Advertisement

ಜೀವನ ಪ್ರೀತಿ ಇರದೆ ಕಾವ್ಯ ರಚನೆಯಾಗುವುದು ಅಪರೂಪ

11:29 AM Apr 05, 2022 | Team Udayavani |

ಧಾರವಾಡ: ಕವಿಯ ಒಟ್ಟು ಜೀವನ ದರ್ಶನವೇ ಕಾವ್ಯದಲ್ಲಿ ಹೊರಹೊಮ್ಮಿರುತ್ತದೆ. ಜೀವನ ಪ್ರೀತಿ ಇರಲಾರದೆ ಕಾವ್ಯ ಹುಟ್ಟುವುದು ಅಪರೂಪ. ಪ್ರತಿಯೊಬ್ಬ ಕವಿಯ ಕಾವ್ಯದಲ್ಲೂ ಜೀವನ ಪ್ರೀತಿ ಇದ್ದೇ ಇರುತ್ತದೆ ಎಂದು ಸಾಹಿತಿ ಡಾ| ಶಾಂತಾ ಇಮ್ರಾಪೂರ ಹೇಳಿದರು.

Advertisement

ಕವಿಸಂನಲ್ಲಿ ಕವಿ ಡಾ| ಜಿನದತ್ತ ದೇಸಾಯಿ ದತ್ತಿ ಅಂಗವಾಗಿ “ಡಾ| ಜಿನದತ್ತರ ಕಾವ್ಯ: ಮಹಿಳಾ ಸ್ಪಂದನ’ ಎಂಬ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಕೃತಿಯ ಸಮಸ್ತ ಚರಾಚರ ವಸ್ತುಗಳೆಲ್ಲ ಮುಖ್ಯವಾದವುಗಳೇ ಎಂಬ ಸತ್ಯವನ್ನು ಜಿನದತ್ತರು ಕವನಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕಾವ್ಯದ ಹುಟ್ಟಿಗೆ ಕಾರಣವಾದ ಪ್ರಕೃತಿಯ ಮೇಲಿನ ಪ್ರೀತಿ ಅನಂತಮುಖವಾಗಿ ಅವರ ಕಾವ್ಯಗಳಲ್ಲಿ ಹರಡಿಕೊಂಡಿದೆ. ನಿರಾಡಂಬರ, ನಿಷ್ಕಳಂಕವಾದ ಪ್ರೀತಿಯ ಕಾವ್ಯಗಳನ್ನು ಕೊಟ್ಟು ಸಹೃದಯರ ಹಾಗೂ ಮನುಷ್ಯರ ಬುದ್ಧಿಭಾವವನ್ನು ಹೆಚ್ಚಿಸುವ ಕವನಗಳನ್ನು ರಚಿಸಿ ಕೊಟ್ಟಿದ್ದಾರೆ. ಕಾವ್ಯಗಳುದ್ದಕ್ಕೂ ದಾರ್ಶನಿಕ, ಶರಣರ ನೆನಪುಗಳನ್ನು ಮಾಡಿಕೊಳ್ಳುತ್ತಾರೆ. ಅಮೂರ್ತವಾದ ಪ್ರಪಂಚದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಆ ಬಗ್ಗೆ ಅವರ ಕಾವ್ಯಗಳಲ್ಲಿ ನಿರಾಕರಣೆ ಇರುವುದನ್ನು ಕಾಣುತ್ತೇವೆ ಎಂದರು.

ಮನುಷ್ಯನ ದೌರ್ಜನ್ಯಕ್ಕೆ ಈಡಾಗಿರುವ ಭೂಮಿಯ ಬಗ್ಗೆ ಇರುವ ತಮ್ಮ ಅನನ್ಯ ಭಾವನೆಯನ್ನು ದೇಸಾಯಿಯವರು ಅನೇಕ ಕವನಗಳಲ್ಲಿ ಹೇಳುತ್ತ ಹೋಗಿದ್ದಾರೆ. ಮಲೆನಾಡಿನಂತಹ ಪ್ರಕೃತಿಯಲ್ಲಿ ಜಿನದತ್ತ ದೇಸಾಯಿಯವರು ಬದುಕಿದ್ದರೆ ಕುವೆಂಪು ಹಾಗೆ ಹೆಸರಾಂತ ಪ್ರಕೃತಿ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಿದ್ದರು. ಸಮಾಜದ ವಿಕೃತ ಮನಸ್ಥಿತಿಯನ್ನು ಅವರ ಕಾವ್ಯಗಳಲ್ಲಿ ಕಾಣುತ್ತೇವೆ. ರಚನಾತ್ಮಕವಾಗಿ ಬದುಕುವ ಕಲೆಯನ್ನು ಕಾವ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಎಂದು ಹೇಳಿದರು.

ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಡಾ| ಶಾಂತಿನಾಥ ದಿಬ್ಬದ ಅವರು “ಡಾ| ಜಿನದತ್ತರ ಕಾವ್ಯ: ಮಹಿಳಾ ಸ್ಪಂದನ’ ಗ್ರಂಥವನ್ನು ಬಿಡುಗಡೆಗೊಳಿಸಿದರು.

Advertisement

ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ರ ಗೌರವ ಪ್ರಶಸ್ತಿಗೆ ಭಾಜನರಾದ ಡಾ| ಜಿನದತ್ತ ದೇಸಾಯಿ ಅವರನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಪರವಾಗಿ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹಾಗೂ ಪದಾ ಧಿಕಾರಿಗಳು ಸನ್ಮಾನಿಸಿದರು.

ಗುರು ಹಿರೇಮಠ ಸ್ವಾಗತಿಸಿದರು. ಡಾ| ಜಿನದತ್ತ ಹಡಗಲಿ ಪ್ರಾಸ್ತಾವಿಕ ಮಾತನಾಡಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ| ಧನವಂತ ಹಾಜವಗೋಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next