ಯಾದಗಿರಿ: ಚಾಮರಾಜನಗರದ ಸುಳ್ವಾಡಿ ಮಾರಮ್ಮ ದೇಗುಲದಲ್ಲಿ ಪ್ರಸಾದಕ್ಕೆ ದುಷ್ಕರ್ಮಿಗಳು ವಿಷ ಬೆರೆಸಿ 17 ಮಂದಿ ದಾರುಣವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಯಾದಗಿರಿಯಲ್ಲಿ ದುಷ್ಕರ್ಮಿಗಳು ಗ್ರಾಮಕ್ಕೆ ನೀರು ಸರಬರಾಜು ಮಾಡುವ ಬೃಹತ್ ಟ್ಯಾಂಕ್‌ಗೆà ವಿಷ ಬೆರಸಿ ಅಟ್ಟಹಾಸ ಮೆರೆದಿದ್ದಾರೆ . ನೀರು ಕುಡಿದ ವೃದ್ಧೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, ಮೂವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬುಧವಾರ ಈ ಘಟನೆ ನಡೆದಿದ್ದು, ಶಾಖಾಪುರ, ತೆಗ್ಗಳ್ಳಿ ಗ್ರಾಮಕ್ಕೆ ನೀರು ಸರಬರಾಜು ಮಾಡುವ ನೀರಿನ ಟ್ಯಾಂಕ್‌ಗೆ ಅರ್ಧ ಲೀಟರ್ ಎಂಡೋಸಲ್ಫಾನ್ ಬೆರೆಸಲಾಗಿದೆ.
ನೀರು ಸರಬರಾಜು ಮಾಡುವ ಮೌನೇಶ ಮತ್ತು ತಾಯಿ ನಾಗಮ್ಮ ಎನ್ನುವವರು ನೀರನ್ನು ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ನೀರಿನ ವಾಸನೆ ಕಂಡು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ವಿಷ ಬೆರೆತಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಅಧಿಕಾರಿಗಳು ನೀರು ಸರಬರಾಜು ನಿಲ್ಲಿಸಿ , ಗ್ರಾಮಸ್ಥರಿಗೆ ನೀರು ಕುಡಿಯದಂತೆ ಹೇಳಿ ಡಂಗುರ ಸಾರಿದ್ದಾರೆ. ಇದರಿಂದಾಗಿ ಭಾರಿ ದುರಂತ ತಪ್ಪಿ ಹೋಗಿದೆ.
ನೀರು ಸೇವಿಸಿದ್ದ ತೆಗ್ಗಹಳ್ಳಿಯ ಹೊನ್ನಮ್ಮ ಎನ್ನುವವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪರಿಸ್ಥಿತಿ ಅವಲೋಕಿಸಿ ಮಾಹಿತಿ ನೀಡಿ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೆಂಬಾವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ವಿಷ ಬೆರೆಸಿದ ದುಷ್ಕರ್ಮಿಗಳಿಗಾಗಿ ಶೋಧ ಆರಂಭಿಸಿದ್ದಾರೆ.