ಹೊಸದಿಲ್ಲಿ : 12,600 ಕೋಟಿ ರೂ.ಗಳ ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು, ವಿದೇಶಕ್ಕೆ ಪಲಾಯನ ಗೊಂಡಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ, ಗೀತಾಂಜಲಿ ಜೆಮ್ಸ್ ಕಂಪೆನಿಯ ಮಾಲಕ ಮೆಹುಲ್ ಚೋಕ್ಸಿ ವಿರುದ್ಧ ಇಂಟರ್ ಪೋಲ್ ಅರೆಸ್ಟ್ ವಾರೆಂಟ್ ಕೋರಿದೆ.
2011ರ ಮಾರ್ಚ್ ತಿಂಗಳಿಂದಲೇ ಆರಂಭಗೊಂಡಿದ್ದ ಈ ವಂಚನೆ ಹಗರಣ ಈಗ 13,000 ಕೋಟಿ ರೂ. ಮೊತ್ತಕ್ಕೆ ಏರಿದ ಸಂದರ್ಭದಲ್ಲಿ ಕಳೆದ ತಿಂಗಳಲ್ಲಿ ಪಿಎನ್‌ಬಿ ದಾಖಲಿಸಿದ ದೂರಿನ ಮೂಲಕ ಬೆಳಕಿಗೆ ಬರುವ ಮುನ್ನವೇ ನೀರವ್ ಮೋದಿ ಜನವರಿ ಮೊದಲ ವಾರದಲ್ಲಿ ವಿದೇಶಕ್ಕೆ ಪಲಾಯನ ಮಾಡಿದ್ದರು.
46ರ ಹರೆಯದ ನೀರವ್ ಮೋದಿ ಭಾರತೀಯ ಪಾಸ್ ಪೋರ್ಟ್ ಹೊಂದಿದ್ದು ಜನವರಿ 1ರಂದೇ ಭಾರತದಿಂದ ಪಲಾಯನ ಮಾಡಿದ್ದಾರೆ. ಆತನ ಸಹೋದರ ನಿಶಾಲ್ ಬೆಲ್ಜಿಯನ್ ಪ್ರಜೆಯಾಗಿದ್ದು ಆತ ಅದೇ ದಿನ ದೇಶ ಬಿಟ್ಟು ಹೋಗಿದ್ದಾನೆ. ಇವರಿಬ್ಬರೂ ಜತೆಗೂಡಿಯೇ ವಿದೇಶಕ್ಕೆ ಪ್ರಯಾಣಿಸಿದರೇ ಇಲ್ಲವೇ ಎಂಬುದು ಈಗಿನ್ನು ತನಿಖೆಯಿಂದ ಗೊತ್ತಾಗಬೇಕಿದೆ.
ನೀರವ್ ಮೋದಿ ಪತ್ನಿ ಆಮಿ, ಅಮೆರಿಕನ್ ಪ್ರಜೆಯಾಗಿದ್ದು ಆಕೆ ಜನವರಿ 6ರಂದೇ ದೇಶ ಬಿಟ್ಟು ಹೋಗಿದ್ದಾರೆ. ನೀರವ್ ಚಿಕ್ಕಪ್ಪ ಮೆಹುಲ್ ಚೋಕ್ಸಿ ಜನವರಿ 4ರಂದು ದೇಶದಿಂದ ಪಲಾಯನ ಮಾಡಿದ್ದಾರೆ.