ಮೈಸೂರು: ಚಾಮುಂಡಿಬೆಟ್ಟ , ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 20 ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ ಭಕ್ತಾದಿಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಜೂನ್ 21 ರಂದು ಬೆಳಗ್ಗೆ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗಿಯಾಗಲು ಪ್ರಧಾನ ಮಂತ್ರಿಗಳು ಮೈಸೂರಿಗೆ ಆಗಮಿಸುತ್ತಿದ್ದು , 20 ರ ಸಂಜೆ ಚಾಮುಂಡೇಶ್ವರಿ ಆಮ್ಮನವರ ದರ್ಶನಾರ್ಥವಾಗಿ ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಭದ್ರತಾ ಹಿತದೃಷ್ಟಿಯಿಂದ ಮಧ್ಯಾಹ್ನ 12 ಘಂಟೆಯಿಂದ ರಾತ್ರಿ 9 ಘಂಟೆವರೆಗೆ ಸಾರ್ವಜನಿಕ ಮತ್ತು ಭಕ್ತಾದಿಗಳಿಗೆ ಚಾಮುಂಡಿಬೆಟ್ಟ ಹಾಗೂ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನಕ್ಕೆ ಷರತ್ತಿನೊಂದಿಗೆ ಪ್ರವೇಶವನ್ನು ನಿಷೇಧಿಸಿ ಆದೇಶಿಸಲಾಗಿದೆ.
ನಿಷೇಧಿತ ಅವದಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದನ್ನು ನಿಷೇಧಿಸಿದೆ. ಈ ಅವಧಿಯಲ್ಲಿ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಭಂಧಿಸಲಾಗಿದೆ.
ಚಾಮುಂಡಿಬೆಟ್ಟದ ಗ್ರಾಮಸ್ಥರು ನಿಷೇಧಿತ ಅವಧಿಯಲ್ಲಿ ಅನಿವಾರ್ಯ ಪ್ರಸಂಗವಿದ್ದಲ್ಲಿ , ಚಾಮುಂಡಿಬೆಟ್ಟದ ವಾಸಸ್ಥಳದ ಗುರುತಿನ ಚೀಟಿಯನ್ನು ಬಳಸಬೇಕು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಘೋಷಿಸಲ್ಪಟ್ಟ ಶಿಷ್ಟಾಚಾರ ವ್ಯವಸ್ಥೆ ಹೊಂದಿರುವ ಗಣ್ಯ ವ್ಯಕ್ತಿಗಳು , ಸರ್ಕಾರಿ ಕೆಲಸದ ನಿಮಿತ್ತ ತೆರಳುವ ಅಧಿಕಾರಿಗಳು ಮತ್ತು ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ವಾಹನಗಳ ಪ್ರವೇಶವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.