ಅಕ್ಕಪಕ್ಕದ ರಾಜ್ಯಗಳು ತಿರುಗಿ ನೋಡುತ್ತಿದ್ದ ಕನ್ನಡ ಚಿತ್ರರಂಗದ ಕೆಲ ಚಿತ್ರಗಳು ಈಗಾಗಲೇ ಪ್ಯಾನ್ ಇಂಡಿಯಾ ಬಿಡುಗಡೆಗೆ ಸಜ್ಜಾಗಿರುವುದು ಗೊತ್ತೇ ಇದೆ. “ಕೆಜಿಎಫ್’ ನಂತರ “ಪೈಲ್ವಾನ್’ ಈಗ ‘ ಆ ಸಾಲಿಗೆ “ಪೊಗರು’ ಚಿತ್ರ ಕೂಡ ಪ್ಯಾನ್ ಇಂಡಿಯಾ ಬಿಡುಗಡೆಗೆ ತಯಾರಾಗುತ್ತಿದೆ. ಹೌದು, “ಪೊಗರು’ ಬಹುನಿರೀಕ್ಷೆಯ ಚಿತ್ರಗಳಲ್ಲೊಂದು. ಧ್ರುವಸರ್ಜಾ ಅಭಿನಯದ ಈ ಚಿತ್ರ ಈಗ ಬಹುಭಾಷೆಯಲ್ಲಿ ಬಿಡುಗಡೆಯಾಗಲು ಮುಂದಾಗಿದೆ.
ಅದಕ್ಕೆ ಕಾರಣ, ಧ್ರುವ ಸರ್ಜಾ ಜೊತೆ ಕ್ಲೈಮ್ಯಾಕ್ಸ್‌ನಲ್ಲಿ ಸೆಣೆಸಾಡಿರುವ ಅಂತಾರಾಷ್ಟ್ರೀಯ ಮಟ್ಟದ ಬಾಡಿಬಿಲ್ಡರ್ಸ್. ಅದೊಂದೇ ಅಲ್ಲ, ಚಿತ್ರ ಪಕ್ಕಾ ಮಾಸ್ ಸಿನಿಮಾ ಎಂಬುದು ವಿಶೇಷ. ಈಗಾಗಲೇ ಚಿತ್ರದ ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದಿದೆ. “ಪೊಗರು’ ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ವಿಭಿನ್ನವಾಗಿ ಸೆರೆಹಿಡಿದಿರುವ ಚಿತ್ರತಂಡ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ನಾಯಕ ಧ್ರುವ ಸರ್ಜಾ ಅವರೊಂದಿಗೆ ಕಾದಾಡಲು ಅಂತರಾಷ್ಟ್ರೀಯ ಮಟ್ಟದ ಜನಪ್ರಿಯ ಬಾಡಿ ಬಿಲ್ಡರ್‌ಗಳನ್ನು ಕರೆತಂದು ಮತ್ತಷ್ಟು ಕುತೂಹಲ ಮೂಡಿಸಿದೆ.
ಹಾಗಾಗಿ ಇದು ಇಂಟರ್‌ನ್ಯಾಷನಲ್ ಬಾಡಿಬಿಲ್ಡರ್ಸ್ ಅಭಿನಯಿಸಿರುವ ಚಿತ್ರ ಎಂಬ ಖ್ಯಾತಿಗೆ ಒಳಪಟ್ಟಿದೆ. ಡಬ್ಲ್ಯು.ಡಬ್ಲ್ಯು.ಇ ಕ್ರೀಡೆಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿರುವ ಮೋರ್ಗನ್ ಆಸ್ಟೆ, ಕೈಗ್ರೀನ್ , ಜಾನ್ ಲುಕಾಸ್, ಜೋಸ್ಥೆಟಿಕ್ಸ್ ಮೊದಲಾದ ಘಟಾನುಘಟಿಗಳು “ಪೊಗರು’ ಚಿತ್ರದ ಭರ್ಜರಿ ಕ್ಲೈಮ್ಯಾಕ್ಸ್‌ನಲ್ಲಿ ಭಾಗಿಯಾಗಿದ್ದಾರೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ “ಪೊಗರು’ ಈಗ ಮುಗಿಯುವ ಹಂತ ಬಂದಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಧ್ರುವ ಸರ್ಜಾ ಇಲ್ಲಿ ಮೂರು ವಿಶೇಷ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಅನೇಕ ವಿಶೇಷತೆಗಳನ್ನು ಹೊಂದಿರುವ ಚಿತ್ರವನ್ನು ಕನ್ನಡ, ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಯಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ. ನಿರ್ದೇಶಕ ನಂದಕಿಶೋರ್ ಕೂಡ, ಸಾಕಷ್ಟು ಸಮಯ ತೆಗೆದುಕೊಂಡ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಪ್ಯಾನ್ ಇಂಡಿಯಾ ಬಿಡುಗಡೆಗೆ ರೆಡಿಯಾಗಿರುವ “ಪೈಲ್ವಾನ್’ ಚಿತ್ರದ ನಂತರ ಈಗ “ಪೊಗರು’ ಕೂಡ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ ಎಂಬುದು ಚಿತ್ರತಂಡದಿಂದ ಹೊರಬಿದ್ದಿರುವ ಸುದ್ದಿ.