ಬೆಂಗಳೂರು:ನಾನು ಭಾರತದ ರಾಷ್ಟ್ರಪತಿಯಾಗಬೇಕು ಎಂಬುದು ನನ್ನ ಕನಸು…ರಾಷ್ಟ್ರಪತಿ ಹುದ್ದೆಗೇರಲು ನನಗೆ ನಿಮ್ಮಿಂದ ಸಲಹೆ ಬೇಕಾಗಿದೆ…ಇದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಿದ ಪ್ರಶ್ನೆಯಾಗಿತ್ತು.
ಇಡೀ ಜಗತ್ತೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವುದನ್ನು ಕಣ್ಣಾರೆ ಕಣ್ತುಂಬಿಕೊಳ್ಳಲು ಇಸ್ರೋ ಕೇಂದ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗದಿಂದ ಆಗಮಿಸಿದ್ದ 70 ವಿದ್ಯಾರ್ಥಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಸಂವಹನ ನಡೆಸಿದ್ದರು. ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ವಿದ್ಯಾರ್ಥಿಗಳ ಬಳಿ ತೆರಳಿ, ಜೀವನದಲ್ಲಿ ಯಾವತ್ತೂ ಎದುರಾಗುವ ಹಿನ್ನಡೆಯಿಂದ ಭರವಸೆ ಕಳೆದುಕೊಳ್ಳಬಾರದು. ಇನ್ನಷ್ಟು ಶ್ರಮವಹಿಸುವ ಮೂಲಕ ಫಲಿತಾಂಶ ಪಡೆಯಬೇಕು ಎಂದು ಕಿವಿಮಾತು ಹೇಳಿದ್ದರು.
ಈ ವೇಳೆ ವಿದ್ಯಾರ್ಥಿಯೊಬ್ಬ, ಸರ್..ನಾನು ಮುಂದೆ ಭಾರತದ ರಾಷ್ಟ್ರಪತಿಯಾಗಬೇಕೆಂಬ ಗುರಿ ಹೊಂದಿದ್ದೇನೆ. ಇದಕ್ಕಾಗಿ ನಾನು ಏನು ಮಾಡಬೇಕು ಎಂದು ಕೇಳಿದ್ದ. ಅದಕ್ಕೆ ಪ್ರಧಾನಿ, ಯಾಕೆ ರಾಷ್ಟ್ರಪತಿಯಾಗಬೇಕು, ಪ್ರಧಾನಿ ಮಂತ್ರಿ ಯಾಕಾಗಬಾರದು ಎಂದು ನಗುತ್ತ ಉತ್ತರಿಸಿದ್ದರು.
ಪ್ರಧಾನಿ ಜತೆ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳ ಸ್ಪರ್ಶಿಸುವ ಕ್ಷಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕುಳಿತು ವೀಕ್ಷಿಸಲು 70 ವಿದ್ಯಾರ್ಥಿಗಳು ಅವಕಾಶ ಪಡೆದಿದ್ದರು. ವಿದ್ಯಾರ್ಥಿಗಳು ಪ್ರಧಾನಿ ಮೋದಿ ಅವರನ್ನು ಸುತ್ತುವರೆದು ಚಂದ್ರಯಾನದ ಕುರಿತ ವಿಚಾರಧಾರೆಯನ್ನು ಹಂಚಿಕೊಂಡರು.
ನೀವು ಮನೆಗೆ ಹೋದ ಮೇಲೆ ಜನರಿಗೆ ಚಂದ್ರಯಾನ 2ರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಧಾನಿ ವಿದ್ಯಾರ್ಥಿನಿಯೊಬ್ಬಳನ್ನು ಪ್ರಶ್ನಿಸಿದ್ದರು. ಅದಕ್ಕೆ ವಿದ್ಯಾರ್ಥಿನಿ, ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿರುವುದಾಗಿ ಹೇಳುತ್ತೇನೆ ಎಂದಿದ್ದಳು.
ಚೆನ್ನಾಗಿ ಓದಿ, ಕಠಿಣ ಪರಿಶ್ರಮದ ಮೂಲಕ ವಿಶ್ವಾಸದೊಂದಿಗೆ ಜೀವನದಲ್ಲಿ ಸಾಧನೆಯ ಗುರಿ ತಲುಪಬೇಕು ಎಂದು ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜತೆಗಿನ ಸಂವಹನದ ವೇಳೆ ಸಲಹೆ ನೀಡಿದರು.