Advertisement

ಕವಿ, ಲೇಖಕಿ ಅನಿತಾ ಪಿ ಪೂಜಾರಿ ಅವರ ಎರಡು ಕೃತಿಗಳ ಬಿಡುಗಡೆ

03:29 PM Feb 21, 2017 | |

ಮುಂಬಯಿ: ಅಭಿಜಿತ್‌ ಪ್ರಕಾಶನ ಮುಂಬಯಿ ಪ್ರಕಟಿಸಿದ ಮುಂಬಯಿಯ ಕವಿ, ಲೇಖಕಿ  ಅನಿತಾ ಪಿ. ಪೂಜಾರಿ ತಾಕೊಡೆ ಅವರ 2 ಕೃತಿಗಳ ಬಿಡುಗಡೆ ಸಮಾರಂಭವು ಫೆ. 19ರಂದು ಸಂಜೆ ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ನ ಮೊದಲನೆ ಮಹಡಿಯ ಸಭಾಗೃಹದಲ್ಲಿ ಜರಗಿತು.

Advertisement

ಸಮಾರಂಭದಲ್ಲಿ “ಶ್ರೀಮತಿ ಸುಶೀಲಾ ಎಸ್‌ ಶೆಟ್ಟಿ ಕಾವ್ಯಪ್ರಶಸ್ತಿ’ ಲಭಿಸಿದ ಕನ್ನಡ ಕವನ ಸಂಕಲನ  “ಅಂತರಂಗದ ಮೃದಂಗ’ ಮತ್ತು ತುಳುವಿನಲ್ಲಿ ಅವರ ಮೊದಲ ಕವನ ಸಂಕಲನ “ಮರಿಯಲದ ಮದಿಮಾಲ್‌’ ಕೃತಿಗಳನ್ನು ಕ್ರಮವಾಗಿ ಮನೋಹರ ಎಂ. ಕೋರಿ ಮತ್ತು ಕಥೆಗಾರ, ಲೇಖಕ  ಓಂದಾಸ್‌ ಕಣ್ಣಂಗಾರ್‌ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ| ವ್ಯಾಸರಾವ್‌ ನಿಂಜೂರು ಅವರು ಮಾತನಾಡಿ, ಕವಿತೆ ಬರೆಯುವುದು ಕಷ್ಟದ ಕೆಲಸ. ಅದೊಂದು ತಪಸ್ಸು. ಪ್ರಯತ್ನಪಟ್ಟರೆ ಅದೊಂದು ಮನಸ್ಸಿಗೆ ಮುದ ನೀಡುವ ಸಿಂಚನವಾಗಬಹುದು. ಕನ್ನಡದ ಹಿರಿಯ ಕವಿಗಳ ಆಳವಾದ ಅರ್ಥವತ್ತಾದ ಕವನಗಳು, ಅದರ ಮಾಧುರ್ಯ ಇಂದಿಗೂ ಶಾಶ್ವತವಾಗಿ ಉಳಿದಿದೆ. ನಮ್ಮ ಆಕಾಂಕ್ಷೆಯ ಕವನಗಳು ನಮ್ಮ ಬಾಳಿಗೆ ಅರ್ಥಮಾಡಿಕೊಡುವ ಕವಿತೆಗಳಾಗಬಹುದು. ಹಿಂದೆ ರಾಮಚಂದ್ರ ಉಚ್ಚಿಲ್‌, ಹಾವನೂರು ಮೊದಲಾದವರು ಸಾಹಿತ್ಯಕೂಟವನ್ನು ಸ್ಥಾಪಿಸಿ ಕಾವ್ಯ ಕೃತಿಗಳ ಚರ್ಚೆ ನಡೆಸಲಾಗುತ್ತಿತ್ತು. ಕಾವ್ಯದ ಓದು ಸೀಮಿತವಾದುದು. ಅನಿತಾ ಪೂಜಾರಿ ವಯಸ್ಸಿನಲ್ಲಿ ಕಿರಿಯವಳಾಗಿದ್ದರೂ ಯಶಸ್ವಿ ಕವಿತೆಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದವರು. ಅವರಿಂದ ಇನ್ನಷ್ಟು ಕೃತಿಗಳು ಬೆಳಕು ಕಾಣುವಂತಾಗಲಿ ಎಂದರು.

ಮರಿಯಾಲದ ಮದಿಮಾಲ್‌ ಕೃತಿಯನ್ನು ಪರಿಚಯಿಸಿದ ಅಕ್ಷಯ ಸಂಪಾದಕ ಡಾ| ಈಶ್ವರ ಅಲೆವೂರು ಅವರು, ತುಳುನಾಡ ಪ್ರಕೃತಿ ನಡುವಿನ ಸುಖ-ದುಃಖಗಳ ಸಮ್ಮಿಳಿತವು ಪ್ರಾಮಾಣಿಕತೆ ಕವಿತೆಯಲ್ಲಿ ಎದ್ದು ಕಾಣುತ್ತಿದೆ. ಪ್ರಕೃತಿಯ ಒಳನೋಟಗಳ ಅನುಸಂಧಾನ, ಸೂಕ್ಷ್ಮ ದರ್ಶನ  ಈ ಕವಿತೆಗಳಲ್ಲಿ ಕಾಣಬಹುದು. ಪ್ರೇಮಕಾವ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ಅನಿತಾ ಅವರಿಂದ ಭವಿಷ್ಯದಲ್ಲಿ ಇತರ ಗ್ರಹಿಕೆಗಳ ಬರಹಗಳು ಬರಬೇಕು ಎಂದು ನುಡಿದರು.

ಅಂತರಂಗದ ಮೃದಂಗ ಕೃತಿ ಪರಿಚಯಿಸಿದ ಕನ್ನಡ ವಿಭಾಗ ಮುಂಬಯಿ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ, ಕವನಗಳು ಹೂರಣದ ಮೂಲಕ ಕಾವ್ಯ ಕೃಷಿಯನ್ನು ನಿರಂತರ ನೀಡುತ್ತಿರುವ ಅನಿತಾ ಅವರ ಕೃತಿಗಳ ಲೋಕಾರ್ಪಣೆ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ. ಆಶಾಭಾವ, ನೋವು, ನಿರಾಸೆ, ಪ್ರಕೃತಿ ಜೀವನ, ಪ್ರೇಮಕಾವ್ಯದ ವಿರಹದ ನೋವುಗಳು ಸೊಗಸಾಗಿ ಈ ಕೃತಿಯಲ್ಲಿ ಚಿತ್ರಿತವಾಗಿದೆ. ಎರಡು ಜೀವನವನ್ನು ಬೆಸೆಯುವ ಕಾವ್ಯ ಸೇತುವೆ ಈ ಕವನಗಳ ವಿಶೇಷತೆಯಾಗಿದೆ. ಭವಿಷ್ಯದಲ್ಲಿ ಅವರಿಂದ ಕಾವ್ಯಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದರು.

Advertisement

ಜಯಲಕ್ಷ್ಮೀ ದೇವಾಡಿಗ ಅವರು ಅನಿತಾ ಪೂಜಾರಿ ಅವರ ಕವಿತೆಗಳನ್ನು ಹಾಡಿದರು. ಅತಿಥಿಗಳನ್ನು ಗೌರವಿಸಲಾಯಿತು. ಅಭಿಜಿತ್‌ ಪ್ರಕಾಶನದ ವತಿಯಿಂದ ಲೇಖಕಿ, ಕವಿ ಅನಿತಾ ಪೂಜಾರಿ ತಾಕೊಡೆ ಅವರನ್ನು ಅಭಿನಂದಿಸಲಾಯಿತು. ನಗರದ ಹಲವಾರು ಹಿರಿಯ, ಕಿರಿಯ ಕವಿಗಳು, ಸಾಹಿತಿಗಳು, ರಂಗನಿರ್ದೇಶಕರು, ಕಲಾವಿದರು ಉಪಸ್ಥಿತರಿದ್ದರು. ವಿಮರ್ಶಕಿ ಡಾ| ಮಮತಾ ರಾವ್‌ ಅವರು ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಅನಿತಾ ಪೂಜಾರಿ ಅವರ ಪತಿ ಪದ್ಮನಾಭ ಪೂಜಾರಿ, ಪುತ್ರಿ ರಕ್ಷಾ ಮೊದಲಾದವರು ಉಪಸ್ಥಿತರಿದ್ದರು.

ಕರ್ನಾಟಕಕ್ಕಿಂತಲೂ ಮಹಾನಗರದಲ್ಲಿ ಹೆಚ್ಚಿನ ಕೃತಿಗಳು ಬೆಳಕು ಕಾಣುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ನಾಡು-ನುಡಿಯ ಸೇವೆ ಇಲ್ಲಿನ ಕನ್ನಡಿಗರಿಂದ ನಿರಂತರವಾಗಿ ನಡೆಯುತ್ತಿರಲಿ 
 -ಮನೋಹರ ಎಂ. ಕೋರಿ (ಅಧ್ಯಕ್ಷರು: ಕರ್ನಾಟಕ ಸಂಘ ಮುಂಬಯಿ).

ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ-ಬೆಳೆದ ಕವಿ ಅನಿತಾ ಪೂಜಾರಿ ಅವರು, ಮುಂಬಯಿ ಮಹಾನಗರಕ್ಕೆ ಆಗಮಿಸಿ ಸಾಹಿತ್ಯ ಚಿಂತನೆಯೊಂದಿಗೆ ಲೇಖಕಿಯಾಗಿ, ಕವಿಯಾಗಿ ಪ್ರಸಿದ್ಧರಾಗಿದ್ದಾರೆ. ಅವರ ಕವಿತೆಗಳಲ್ಲಿ ಪ್ರಕೃತಿಯ ಒಳನೋಟ, ಅಮ್ಮನ ಸಂವೇದನೆಯಿದೆ. ಅವರ ಬರೆಯುವ ತುಡಿತವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ 
    – ಓಂದಾಸ್‌ ಕಣ್ಣಂಗಾರ್‌ (ಗೌರವ ಕೋಶಾಧಿಕಾರಿ: ಕರ್ನಾಟಕ ಸಂಘ ಮುಂಬಯಿ).

ಇಂದಿನ ಸಾಧ್ಯತೆ ನನ್ನ ಮುಂದಿನ ಪಯಣದ ಹೆಜ್ಜೆಯಾಗಿದೆ. ಕಾವ್ಯ ಜೀವನದ ಧ್ವನಿಯಾಗಿದೆ.  ಬೇನೆ, ಬೇಸರಗಳನ್ನು ಸಂತೈಸುವ ಶಕ್ತಿ ಕಾವ್ಯಕ್ಕಿದೆ. ಇಲ್ಲಿನ ದಿನಪತ್ರಿಕೆಗಳು ನನ್ನ ಪ್ರತಿಭೆಗೆ ಸಹಕಾರಿಯಾಗಿವೆ. ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಕರ್ನಾಟಕ ಸಂಘ ಮುಂಬಯಿ, ಅಭಿಜಿತ್‌ ಪ್ರಕಾಶನದ ಡಾ| ಜಿ. ಎನ್‌. ಉಪಾಧ್ಯ ಹಾಗೂ ಮುಂಬಯಿ ಊರಿನ, ಸಾಹಿತಿಗಳು, ಕವಿಗಳ, ಸಹಾಯ, ಪ್ರೋತ್ಸಾಹವನ್ನು ಮರೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಪ್ರೇಮಕಾವ್ಯದ ಜತೆಗೆ ಬದಲಾವಣೆಯ ಕೃತಿಗಳನ್ನು ತರಲು ಪ್ರಯತ್ನಿಸುತ್ತೇನೆ 

 – ಅನಿತಾ ಪಿ. ಪೂಜಾರಿ ತಾಕೊಡೆ (ಕವಿ, ಲೇಖಕಿ).

Advertisement

Udayavani is now on Telegram. Click here to join our channel and stay updated with the latest news.

Next