Advertisement

ಸರಕಾರಿ ಜಾಗ ಅತಿಕ್ರಮಣಕ್ಕೆ ಅಂಕುಶ ಹಾಕಿ

12:05 PM Jul 16, 2017 | |

ಹುಬ್ಬಳ್ಳಿ: ಸರಕಾರಿ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು ಆಗಬೇಕು. ಸರಕಾರಿ ಜಾಗ ಅತಿಕ್ರಮಣವಾಗದಂತೆ ಅಂಕುಶ ಹಾಕುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು. 

Advertisement

ಇಲ್ಲಿನ ಗೋಕುಲ ರಸ್ತೆಯ ಮಯೂರಿ ಗಾರ್ಡನ್‌ದಲ್ಲಿ ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ವತಿಯಿಂದ 2016-17ನೇ ಸಾಲಿನಲ್ಲಿ ದತ್ತು ಪಡೆದು ಅಭಿವೃದ್ಧಿ ಪಡಿಸಲಾದ ಹ್ಯಾಪಿ ಸ್ಕೂಲ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ (ಕೆಎಸ್‌ಆರ್‌ಟಿಸಿ)ಯ ಹಸ್ತಾಂತರ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಶಿರಡಿ ನಗರದಲ್ಲಿ ಸರಕಾರದ 4 ಎಕರೆ ಜಮೀನನ್ನು ಅತಿಕ್ರಮಿಸಿದ್ದರೂ ಜಿಲ್ಲಾಧಿಕಾರಿ, ತಹಶೀಲ್ದಾರ ಸರಕಾರಿ ಜಾಗ ಉಳಿಸಿಕೊಳ್ಳಲು ಆಗದಿರುವುದು ನಾಚಿಗೇಡಿನ ಸಂಗತಿ ಎಂದರು. ಬಹಳಷ್ಟು ಸರಕಾರಿ ಶಾಲೆಗಳು ದುರವಸ್ಥೆಯಲ್ಲಿವೆ. ಮೂಲ ಸೌಕರ್ಯ ಹೊಂದಿಲ್ಲ. ನಗರದ ನಾಗಶೆಟ್ಟಿಕೊಪ್ಪದಲ್ಲಿನ ಸರಕಾರಿ ಶಾಲೆಯನ್ನು ಶಾಸಕರ ಅನುದಾನದಡಿ ಅಭಿವೃದ್ಧಿ ಪಡಿಸಲಾಗಿದೆ.

ವಿಶ್ವೇಶ್ವರನಗರದ ತೆಗ್ಗಿನಮನಿ ಸರಕಾರಿ ಶಾಲೆಯನ್ನು ಸುಧಾರಿಸಲಾಗುವುದು. ತೀವ್ರ ದುರವಸ್ಥೆ ಸ್ಥಿತಿಯಲ್ಲಿರುವ ಗಿರಣಿಚಾಳದ ಸರಕಾರಿ ಶಾಲೆಗೆ ಇನ್ನೆರಡು ದಿನಗಳಲ್ಲಿ ಭೇಟಿ ಕೊಟ್ಟು, ಅದರ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಮಯೂರಿ ಗಾರ್ಡನ್‌ ಶಾಲೆಗೆ ಶಾಸಕರ ಅನುದಾನದಡಿ ಸ್ಮಾರ್ಟ್‌ಕ್ಲಾಸ್‌ ಸೌಲಭ್ಯ ಕಲ್ಪಿಸಲಾಗುವುದು.

ದುರವಸ್ಥೆಯಲ್ಲಿರುವ ಸರಕಾರಿ ಶಾಲೆಗಳನ್ನು ಸಂಸ್ಥೆಗಳು ಹಾಗೂ ದಾನಿಗಳು ಮುಂದೆ ಬಂದರೂ ಅಭಿವೃದ್ಧಿ ಪಡಿಸಿದರೆ ಅವು ಸಹ ಸಾಕಷ್ಟು ಸುಧಾರಣೆ ಆಗುತ್ತವೆ. ಈ ಶಾಲೆಗಳಲ್ಲೂ ಉತ್ತಮ ಶಿಕ್ಷಣ ವ್ಯವಸ್ಥೆ ಹಾಗೂ ಮೂಲ ಸೌಕರ್ಯ ಕಲ್ಪಿಸಿದರೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿಗೆ ಹಿಂದೇಟು ಹಾಕುತ್ತಾರೆ.

Advertisement

ಆದ್ದರಿಂದ ಪ್ರತಿಯೊಬ್ಬರೂ ಸರಕಾರಿ ಶಾಲೆ ಸುಧಾರಣೆಗೆ ಒತ್ತು ಕೊಡಬೇಕು ಎಂದರು. ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಮಾತನಾಡಿ, ಸರಕಾರಿ ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕರಿದ್ದಾರೆ. ಆದರೆ ಬಹಳಷ್ಟು ಸರಕಾರಿ ಶಾಲೆಗಳು ತುಂಬಾ ಹದಗೆಟ್ಟ ಸ್ಥಿತಿಯಲ್ಲಿವೆ.

ಶಾಲೆಗಳಲ್ಲಿ ಮೂಲಸೌಕರ್ಯ ಸೇರಿದಂತೆ ಇನ್ನಿತರೆ ಸವಲತ್ತುಗಳು ಸುಧಾರಿಸಿದರೆ ಮಕ್ಕಳ ಪ್ರವೇಶಾತಿ ಹೆಚ್ಚುತ್ತದೆ. ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಒದಗಿಸಲಾಗುವುದು. ರೋಟರಿ ಸಂಸ್ಥೆ ನಗರದಲ್ಲಿ ಇದುವರೆಗೆ 12 ಶಾಲೆಗಳನ್ನು ಅಭಿವೃದ್ಧಿ ಪಡಿಸಿದೆ ಎಂದರು.

ಶ್ರೀ ಮಾತಾ ಆಶ್ರಮದ ಮಾತಾ ತೇಜೋಮಯಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪ್ರಹ್ಲಾದ ಜೋಶಿ, ಪಾಲಿಕೆ ಮಾಜಿ ಸದಸ್ಯ ರಾಘವೇಂದ್ರ ರಾಮದುರ್ಗ, ಅನೀಸ ಖೋಜೆ, ಓಂಕಾರ ತೇಂಬೆ, ಎಸ್‌.ಟಿ. ಅಕ್ಕಿ ಮೊದಲಾದವರಿದ್ದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗುರುನಾಥ ನಾಯಕವಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಪಿ.ಎನ್‌. ಕರನಂದಿ ಸ್ವಾಗತಿಸಿದರು. ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಮಿಡ್‌ಟೌನ್‌ ಅಧ್ಯಕ್ಷ ಲಿಂಗರಾಜ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಎಸ್‌.ಬಿ.ಲಕ್ಕಮ್ಮನಹಳ್ಳಿ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next