ಇಸ್ಲಾಮಾಬಾದ್: 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ನ ರಾಜಕೀಯ ಪಕ್ಷವಾದ ಪಾಕಿಸ್ತಾನ್ ಮರ್ಕಝೈ ಮುಸ್ಲಿಮ್ ಲೀಗ್ (PMML) ಪಾಕಿಸ್ತಾನದ ಸಂಸತ್ ಹಾಗೂ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದೆ.
ಇದನ್ನೂ ಓದಿ:Ayodhya ಶ್ರೀ ರಾಮ ಪ್ರಾಣ ಪ್ರತಿಷ್ಠೆ: ಹೆಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಆಹ್ವಾನ
ಮಿಲ್ಲಿ ಲೀಗ್ ಪಕ್ಷವನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿತ್ತು. ಬಳಿಕ ಪಿಎಂಎಂಎಲ್ ಹೆಸರಿನಲ್ಲಿ ಸಯೀದ್ ಪಕ್ಷವನ್ನು ಹುಟ್ಟುಹಾಕಿದ್ದ. ಮುಂಬರುವ ಚುನಾವಣೆಯಲ್ಲಿ ಹಫೀಜ್ ಸಯೀದ್ ಪುತ್ರ ತಲ್ಹಾ ಸಯೀದ್, ಪಕ್ಷದ ಅಧ್ಯಕ್ಷ ಖಾಲಿದ್ ಮಸೂದ್ ಸಿಂಧು ಸೇರಿದಂತೆ ದೇಶಾದ್ಯಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದೆ.
ತಲ್ಹಾ ಸಯೀದ್ ಲಷ್ಕರ್ ಎ ತೊಯ್ಬಾದ ಹಿರಿಯ ಮುಖಂಡ ಹಾಗೂ ಭಯೋತ್ಪಾದಕ ಸಂಘಟನೆಯ ಮೌಲ್ವಿ ಘಟಕದ ಮುಖ್ಯಸ್ಥನಾಗಿದ್ದಾನೆ ಎಂದು ವರದಿ ವಿವರಿಸಿದೆ. ತಲ್ಹಾ ಮುಂಬರುವ ಸಂಸತ್ ಚುನಾವಣೆಯ ಎನ್ ಎ 127 ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾನೆ.
ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪಿಎಂಎಂಎಲ್ ಪಕ್ಷದ ಮುಖ್ಯಸ್ಥ ಖಾಲಿದ್ ಮಸೂದ್ ಸಿಂಧು ಸ್ಪರ್ಧಿಸಲಿದ್ದಾನೆ ಎಂದು ವರದಿ ತಿಳಿಸಿದೆ.
ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಉಗ್ರ ಹಫೀಜ್ ಸಯೀದ್ ಗೆ ಲಾಹೋರ್ ವಿಶೇಷ ಭಯೋತ್ಪಾದಕ ನಿಗ್ರಹ ಕೋರ್ಟ್ 2019ರ ಜುಲೈ 17ರಂದು 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಸಯೀದ್ 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದು, ಈ ಘಟನೆಯಲ್ಲಿ 166 ಮಂದಿ ಸಾವನ್ನಪ್ಪಿದ್ದರು.