Advertisement
“ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು, ಮಿಡುಕಾಡುತಿರುವೆ ನಾನು’ – ಎಂಬ ಸಾಲುಗಳು ಅದೆಷ್ಟು ಕಾಡಿದ್ದವು ಮತ್ತು ಸೆಳೆದಿದ್ದವು ಎಂದರೆ ಬಹುಶಃ ಅಮ್ಮಂದಿರ ಪ್ರೀತಿ, ಮಮತೆ ಉಂಡು ಬೆಳೆದ ನಾವೆಲ್ಲರೂ ಆ ಸಾಲುಗಳಿಗೆ ಶರಣಾಗಿರಲೇಬೇಕು. ಇಂಥ ಭಾವಗೀತೆಗಳ ಬಗ್ಗೆ ನನಗೆ ಅದೆಂಥದೋ ಹುಚ್ಚು ಪ್ರೀತಿ. ಬಹುಶಃ ಕವಿತೆಗಳು ನನ್ನಲ್ಲಿ ಹುಟ್ಟಲು ಇಂತಹ ಗೀತೆಗಳೇ ಒಂದು ರೀತಿಯಲ್ಲಿ ಕಾರಣವಿರಬಹದು. ಈ ಸಾಲುಗಳ ಹಿಂದೆ ಬಿದ್ದು, ಯಾರಿರಬಹುದು ಈ ಸಾಲುಗಳ ಒಡೆಯ ಎಂದು ತಿಳಿಯಲು ಹೊರಟಾಗ ಸಿಕ್ಕವರೇ ಬಿ. ಆರ್. ಲಕ್ಷ್ಮಣ ರಾಯರು. ಮುಂದೆ ಅವರ ಅದೆಷ್ಟೋ ಸಾಲುಗಳು ಎದೆ ಹೊಕ್ಕು ಪಟ್ಟಾಗಿ ಅಲ್ಲೇ ಪದ್ಮಾಸನ ಹಾಕಿ ಕುಳಿತುಬಿಟ್ಟವು.
Related Articles
Advertisement
ನಲ್ಲೆ ಬರಲಾಗದಂತೆ,
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ…’ ಎಷ್ಟು ಮುದ್ದಾದ ಸಾಲುಗಳಿವು?! ಒಮ್ಮೆ ಕೇಳಿದರೆ ಯಾವ ನಲ್ಲೆಯೂ ಸೋಲದೆ ಇರಲಾರಳು. ಚಂದದ ಲಯ, ಅದಕ್ಕೆ ಹೊಂದುವ ಪದಪುಂಜ, ಒಂದು ಸುಂದರ ಆಕೃತಿಯಿಲ್ಲದೆ ಯಾವ ಕವಿತೆಯೂ ಕವಿತೆಯಾಗಲಾರದು. ಅಂತಹ ಅಲಿಖೀತ ನಿಯಮಕ್ಕೆ ಒಳಪಟ್ಟಂತೆ ಹುಟ್ಟುವ ಲಕ್ಷ್ಮಣರಾವ್ ಅವರ ಭಾವಗೀತೆಗಳು ಎಲ್ಲರ ಎದೆಯಾಳದಲ್ಲಿ ಗಟ್ಟಿಯಾಗಿ ನೆಲೆನಿಂತಿವೆ. ಅವರ ಸಾಲುಗಳಿಗೆ ಎಂಥದೋ ಚುಂಬಕ ಶಕ್ತಿ ಇದೆ.
“ಕೊಲ್ಲುವುದಾದರೆ ಕೊಂದು ಬಿಡು’, “ನಿಂಬೆಗಿಡ’, “ನಲ್ಲೆ ನಿನ್ನ ಮರೆಯಲು’, “ಅಮ್ಮ ನಿನ್ನ ನೆನಪು’, “ಹೇಳಿ ಹೋಗು ಕಾರಣ’, “ಟುವಟಾರ…’ ಓಹ್! ಅದೆಷ್ಟು ಕವಿತೆಗಳು! ಹೆಸರಿಸಲು ಹೊರಟರೆ ಸಾಲುಗಟ್ಟಿ ನಿಲ್ಲುತ್ತವೆ. “ಭರವಸೆ’ ಎನ್ನುವ ಭಾವಗೀತೆಯ ಈ ಸಾಲುಗಳನ್ನೊಮ್ಮೆ ಮೆಲುಕು ಹಾಕಲೇಬೇಕು.
“ಮಾನವತೆಯ ಕಟ್ಟಡಕ್ಕೆ ಪ್ರೀತಿಯೊಂದೇ ಇಟ್ಟಿಗೆ, ಇಟ್ಟಿಗೆಗಳ ಬೆಸೆಯಬೇಕು ಕರುಣೆ ಸ್ನೇಹದೊಟ್ಟಿಗೆ, ಸುತ್ತ ನೋವು ನೀಗಿದಾಗ ನಿನ್ನ ನಗೆಗೂ ಅರ್ಥ ಇಲ್ಲದಿರಲು ನಿನ್ನ ಈ ಹತಾಶೆ ಕೂಡ ಸ್ವಾರ್ಥ ‘
ನಿರಾಸೆಯ, ಹತಾಶೆಯ ಮನಸ್ಸು ಒಮ್ಮೆ ಈ ಕವಿತೆಯನ್ನು ಓದಿದರೂ ಸಾಕು; ಹೊಸದೊಂದು ಚೈತನ್ಯ ತುಂಬಿಕೊಂಡು ಬದುಕಿನೆಡೆಗೆ ಧಾವಿಸದಿದ್ದರೆ ಕೇಳಿ. ಕವಿತೆ ಬರೆಯುವುದು ಒಂದು ಬಗೆಯ ಪ್ರತಿಭೆಯಾದರೆ ಭಾವಗೀತೆಗಳನ್ನು ಬರೆಯುವುದು ಮತ್ತೂಂದು ಮಟ್ಟದ ಪ್ರತಿಭೆ. ಇಲ್ಲಿ ಕವಿಯಾದವರಿಗೆ ಸಂಗೀತದ ಆಸಕ್ತಿ, ಅಭಿರುಚಿ ಕೊಂಚ ಮಟ್ಟಿಗಾದರೂ ಇರಬೇಕಾಗಿರುತ್ತದೆ. ಭಾವಗೀತೆ ಎಂದಾಗ ಸಂಗೀತದ ತಾಳ, ಲಯವನ್ನು ಕವಿತೆಯಲ್ಲೂ ತರಬೇಕಿರುತ್ತದೆ. ಒಂದು ರೀತಿಯಲ್ಲಿ ಸಂಗೀತ ಮತ್ತು ಸಾಹಿತ್ಯವನ್ನು ಒಟ್ಟಾಗಿ ಬೆಸೆಯುವ ನಂಟದು. ಅದನ್ನು ಸಮರ್ಥವಾಗಿ ನಿಭಾಯಿಸಿದ ಶ್ರೇಯಸ್ಸು ಬಿ.ಆರ್.ಎಲ್ ಅವರದು. ತಮ್ಮ ಭಾವಗೀತೆಗಳನ್ನು ತಾವೇ ಹಾಡಿ ಅವರು ಪ್ರಸ್ತುತಪಡಿಸುವ ರೀತಿ ಅಮೋಘ. ಅವರ ಕವಿತೆ ಮತ್ತು ಚುಟುಕುಗಳಲ್ಲಿ ಕಂಡುಬರುವ ಹಾಸ್ಯಪ್ರಜ್ಞೆ ಓದುಗರನ್ನು ಮುದಗೊಳಿಸುತ್ತದೆ. ಬೇಸರದ ಮನಸಿಗೆ ಪ್ರಫುಲ್ಲತೆ ತುಂಬಬಲ್ಲ ಅಸೀಮ ಶಕ್ತಿ ಅವಕ್ಕೆ.
ಗಾಂಧಿ ಪ್ರತಿಮೆಯ ತಲೆ ಮೇಲೆ
ಕೂತಿದೆ ಒಂದು ಕಾಗೆ
ನಾವೇ ಕೂರಿಸಿದ ಹಾಗೆ
*
ಸಾಫ್ಟ್ವೇರ್ ಇಂಜಿನಿಯರ್‌ಗೆ
ಆಹಾ ಸಂಬಳವೋ ಕೈತುಂಬ
ಆದರೆ ಪುರುಸೊತ್ತಿಲ್ಲ ಪಾಪ
ತುರಿಸಲು ತನ್ನ ನಿತಂಬ
-ಎಂದು ಚುಟುಕದಲ್ಲೇ ಚಟಾಕಿ ಹಾರಿಸುತ್ತವೆ. ಅವರ “ಗೋಪಿ ಮತ್ತು ಗಾಂಡಲೀನ’, “ಹೇಗಿದ್ದೀಯೆ ಟ್ವಿಂಕಲ್’, “ಸುಬ್ಟಾಭಟ್ಟರ ಮಗಳೇ’ ಮುಂತಾದ ಕವಿತೆಗಳು ಹಾಡುವುದಕ್ಕಷ್ಟೇ ಅಲ್ಲ, ಓದಿಕೊಳ್ಳಲೂ ಬಹು ಸುಂದರ. ಅವರ ಮತ್ತೂಂದು ವಿಶೇಷ ಕವಿತೆ “ಮಣ್ಣುಹುಳ’. ಇಲ್ಲಿನ ಮಣ್ಣುಹುಳವು ಮುಗ್ಧ, ಅಬೋಧ, ಆಧುನಿಕ ಪ್ರಪಂಚದ ನಿರ್ಥಕತೆಯನ್ನು ಸಮರ್ಥವಾಗಿ ತೋರಿಸಿಕೊಡುವ ಅಪ್ರತಿಮ ಪ್ರತಿಮೆ. ಅದು ಹೇಳುತ್ತದೆ,
“ನನಗೆ ಬೇಡ
ಈ ಭೂಮಿಯ ಸೆಳೆತ ಮೀರಿ
ದೂರ ಬಾಹ್ಯಾಕಾಶಕ್ಕೆ ಹಾರಿ
ದೆಸೆಗೆಟ್ಟು ತೊಳಲುವ
ಕ್ಷಿಪಣಿಯ ವ್ಯರ್ಥ ಛಲ
ಶೂನ್ಯ ಫಲ
ನಾ ಹೋಗಬೇಕು ಭೂಮಿಯನ್ನು
ಹೊಕ್ಕು ಗಪಗಪ ಮುಕ್ಕಬೇಕು ಮಣ್ಣನ್ನು’- ಎಂದು. ಈ ಮಣ್ಣುಹುಳುವಿಗೆ ಭೂಮಿಯ ಸೆಳೆತವನ್ನು ಮೀರುವುದು ಬೇಕಿಲ್ಲ, ಬಾಹ್ಯಾಕಾಶಕ್ಕೆ ಹಾರುವುದು ಬೇಕಿಲ್ಲ, ಅದಕ್ಕೆ ಗೊತ್ತಿದೆ, ಪ್ರೀತಿಯ ಸೆಳೆತದಲ್ಲಿ ಮಾತ್ರವೇ ಜೀವ ಅರಳಲು ಸಾಧ್ಯವೆಂದು ಮತ್ತು ತಂತ್ರಜ್ಞಾನವೆಷ್ಟು ನಿರರ್ಥಕವೆಂದೂ. ಅದಕ್ಕೆಂದೇ ಅದು ಮಣ್ಣಿನಾಳ ಸೇರಲು ಬಯಸುತ್ತದೆ. ಮಣ್ಣನ್ನೇ ಅರಗಿಸಿಕೊಂಡು ಬೆಳೆಯಲು, ಚೂರೇ ಹೊರಬಂದು ಮಣ್ಣ ಮೇಲೇ ಆಡಲು, ದೇಹವನ್ನು ಚೂರು ಚೂರು ಮಾಡಿದರೂ, ಚೂರನ್ನೂ ಇಡಿಯಾಗಿಸಿಕೊಂಡು ಬೆಳೆಯುವ ಶಕ್ತಿ ಕೊಡುವ ಮಣ್ಣನ್ನು ನನ್ನಿಯಿಂದ ತಬ್ಬಲು. ಕೊನೆಗೆ ಮಣ್ಣಿನ ಸಾರ ಹೆಚ್ಚಿಸುತ್ತ ರೈತನಿಗೆ ನೆರವಾಗಲು. ನಿಜಕ್ಕೂ ಕವಿತೆಯ ಹುಚ್ಚಿಗೆ ತಳ್ಳುವಂತಹ ಕವಿತೆ ಇದು.
ಕವಿತೆಗಳು ಮತ್ತು ಭಾವಗೀತೆಗಳಿಂದ ಮನೆಮಾತಾಗಿದ್ದರೂ ಬಿ. ಆರ್. ಎಲ್ ಅವರದು ಬಹುಮುಖ ಪ್ರತಿಭೆ. ಕತೆ, ಕಾದಂಬರಿ, ನಾಟಕ, ಪ್ರಬಂಧ, ಅನುವಾದ, ಸಂಪಾದನೆ… ಹೀಗೆ ನಾನಾ ಪ್ರಕಾರಗಳಲ್ಲಿ ಅವರ ಕೆಲಸ ಸ್ಮರಣೀಯ. ಚಿತ್ತಾಕರ್ಷಕ ನಗೆಯ ಈ ಕವಿಗೀಗ 77 ವರ್ಷ ಎಂದರೆ ನಂಬುವುದು ಕಷ್ಟ. ಜೀವ ಚಿಲುಮೆಯಂತೆ ಚಿಮ್ಮುವ ಅವರ ಹುಟ್ಟು ಹಬ್ಬಗಳು ಬರಿದೆ ಸಂಖ್ಯೆಗಳಾಗಲಿ. ಅವರು ಸದಾ ಹೀಗೆಯೇ ನಮ್ಮೊಂದಿಗೆ ಇರುವಂತಾಗಲಿ. ಅವರ ಬರಹ ಸದಾ ನಮ್ಮ ಮನಸ್ಸು, ಹೃದಯವನ್ನು ಅರಳಿಸುತ್ತಿರಲಿ.
-ಆಶಾ ಜಗದೀಶ್