ಮುಂಬಯಿ: ‘ಸಿಂಧುದುರ್ಗದಲ್ಲಿ 35 ಅಡಿ ಎತ್ತರದ ಶಿವಾಜಿ ಪ್ರತಿಮೆ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ( Narendra Modi) ಕ್ಷಮೆಯಾಚನೆಯು ಅವರ ದುರಹಂಕಾರಕ್ಕೆ ಹೊಡೆತ. ಮಹಾರಾಷ್ಟ್ರದ ಜನರು ದುರಹಂಕಾರವನ್ನು ತಿರಸ್ಕರಿಸಿದ್ದಾರೆ” ಎಂದು ರವಿವಾರ(ಸೆ1) ಶಿವಸೇನೆ (UBT)ನಾಯಕ, ಮಾಜಿ ಸಿಎಂ ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ.
ಮಹಾ ವಿಕಾಸ್ ಅಘಾಡಿಯ “ಜೋಡೆ ಮಾರೋ”(ಚಪ್ಪಲಿಗಳಿಂದ ಹೊಡೆಯಿರಿ) ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಠಾಕ್ರೆ ”ಮರಾಠ ದೊರೆಯ ಪ್ರತಿಮೆ ಕುಸಿತ, ಅಯೋಧ್ಯೆಯ ರಾಮ ಮಂದಿರ ಮತ್ತು ನೂತನ ಸಂಸತ್ತಿನ ಸಂಕೀರ್ಣದಲ್ಲಿ ನೀರು ಸೋರಿಕೆ ವಿಚಾರಗಳನ್ನು ಪ್ರಸ್ತಾವಿಸಿ ಕಿಡಿ ಕಾರಿದರು.
”ಎಂಟು ತಿಂಗಳ ಹಿಂದೆ ಉದ್ಘಾಟಿಸಿದ ಪ್ರತಿಮೆ ಕುಸಿತಕ್ಕೆ ಪ್ರಧಾನಿ ಕ್ಷಮೆಯಾಚಿಸಿದ್ದು ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿಯೇ? ಶಿವಾಜಿ ಮಹಾರಾಜರನ್ನು ಅವಮಾನಿಸಿದ ಶಕ್ತಿಗಳನ್ನು ಸೋಲಿಸಲು ಎಂವಿಎ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು. ಪ್ರತಿಮೆ ಕುಸಿತವು ಮಹಾರಾಷ್ಟ್ರದ ಆತ್ಮಕ್ಕೆ ಮಾಡಿದ ಅವಮಾನ” ಎಂದು ಕಿಡಿ ಕಾರಿದರು.
INDIA bloc ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಶರದ್ ಪವಾರ್ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ ಪಾಲ್ಗೊಂಡಿದ್ದರು.ಪ್ರತಿಭಟನಾ ಮೆರವಣಿಗೆ ಹುತಾತ್ಮ ಚೌಕ್‌ನಿಂದ ಆರಂಭಗೊಂಡು ಗೇಟ್‌ವೇ ಆಫ್ ಇಂಡಿಯಾ ತಲುಪಿತು.
ಚಪ್ಪಲಿ ಸೇವೆ
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ ನಡೆಸಲಾಯಿತು.