ಚಾಮರಾಜನಗರ: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿ, ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಮದುವೆಯಾದ ವ್ಯಕ್ತಿ ಹಾಗೂ ಆತನ ತಾಯಿಗೆ ಪೋಕ್ಸೋ ಕಾಯ್ದೆಯಡಿ ತಲಾ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಮಕ್ಕಳ ಸ್ನೇಹಿ ಹಾಗೂ ಹೆಚ್ಚುವರಿ ಜಿಲ್ಲಾ, ಸೆಷೆನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ತಮಿಳುನಾಡಿನ ತಿರಚಂಗೂರು ತಾಲೂಕಿನ ಶರಣ್‌ರಾಜ್ (25) ಹಾಗೂ ಆತನ ತಾಯಿ ಸೆಲ್ವಿ (45) ಶಿಕ್ಷೆಗೆ ಗುರಿಯಾದವರು.
2018ರ ಸೆಪ್ಟೆಂಬರ್ 9ರಂದು 14 ವರ್ಷದ ಬಾಲಕಿಯನ್ನು ಶರಣ್ ರಾಜ್ ಮತ್ತು ಆತನ ಸೋದರ ಶಶಿಕುಮಾರ್ (ಈತ ತಲೆ ಮರೆಸಿಕೊಂಡಿದ್ದಾನೆ) ಬೈಕಿನಲ್ಲಿ ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ನಂತರ ಇವರ ತಾಯಿ ಸೆಲ್ವಿ ಸೇರಿಕೊಂಡು ಒತ್ತಾಯಪೂರ್ವಕವಾಗಿ ಬಾಲಕಿಯನ್ನು ಶರಣ್‌ರಾಜ್ ಜೊತೆ ಮದುವೆ ಮಾಡಿದ್ದರು. ಶರಣ್‌ರಾಜ್ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ಇದನ್ನೂ ಓದಿ: ಬಂಟ್ವಾಳ: ನಕಲಿ ದಾಖಲೆ ಸೃಷ್ಟಿಸಿ ಅಪ್ರಾಪ್ತ ಬಾಲಕನ ವಿವಾಹಕ್ಕೆ ಸಿದ್ಧತೆ: ಅಧಿಕಾರಿಗಳಿಂದ ತಡೆ
Related Articles
ಈ ಮೂವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆಯಡಿ ಮಲೆ ಮಹದೇಶ್ವರ ಬೆಟ್ಟ ಠಾಣೆ ಇನ್‌ಸ್ಪೆಕ್ಟರ್ ಬಿ. ಮಹೇಶ್ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎ.ಸಿ. ನಿಶಾರಾಣಿ ಅವರು ಮಗ ಶರಣ್‌ರಾಜ್ ಹಾಗೂ ತಾಯಿ ಸೆಲ್ವಿ ಅವರಿಗೆ ತಲಾ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ನೊಂದ ಬಾಲಕಿಗೆ 1 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.