟ್ರದ ಅಧಿಪತಿ, ಭದ್ರಕಾಳಿಯು ವೀರ ಸೈನಿಕರ ಪ್ರತೀಕ. ಒಟ್ಟಾಗಿ ಶ್ರೀಕ್ಷೇತ್ರವು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ ಎಂದು ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

Advertisement

ಅವರು ರವಿವಾರ ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವದ 7ನೇ ದಿನದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದುರ್ಗೆ ಎಂಬ ಪದವು ಕೋಟೆಗೆ ಸಮನಾಗಿದೆ. ದೇವಿಯು ದೇಶಕ್ಕೆ ಶತ್ರುಗಳ ಆಕ್ರಮಣ ತಡೆಯುವ ಕಾರ್ಯವನ್ನು ಮಾಡುತ್ತಾಳೆ. ಪೊಳಲಿ ಬ್ರಹ್ಮಕಲಶೋತ್ಸವದ ಮೂಲಕ ರಾಷ್ಟ್ರಕ್ಕೆ ದುರ್ಗೆಯ ಅನುಗ್ರಹ ಲಭಿಸಿದೆ ಎಂದವರು ನುಡಿದರು.

ನಾವು ಸಂಘಟಿತರಾಗಿದ್ದಾಗ ತಾಯಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಕ್ಷೇತ್ರದ ನೂತನ ದೇಗುಲ ನಿರ್ಮಾಣ ಕಾರ್ಯವು ಅದ್ಭುತವಾಗಿ ಮೂಡಿಬಂದಿದ್ದು, ಪೊಳಲಿ ಮತ್ತಷ್ಟು ಹೊಳೆಯಲಿ ಎಂದು ಹಾರೈಸಿದರು.
ಕಟೀಲು ಕ್ಷೇತ್ರದ ಲಕ್ಷ್ಮೀನಾರಾಯಣ ಆಸ್ರಣ್ಣರು ಮಾತನಾಡಿ, ದೇವರು ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ಪೊಳಲಿ ಬ್ರಹ್ಮಕಲಶೋತ್ಸವ ತೋರಿಸಿಕೊಟ್ಟಿದೆ. ಮುಂದಿನ ವರ್ಷ ಕಟೀಲು ಕ್ಷೇತ್ರದಲ್ಲೂ ಇಂತಹ ಕಾರ್ಯ ನಡೆಯಬೇಕಿದೆ. ದೇವರ ಭಕ್ತಿಯಿಂದ ಸುಖ-ನೆಮ್ಮದಿಯನ್ನು ಪಡೆಯಲು ಸಾಧ್ಯ ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ವಿ| ಪಂಜ ಭಾಸ್ಕರ್‌ ಭಟ್‌, ಯಾವುದೇ ಧಾರ್ಮಿಕ ಕ್ಷೇತ್ರವು ಜೀರ್ಣಾವಸ್ಥೆಗೆ ತಲುಪಿದಾಗ ಭಕ್ತರು ಸಾನ್ನಿಧ್ಯ ವೃದ್ಧಿಗೆ ಮುಂದಾಗಬೇಕು. ಧ್ವಜಸ್ತಂಭ ಎನ್ನುವುದು ಧಾರ್ಮಿಕ ಕ್ಷೇತ್ರಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಉತ್ಸವದ ಸಂದರ್ಭ ಧ್ವಜದ ಮೂಲಕ ದೇವಾದಿದೇವತೆಗಳು ಕ್ಷೇತ್ರಕ್ಕೆ ಇಳಿದು ಬರುತ್ತಾರೆ. ಪೊಳಲಿ ಕ್ಷೇತ್ರದಲ್ಲಿ ಶ್ರೀಚಕ್ರಾ ರಾಧನೆ, ದಂಡಮಾಲೆಗೆ ವಿಶೇಷ ಮಹತ್ವವಿದೆ. ಪದಾರ್ಥಿಗಳ ಮೂಲವಾಗಿರುವ ಪೊಳಲಿಯ ಮೂಲಕ ನಶಿಸಿ ಹೋಗುತ್ತಿರುವ ವಾದ್ಯ ಪರಂಪರೆ ಮತ್ತೆ ವೈಭವಕ್ಕೆ ಮರಳಬೇಕಿದೆ ಎಂದರು. 

ನೂತನ ದೇಗುಲ ನಿರ್ಮಾಣದಲ್ಲಿ ಶ್ರಮಿಸಿದ ಕೃಷ್ಣಾನಂದ ಹೊಳ್ಳ, ಶ್ರೀಪತಿ ಆಚಾರ್ಯ, ಭಾಸ್ಕರ ಭಟ್‌ ಹಾಗೂ ಕುಬೇರ ಅವರನ್ನು ಸಮ್ಮಾನಿಸ ಲಾಯಿತು. ಶಾಸಕ ಯು. ರಾಜೇಶ್‌ ನಾಯ್ಕ ಸ್ವಾಮೀಜಿಯವರಿಗೆ ಗೌರವ ಸಲ್ಲಿಸಿದರು.

Advertisement

ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ್‌ ಶೆಟ್ಟಿ, ಶಾಸಕರಾದ ಸುನಿಲ್‌ಕುಮಾರ್‌, ಹರೀಶ್‌ ಪೂಂಜಾ, ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕ್ಯಾ| ಗಣೇಶ್‌ ಕಾರ್ಣಿಕ್‌, ರೋಹಿತ್‌ ಶೆಟ್ಟಿ ನಗ್ರಿಗುತ್ತು, ಪ್ರಸನ್ನ ಶೆಟ್ಟಿ ಉಳಿಪಾಡಿಗುತ್ತು, ಜಯರಾಮ್‌ ಶೆಟ್ಟಿ ಮುಂಬಯಿ, ಡಾ| ಮಂಜಯ್ಯ ಶೆಟ್ಟಿ ಉಪಸ್ಥಿತರಿದ್ದರು. ರಾಮ್‌ಪ್ರಸಾದ್‌ ಸ್ವಾಗತಿಸಿದರು. 

ಪ್ರತಿಷ್ಠಾ ಕಾರ್ಯ
ರವಿವಾರ ಬೆಳಗ್ಗೆ ಶ್ರೀ ದುರ್ಗಾ ಪರಮೇಶ್ವರೀ, ಶ್ರೀ ರಾಜ ರಾಜೇಶ್ವರೀ, ಸುಬ್ರಹ್ಮಣ್ಯ, ಗಣಪತಿ, ಭದ್ರಕಾಳಿ ದೇವರ ಪ್ರತಿಷ್ಠೆ ನಡೆಯಿತು. 9ರ ಬಳಿಕ ಮೂರ್ತಿಗಳಿಗೆ ಜೀವಕಲಶಾಭಿಷೇಕ, ನ್ಯಾಸಾದಿಗಳು, ಪ್ರತಿಷ್ಠಾ ಪೂಜೆ, ಪ್ರತಿಷ್ಠಾ ಬಲಿ, ನೂತನ ಧ್ವಜಸ್ತಂಭ ಪ್ರತಿಷ್ಠೆ ಜರಗಿತು. ಮುಂಜಾನೆ 4ರಿಂದ ಧಾರ್ಮಿಕ ವಿಧಿವಿಧಾನ ನೆರವೇರಿತು. 

Advertisement

Udayavani is now on Telegram. Click here to join our channel and stay updated with the latest news.

Next