Advertisement

150 ಮಂದಿ ವಿರುದ್ಧ ಎಫ್ಐಆರ್‌; ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ

12:11 AM Jan 08, 2022 | Team Udayavani |

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್‌ ಭೇಟಿ ವೇಳೆ ನಡೆದಿರುವ ಭದ್ರತಾ ಲೋಪ ಪ್ರಕರಣ ಸಂಬಂಧ 150 ಅನಾಮಿಕರ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

Advertisement

ಪಂಜಾಬ್‌ ಪೊಲೀಸರೇ  ಈ ಎಫ್ಐಆರ್‌ ದಾಖಲಿಸಿದ್ದು, ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ವಿಚಿತ್ರವೆಂದರೆ ಐಪಿಸಿ ಸೆಕ್ಷನ್‌ 283ರಂತೆ ದೂರು ದಾಖಲಾಗಿದ್ದು, ಇದರಲ್ಲಿ ತಪ್ಪಿತಸ್ಥರಾದವರಿಗೆ ಗರಿಷ್ಠ 200 ರೂ.ವರೆಗೆ ದಂಡ ವಿಧಿಸಬಹುದಾಗಿದೆ.

ಇನ್ನೊಂದೆಡೆ ಕೇಂದ್ರ ಸರಕಾರ ನೇಮಕ ಮಾಡಿರುವ ಕೇಂದ್ರ ತಂಡ ಪಂಜಾಬ್‌ನ ಫಿರೋಜ್‌ಪುರಕ್ಕೆ ತೆರಳಿದ್ದು, ಘಟನಾ ಸ್ಥಳ ಪರಿಶೀಲಿಸಿದೆ. ಇದರ ಮಧ್ಯೆಯೇ ಪಂಜಾಬ್‌ ಸರಕಾರ ನೇಮಕ ಮಾಡಿದ್ದ ಸಮಿತಿಯೂ ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಿದ್ದು, ಪ್ರಕರಣ ಸಂಬಂಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಹೇಳಿದೆ.

ಕೇಂದ್ರ ತಂಡವು ಶುಕ್ರವಾರ ಫಿರೋಜ್‌ಪುರದಲ್ಲಿನ ಫ್ಲೈಓವರ್‌ ಬಳಿ ತೆರಳಿ 45 ನಿಮಿಷಗಳ ಕಾಲ ಪರಿಶೀಲನೆ ನಡೆಸಿದೆ. ಬಳಿಕ ಈ ತಂಡ ಬಿಎಸ್‌ಎಫ್ ಸೆಕ್ಟರ್‌ ಮುಖ್ಯ ಕಚೇರಿಗೆ ತೆರಳಿತು. ಈ ಜಾಗದಿಂದ ಬಿಎಸ್‌ಎಫ್ ಮುಖ್ಯ ಕಚೇರಿ 10 ಕಿ.ಮೀ. ದೂರದಲ್ಲಿದ್ದು, ಬುಧವಾರ ನಡೆದ ಘಟನೆ ಬಗ್ಗೆ ವಿವರ ಕಲೆಹಾಕಿದೆ. ಅಲ್ಲದೆ, ಪಂಜಾಬ್‌ ಡಿಜಿಪಿ ಸೇರಿದಂತೆ 12 ಹಿರಿಯ ಅಧಿಕಾರಿಗಳು ಪ್ರಧಾನಿ ಅವರ ಭದ್ರತೆಯ ಹೊಣೆ ಹೊತ್ತಿದ್ದರು. ಹೀಗಾಗಿ ಇವರಿಗೆ ಕೇಂದ್ರ ತಂಡದ ಮುಂದೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಆದರೆ, ಪೊಲೀಸ್‌ ಮಹಾನಿರ್ದೇಶಕ ಸಿದ್ಧಾರ್ಥ ಚಟ್ಟೋಪಾಧ್ಯಾಯ ಅವರು ವಿಚಾರಣೆಗೆ ಹಾಜರಾಗಲಿಲ್ಲ. 24 ಗಂಟೆಗಳಲ್ಲಿ ಹಾಜರಾಗಿ ಮಾಹಿತಿ ನೀಡುವಂತೆ ಕೇಂದ್ರ ಸರಕಾರ ಅವರಿಗೆ ಸೂಚನೆ ನೀಡಿದೆ.

ಇದನ್ನೂ ಓದಿ:ವಿದೇಶದಿಂದ ಬರುವವರಿಗೆ 7 ದಿನ ಕ್ವಾರಂಟೈನ್‌ ಕಡ್ಡಾಯ

Advertisement

ಸುರಕ್ಷಿತ ವಾಗಿರಿಸಿ: ಭದ್ರತಾ ಲೋಪ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್‌ ಕೂಡ ಶುಕ್ರವಾರ ವಿಚಾರಣೆ ನಡೆಸಿದ್ದು, ಪ್ರಧಾನಿ ಅವರ ಟ್ರಾವೆಲ್‌ ಹಿಸ್ಟರಿಯನ್ನು ಸುರಕ್ಷಿತವಾಗಿ ಇರಿಸುವಂತೆ ಸೂಚಿಸಿದೆ. ಪಂಜಾಬ್‌ ಪೊಲೀಸರು, ಎಸ್‌ಪಿಜಿ, ಕೇಂದ್ರ ಮತ್ತು ರಾಜ್ಯದ ತನಿಖಾ ತಂಡಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು, ರಿಜಿಸ್ಟ್ರಾರ್‌ ಜನರಲ್‌ಗೆ ಸೂಕ್ತ ನೆರವು ನೀಡುವಂತೆ ಆದೇಶಿಸಿದೆ. ಅಂದರೆ ಅಂದಿನ ಘಟನೆಯ ಎಲ್ಲ ದಾಖಲೆಗಳನ್ನು ಸಂಗ್ರಹಿಸಲು ಆರ್‌ಜಿಗೆ ನೆರವು ನೀಡಬೇಕು ಎಂದಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪಂಜಾಬ್‌ನಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರಕಾರ ಸಂಚು ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಚನ್ನಿ ಆರೋಪಿಸಿದ್ದಾರೆ.

ಅಪಾಯದ ಸ್ಥಳದಲ್ಲಿದ್ದರು..
ಪ್ರಧಾನಿ  ಮೋದಿ ಅವರು ಬುಧವಾರ 20 ನಿಮಿಷಗಳ ಕಾಲ ಕಾದ ಸ್ಥಳ ಪಾಕಿಸ್ಥಾನದಿಂದ ಕೇವಲ 10 ಕಿ.ಮೀ.ದೂರದಲ್ಲಿದ್ದು, ಅವರು ಅತ್ಯಂತ ಅಪಾಯದ ಸ್ಥಳದಲ್ಲಿದ್ದರು ಎಂದು ಕಾಂಗ್ರೆಸ್‌ ನಾಯಕ ಮನೀಶ್‌ ತಿವಾರಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪ್ರಧಾನಿಗೆ ಜೀವ ಭಯವಿರಲಿಲ್ಲ ಎಂದ ಪಂಜಾಬ್‌ ಮುಖ್ಯಮಂತ್ರಿ ಮತ್ತು ತಮ್ಮದೇ ಪಕ್ಷದ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ತಿರುಗೇಟು ನೀಡಿದ್ದಾರೆ. ಅಂದು ಪ್ರಧಾನಿಯವರು ಪಾಕಿಸ್ಥಾನದ ಶೂಟಿಂಗ್‌ ರೇಂಜ್‌ನ ಒಳಗೇ ಇದ್ದರು. ಅವರಿಗೆ ಜೀವಭಯವಿರಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅಲ್ಲದೆ ಅಂದು ಅಲ್ಲಿ ಇದ್ದವರು ಪ್ರಧಾನಿಗಳು. ಬೇರಾರೂ ಅಲ್ಲ ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next